ಹನೂರು: ಜಿಲ್ಲೆಯ ಪ್ರಸಿದ್ಧ ಧಾರ್ವಿುಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು.
ಭಾನುವಾರ ರಾತ್ರಿ ಸ್ವಾಮಿಗೆ ಎಣ್ಣೆಮಜ್ಜನ ಸೇವೆ ಸಲ್ಲಿಸಲಾಯಿತಲ್ಲದೆ, ವಿವಿಧ ಉತ್ಸವ ನಡೆದವು. ಸೋಮವಾರ ಬೆಳಗ್ಗೆ ದೇಗುಲದಲ್ಲಿ ಮಹದೇಶ್ವರನಿಗೆ ವಿಶೇಷ ಪೂಜೆ, ಬಿಲ್ವಾರ್ಚನೆ ಸೇವೆ, ಬೆಳಗ್ಗೆಯಿಂದ ಸಂಜೆವರೆಗೆ ಪೂಜೆ ಪುನಸ್ಕಾರಗಳು ಜರುಗಿದವು.
ಹುಲಿವಾಹನ, ರುದ್ರಾಕ್ಷಿವಾಹನ ಹಾಗೂ ಬಸವ ವಾಹನವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಹರಕೆಹೊತ್ತ ಭಕ್ತರು ಈ ಮೂರು ವಾಹನಗಳ ಉತ್ಸವ ನೆರವೇರಿಸಿದರು. ಉತ್ಸವವು ದೇಗುಲದ ಸುತ್ತ ಮೆರವಣಿಗೆ ಹೊರಟಿತು. ಈ ವೇಳೆ ಭಕ್ತರು ಹಣ್ಣುಕಾಯಿ ನೀಡಿ ಪೂಜೆ ಸಲ್ಲಿಸಿದರೆ, ಹರಕೆ ಹೊತ್ತ ಭಕ್ತರು ದವಸ ಧಾನ್ಯ, ಹಣ ಸೇರದಂತೆ ಇನ್ನಿತರ ವಸ್ತುಗಳನ್ನು ಎಸೆದರು.
ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಅಂತರಗಂಗೆಯಲ್ಲಿ ಪುಣ್ಯಸ್ನಾನ ಮಾಡಿ ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಆಲಂಬಾಡಿ ಬಸವನಿಗೂ ಪೂಜೆ ಸಲ್ಲಿಸಿದರು. ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ದೇವಸ್ಥಾನದ ಸುತ್ತ ಕಸ ತೆಗೆಯುವ ಸೇವೆ ನಿರಂತರವಾಗಿ ನಡೆಯಿತು.