ಬೆಂಗಳೂರು: ಇತ್ತೀಚಿನ ಯಾವುದೇ ಸಿನೆಮಾ ಆಗಲಿ, ಸಾಧು ಕೋಕಿಲಾ ತೆರೆಗೆ ಆಗಮಿಸುತ್ತಿದ್ದಂತೆ, ಹೀರೋಗೆ ಬೀಳುವ ಶಿಳ್ಳೆ, ಚಪ್ಪಾಳೆಗಿಂತಲೂ ಒಂದು ಕೈ ಮುಂದೆ ಇರುತ್ತಾರೆ. ಕನ್ನಡ ಚಿತ್ರರಂಗ ನೂತನ ಹಾಸ್ಯ ಚಕ್ರವರ್ತಿ ಎಂದೇ ಪ್ರಖ್ಯಾತರಾದರು, ನಿರ್ದೇಶನದ ವಿಷಯಕ್ಕೆ ಬಂದಾಗ ಇದು ತಮಾಷೆಯ ವಿಷಯವಲ್ಲ ಎನ್ನುತ್ತಾರೆ. ಈಗಾಗಲೇ ೮ ಚಿತ್ರಗಳನ್ನು ನಿರ್ದೇಶಿಸಿ, ೩೦ ಚಿತ್ರಗಳಿಗೆ ಸಂಗೀತ ನೀಡಿರುವ ಸಾಧು, ನಿರ್ದೇಶನದ ವಿಷಯ ಬಂದಾಗ ತಮ್ಮ ಹಾಸ್ಯ ಪ್ರವೃತ್ತಿಯನ್ನು ಗಂಭೀರತೆಗೆ ಬದಲಿಸಿಕೊಂಡುಬಿಡುತ್ತಾರೆ.
ಈಗ ಸಾಧು ನಿರ್ದೇಶನದ ‘ಭಲೇ ಜೋಡಿ’ ಮುಂದಿನ ವಾರ ತೆರೆಗೆ ಬರಲು ಸಿದ್ಧವಿದ್ದು “ನಿರ್ದೇಶನ ತಮಾಷೆಯಲ್ಲ. ಒಳ್ಳೆಯ ಸಿನೆಮಾ ತೆಗೆಯಲು ನಾನು ಗಂಭೀರನಾಗಿಬಿಡುತ್ತೇನೆ” ಎನ್ನುತ್ತಾರೆ ಸಾಧು.
“ನಿರ್ದೇಶಕ ಹಡಗಿನ ನಾಯಕನಿದ್ದಂತೆ. ಅವನು ಇಡಿ ಚಿತ್ರ ತಂಡವನ್ನು ಮುನ್ನಡೆಸಬೇಕು” ಎನ್ನುವ ಸಾಧು, ತಮ್ಮ ನಿರ್ದೇಶನದ ಗೆಲುವಿಗೆ ಅವರ ಗುರು ಉಪೇಂದ್ರ ಅವರೇ ಕಾರಣ ಎನ್ನುತ್ತಾರೆ. “ಉಪೇಂದ್ರ ಅವರ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸುತ್ತೇನೆ. ನಿರ್ದೇಶಕ ಯಾರನ್ನೂ ನಂಬಬಾರದು, ಸರಿಯಾದ ಸಮಯಕ್ಕೆ ಯೋಜನೆ ಪೂರ್ಣಗೊಳಿಸಲು ಕಸ ಗುಡಿಸುವುದಕ್ಕೂ ಸಿದ್ಧನಿರಬೇಕು ಎಂದು ಅವರು ಒಮ್ಮೆ ಹೇಳಿದ್ದರು” ಎಂದು ನೆನಪಿಸಿಕೊಳ್ಳುತ್ತಾರೆ ಸಾಧು.
ತೆಲುಗು ಸಿನೆಮಾ ‘ಅಲ ಮೊದಲೈಂದಿ’ ಸಿನೆಮಾದ ರಿಮೇಕ್ ಆದ ‘ಭಲೇ ಜೋಡಿ’ ಬಗ್ಗೆ ಮಾತನಾಡುವ ಸಾಧು “ಇದು ಆಸಕ್ತಿದಾಯಕ ರೊಮ್ಯಾಂಟಿಕ್ ಕಾಮಿಡಿ. ಈ ಚಿತ್ರದಲ್ಲಿ ಸುಮಂತ್ ಶೈಲೇಂದ್ರ ಮತ್ತು ಶಾನ್ವಿ ಶ್ರೀವಾಸ್ತವ ಮುಖ್ಯ ಭೂಮಿಕೆಯಲ್ಲಿದ್ದಾರೆ” ಎಂದು ತಿಳಿಸುತ್ತಾರೆ.