ಕರ್ನಾಟಕ

ಮರು ಬಳಕೆಯ ನೀರಿಗೆ ಆದ್ಯತೆ: ಉದ್ಯಮಿಗಳಿಗೆ ಕರೆ

Pinterest LinkedIn Tumblr

11a3fiಬೆಂಗಳೂರು, ಫೆ.೧೧- ಕೈಗಾರಿಕೆಗಳು ಹಾಗೂ ಕಟ್ಟಡ ನಿರ್ಮಾಣ ಕೈಗಾರಿಕೆಗಳು ಮರು ಬಳಕೆಯ ನೀರನ್ನು ಬಳಸುವ ಮೂಲಕ ನೀರಿನ ಮೇಲಿನ ಒತ್ತಡ ಕಡಿಮೆ ಮಾಡಬೇಕು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಟಿ.ಎಂ. ವಿಜಯ ಭಾಸ್ಕರ್ ಮನವಿ ಮಾಡಿದ್ದಾರೆ.

ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ನಗರದಲ್ಲಿ ಇಂದು ಏರ್ಪಡಿಸಿದ್ದ “ಸುಸ್ಥಿರ ನೀರು ನಿರ್ವಹಣೆಯಲ್ಲಿ ಕೈಗಾರಿಕೆ, ಸರ್ಕಾರ ಮತ್ತು ಸಮುದಾಯಗಳ ಪಾತ್ರ” ಕುರಿತ ವಾರ್ಷಿಕ ನೀರು ಸಮಾವೇಶದಲ್ಲಿ ಅವರು ಮಾತನಾಡಿದರು.

ನೀರಿನ ಮೂಲ ನಾಶ
ಕೈಗಾರಿಕೆಗಳಿಗೆ ಹೆಚ್ಚಿನ ನೀರು ಅಗತ್ಯ. ಎಲ್ಲರೂ ಬೋರ್‌ವೆಲ್ ಮೂಲಕ ನೀರು ಪಡೆದರೆ ನೀರಿನ ಮೂಲ ನಾಶವಾಗುವ ಸಂಭವವಿದೆ. ಆದ್ದರಿಂದ ಮರುಬಳಕೆಯ ನೀರನ್ನು ಕೈಗಾರಿಕೆಗಳಿಗೆ ಬಳಸಬೇಕಿದೆ. ಈ ನಿಟ್ಟಿನಲ್ಲಿ ಕ್ರೆಡಾಯ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ್ದು, ಕೆಲವೊಂದು ನಿಯಮಗಳ ಸರಳೀಕರಣಕ್ಕೆ ಅವರು ಕೋರಿದ್ದಾರೆ. ಶೀಘ್ರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೆಂಗಳೂರಿಗೆ ಶೇಕಡಾ ೯೦ರಷ್ಟು ನೀರು ಕಾವೇರಿ ನದಿಯಿಂದ ಬರುತ್ತದೆ. ಆದರೆ ಹವಾಮಾನ ಬದಲಾವಣೆ, ಸಕಾಲಕ್ಕೆ ಮಳೆ ಬಾರದಿರುವುದು ಮುಂತಾದ ಸಮಸ್ಯೆಗಳಿಂದ ಕೆಲವು ಋತುಮಾನಗಳಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಅದಕ್ಕಾಗಿ ಉಪಯೋಗಿಸಿದ ನೀರಿನ ಮರುಬಳಕೆ, ಮಳೆ ನೀರು ಕೊಯ್ಲು ಮುಂತಾದ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ನಗರದ ೬೫ ಸಾವಿರ ಮನೆಗಳಲ್ಲಿ ಮಳೆ ನೀರು ಕೊಯ್ಲು ಯೋಜನೆಯನ್ನು ಅಳವಡಿಸಲಾಗಿದೆ. ಇನ್ನು ಸಾವಿರಾರು ಮನೆಗಳು ಈ ಯೋಜನೆಯನ್ನು ಅನುಷ್ಠಾನ ಮಾಡಿಲ್ಲ. ಇದಕ್ಕಾಗಿ ಇಂತಹ ಮನೆಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದ್ದು, ಪ್ರಥಮ ಹಂತದಲ್ಲಿ ಅವರ ನೀರಿನ ಬಿಲ್‌ನ ಶೇಕಡಾ ೨೫ರಷ್ಟು ಹಾಗು ಮೂರು ತಿಂಗಳುಗಳ ಬಳಿಕ ಶೇಕಡಾ ೫೦ರಷ್ಟು ದಂಡ ವಿಧಿಸಲಾಗುವುದು. ಜೇಬಿನಿಂದ ದಂಡ ಕಟ್ಟಿದರೆ ಮಾತ್ರ ಯೋಜನೆಯ ಬಗ್ಗೆ ಅರಿವು ಜಾಗೃತಿ ಉಂಟಾಗುತ್ತದೆ ಎಂದು ಹೇಳಿದರು.

ಉತ್ತರದಲ್ಲಿ ಅಧಿಕ ಒತ್ತಡ
ಕಾವೇರಿ ನೀರಿನ ಜಾಲ ಎಲ್ಲವೂ ಬೆಂಗಳೂರು ದಕ್ಷಿಣದಲ್ಲಿರುವುದರಿಂದ ಬೆಂಗಳೂರು ಉತ್ತರದಲ್ಲಿ ನೀರಿನ ಒತ್ತಡ ಜಾಸ್ತಿಯಿದೆ. ಕಾವೇರಿ ೫ನೇ ಹಂತದ ಮೂಲಕ ಪ್ರತಿದಿನ ೭೫೦ ದಶಲಕ್ಷ ಹೆಚ್ಚುವರಿ ನೀರು ಪೂರೈಸುವ ಸಂಬಂಧ ಈಗಾಗಲೇ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿದೆ. ಯೋಜನೆಗೆ ೩೨೦೦ ಕೋಟಿ ರೂ.ಅಗತ್ಯವಿದ್ದು, ಸರ್ಕಾರ ಶೀಘ್ರವೇ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ ವಿಜಯಭಾಸ್ಕರ್, ಹೆಬ್ಬಾಳ, ಯಲಹಂಕ ಮುಂತಾದ ಕಡೆಗಳಲ್ಲಿ ಮಳೆ ನೀರನ್ನು ಸಂಗ್ರಹಿಸಿ ಅಲ್ಲಿನ ಜನರಿಗೆ ಪೂರೈಸುವ ಕುರಿತು ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಸಿಂಗಾಪುರ ಸಂಸ್ಥೆಗೆ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.

ಸಹಾಯವಾಣಿ ಸಂಖ್ಯೆ ೧೯೧೬
ಬೆಂಗಳೂರಿನಲ್ಲಿ ಶೇಕಡಾ ೪೬ರಷ್ಟು ನೀರು ಪೋಲಾಗುತ್ತಿದ್ದು, ಈ ನಷ್ಟವನ್ನು ಶೇಕಡಾ ೧೬ಕ್ಕೆ ಇಳಿಸುವ ಗುರಿ ಹೊಂದಲಾಗಿದೆ ಆದರೆ ಇದು ಕಷ್ಟ ಸಾಧ್ಯ. ಆದರೂ ಕನಿಷ್ಠ ಶೇಕಡಾ ೨೫ಕ್ಕೆ ಇಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಇದಕ್ಕಾಗಿ ಮೊದಲ ಹಂತದಲ್ಲಿ ಬೆಂಗಳೂರು ದಕ್ಷಿಣದಲ್ಲಿರುವ ಎಲ್ಲಾ ತುಕ್ಕು ಹಿಡಿದ ಪೈಪ್‌ಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ಹೊಸ ಮೀಟರ್ ಅಳವಡಿಕೆ, ಬಲ್ಕ್ ಮೀಟರ್ ಜೋಡಣೆಗೂ ಕ್ರಮಕೈಗೊಳ್ಳಲಾಗಿದೆ. ನಗರದ ಯಾವುದೇ ಕಡೆ ನೀರಿನ ಪೋಲು ಕಂಡು ಬಂದರೆ ತಕ್ಷಣ ಕಾರ್ಯಪವೃತ್ತರಾಗಲು ೨೨೨೩೮೮೮೮ ಎಂಬ ಸಹಾಯವಾಣಿ ಆರಂಭಿಸಲಾಗಿದೆ. ಒಂದು ವಾರದಲ್ಲಿ ಇದನ್ನು ೧೯೧೬ ಸಂಖ್ಯೆಗೆ ಬದಲಾಯಿಸಲಾಗುವುದು. ಸಾರ್ವಜನಿಕರು ನೀರು ಪೋಲು ಮತ್ತು ಒಳಚರಂಡಿ ಸಮಸ್ಯೆಗಳಿಗೆ ಈ ಸಂಖ್ಯೆಗೆ ಕರೆ ಮಾಡಬಹುದು ಎಂದು ವಿವರಿಸಿದರು.

ಬರಿ ೬೦೦ ದಶಲಕ್ಷ ಲೀಟರ್
ಬೆಂಗಳೂರಿಗೆ ಪ್ರತಿದಿನ ೧೬೫೦ ದಶಲಕ್ಷ ಲೀಟರ್ ಪೂರೈಕೆಯಾಗುತ್ತಿದೆ. ಅದರಲ್ಲಿ ೧೩೦೦ ದಶಲಕ್ಷ ಲೀಟರ್ ಮತ್ತೆ ಒಳಚರಂಡಿ ಮೂಲಕ ಹೊರಬರುತ್ತಿದೆ. ಆದರೆ ಕೇವಲ ೬೦೦ ದಶಲಕ್ಷ ಲೀಟರ್ ನೀರನ್ನು ಮಾತ್ರ ಶುದ್ಧೀಕರಿಸುವ ವ್ಯವಸ್ಥೆ ನಮ್ಮಲ್ಲಿದೆ. ಅದಕ್ಕಾಗಿ ಹೆಚ್ಚುವರಿಯಾಗಿ ೫೦೦ ದಶಲಕ್ಷ ಲೀಟರ್ ಶುದ್ಧೀಕರಣ ಘಟಕ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದ್ದು, ಈ ವರ್ಷಾಂತ್ಯಕ್ಕೆ ಈ ಘಟಕ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಸುಸ್ಥಿರ ನೀರಿನ ನಿರ್ವಹಣೆಯಲ್ಲಿ ಸಮುದಾಯ ಉದ್ಯಮಿಗಳ ಪಾತ್ರ ಅಪಾರ .ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು ಎಂಬುದು ಸರ್ಕಾರದ ಉದ್ದೇಶ. ಇದಕ್ಕಾಗಿ ರಾಜ್ಯಸರ್ಕಾರ ಮುಂದಿನ ಮೂರು ವರ್ಷಗಳಲ್ಲಿ ೧೦ ಸಾವಿರ ಕೋಟಿ ರೂ. ಖರ್ಚು ಮಾಡಲಿದೆ. ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿಐಐ ಉಪಾಧ್ಯಕ್ಷ ರವಿ ರಾಘವನ್, ಸಿಐಐ ಸಂಚಾಲಕ ಹರಿಪ್ರಸಾದ್ ಹೆಗ್ಡೆ, ಜರ್ಮನಿಯ ಕೌನ್ಸಲ್ ಜನರಲ್ ಜಾನ್ ರೋಡ್, ಮೊಯಿನುದ್ದೀನ್ ಮತ್ತಿತರರು ಹಾಜರಿದ್ದರು.

Write A Comment