ಕರ್ನಾಟಕ

ಶಾಲೆಗೆ ನುಗ್ಗಿದ ಚಿರತೆಗೆ ಕೋರೆ ಹಲ್ಲಿರಲಿಲ್ಲ

Pinterest LinkedIn Tumblr

chirate.fiಬೆಂಗಳೂರು: ವಿಬ್​ಗಯಾರ್ ಶಾಲೆಯ ಆವರಣ ಪ್ರವೇಶಿಸಿ ಬೆಂಗಳೂರಿನ ಜನತೆಯಲ್ಲಿ ಆತಂಕ ಹುಟ್ಟಿಸಿದ್ದ ಚಿರತೆಯ ಜತೆಗೆ ಅಷ್ಟು ಹತ್ತಿರದ ಕಾಳಗದ ಬಳಿಕವೂ ವನ್ಯಜೀವಿ ತಜ್ಞ ಸಂಜಯ ಗುಬ್ಬಿ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದರೆ, ಚಿರತೆಗೆ ಎರಡೂ ಕೋರೆ ಹಲ್ಲುಗಳು ಇಲ್ಲದಿರುವುದೇ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.

ಶಾಲೆಯ ಆವರಣದಲ್ಲಿ ಚಿರತೆಯನ್ನು ಹಿಡಿಯುವ ಪ್ರಯತ್ನದಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ. ಅದರಲ್ಲೂ ಸಂಜಯ ಗುಬ್ಬಿ ಅತ್ಯಂತ ಹತ್ತಿರದಲ್ಲಿ ಚಿರತೆಯನ್ನು ಎದುರಿಸಿದ್ದರು. ಸಾಮಾನ್ಯವಾಗಿ ಇಷ್ಟು ಸಮೀಪದಿಂದ ಯಾವುದೇ ವನ್ಯಜೀವಿಯನ್ನು ಎದುರಿಸಿ ದರೆ ಅದರ ಹರಿತವಾದ ಕೋರೆ ಹಲ್ಲುಗಳಿಂದ ಬದುಕು ಳಿಯುವುದೇ ಕಷ್ಟ. ಆದರೆ, ವಿಬ್​ಗಯಾರ್ ಶಾಲೆಯೊಳಗೆ ಪ್ರವೇಶಿಸಿದ್ದ ಚಿರತೆಗೆ ಮೇಲು ದವಡೆಯ ಎರಡೂ ಕೋರೆ ಹಲ್ಲುಗಳು ಇರಲಿಲ್ಲ ಎಂದು ತಿಳಿದುಬಂದಿದೆ.

ಚಿರತೆ ಬಹುಶಃ ಕಾಡಿನಲ್ಲಿ ಮತ್ತಾವುದೊ ಪ್ರಾಣಿ

ಜತೆಗೆ ಸೆಣಸುವಾಗ ಹಲ್ಲುಗಳನ್ನು ಕಳೆದು ಕೊಂಡಿರಬಹುದು ಅಥವಾ ಗಟ್ಟಿಯಾದ ಆಹಾರವನ್ನು ಕಡಿದಾಗ ಹಲ್ಲುಗಳಿಗೆ ಹಾನಿಯಾಗಿರಬಹುದು. ಒಟ್ಟಿನಲ್ಲಿ ಸಂಜಯ ಗುಬ್ಬಿ ದೇಹದಲ್ಲಿ ಚಿರತೆಯ ಹಲ್ಲಿನ ಗಾಯಕ್ಕಿಂತ ಉಗುರಿನ ಗಾಯಗಳೇ ಹೆಚ್ಚು ತೀವ್ರವಾಗಿವೆ. ಅಲ್ಲದೆ ಹಲ್ಲುಗಳಿಲ್ಲದ ಕಾರಣಕ್ಕೆ ಚಿರತೆಗೆ ಕಾಡಿನಲ್ಲಿ ಬೇಟೆಯಾಡಲು ಸಾಧ್ಯವಾಗದೆ ಅತ್ಯಂತ ಸುಲಭ ಆಹಾರವಾಗಿ ಸಿಗಬಹುದಾದ ನಾಯಿಗಳನ್ನು ಹುಡುಕಿಕೊಂಡು ನಗರ ಪ್ರದೇಶಕ್ಕೆ ಆಗಮಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಶಾಂತವಾಗದ ಪುಂಡ ಚಿರತೆ

ಕೆ.ಆರ್.ಪುರ/ಆನೇಕಲ್: ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವೈದ್ಯರ ನಿಗಾದಲ್ಲಿರುವ ಪುಂಡ ಚಿರತೆಯ ವ್ಯಗ್ರತೆ ಸೋಮವಾರವೂ ಕಡಿಮೆ ಆಗಿರಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕಾಡಿಗೆ ಬಿಟ್ಟರೆ ಮತ್ತೆ ತಪ್ಪಿಸಿಕೊಂಡು ಆಹಾರಕ್ಕಾಗಿ ನಗರಕ್ಕೆ ಪ್ರವೇಶ ಮಾಡುವ ಸಾಧ್ಯತೆ ಇದೆ. ಹಾಗಾಗಿ ಬಂಡೀಪುರ ಅಥವಾ ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲಾಗುತ್ತದೆ ಎಂದು ಉದ್ಯಾನವನದ ಕಾರ್ಯ ನಿರ್ವಹಣಾಧಿಕಾರಿ ಸಂತೋಷ್​ಕುಮಾರ್ ತಿಳಿಸಿದ್ದಾರೆ. ಚಿರತೆ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ. ಬನ್ನೇರುಘಟ್ಟ ಅರಣ್ಯಕ್ಕೆ ಹೊಂದಿಕೊಂಡಿರುವ ಆನೇಕಲ್ ತಾಲೂಕಿನ ಕಾಡಿಗೆ ಬಂದು ಅಲ್ಲಿಂದ ಗುಂಜೂರು ಅರಣ್ಯ ಪ್ರದೇಶಕ್ಕೆ ತಲುಪಿದೆ. ಈ ಪ್ರದೇಶದಲ್ಲಿ ನೀಲಗಿರಿ ತೋಪುಗಳು ಹೆಚ್ಚಾಗಿದ್ದು, ಅದರ ನಡುವೆ ಆಹಾರ ಹುಡುಕಿಕೊಂಡು ನಗರ ಪ್ರವೇಶಿಸಿದೆ ಅರಣಾಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.

ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ

ಚಿರತೆಯಿಂದ ಗಾಯಗೊಂಡಿರುವ ಸಂಜಯ ಗುಬ್ಬಿ ಅವರಿಗೆ ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಿಂಭಾಗದಲ್ಲಿ ತುಸು ಗಂಭೀರವಾದ ಗಾಯಗಳಾಗಿವೆ. ಎಡಗೈ ಮೂಳೆ ಮುರಿದಿದ್ದು, ತುರ್ತು ನಿಗಾ ಘಟಕದಲ್ಲಿರಿಸಲಾಗಿದೆ. ಸೋಮವಾರ ಬೆಳಗ್ಗೆ ರಾಜ್ಯ ವನ್ಯ ಜೀವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ರವಿ ರಾಲ್ಪ್, ಬೆಂಗಳೂರು ಉತ್ತರ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಕರಿಯಪ್ಪ, ವೈದ್ಯರಾದ ನಿರುಪಮಾ, ಇತರೆ ಅಧಿಕಾರಿಗಳು, ವಿಬ್​ಗಯಾರ್ ಶಾಲಾ ಪ್ರಾಂಶುಪಾಲರು ಸೇರಿದಂತೆ ಹಲವರು ಆಸ್ಪತ್ರೆಗೆ ತೆರಳಿ ಸಂಜಯ ಗುಬ್ಬಿ ಆರೋಗ್ಯ ವಿಚಾರಿಸಿದರು.

ದಿನಗೂಲಿ ನೌಕರನ ಸಾಹಸಕ್ಕೆ ಮೆಚ್ಚುಗೆ

ಬೆಂಗಳೂರು: ಶಾಲೆಗೆ ನುಗ್ಗಿ ಆತಂಕ ಸೃಷ್ಟಿಸಿದ್ದ ಚಿರತೆಗೆ 3ನೇ ಅರಿವಳಿಕೆ ಚುಚ್ಚುಮದ್ದು ಕೊಟ್ಟು ಪ್ರಜ್ಞೆ ತಪ್ಪಿಸಿದ್ದು, ಅರಣ್ಯ ಇಲಾಖೆ ಮಾಜಿ ದಿನಗೂಲಿ ನೌಕರ, ವೈಟ್​ಫೀಲ್ಡ್​ನ ರಮೇಶ್. ಶೌಚಗೃಹದಲ್ಲಿ ಅವಿತುಕೊಂಡಿದ್ದ ಚಿರತೆ ಬಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾಗ ಮುನ್ನುಗ್ಗಿದ ಇವರು 3ನೇ ಅರಿವಳಿಕೆ ಚುಚ್ಚುಮದ್ದು ಕೊಡುವಲ್ಲಿ ಯಶಸ್ವಿಯಾದರು. ಅರಣ್ಯ ಇಲಾಖೆಯಲ್ಲಿ 18 ವರ್ಷ ದಿನಗೂಲಿ ನೌಕರನಾಗಿ ಕೆಲಸ ಮಾಡಿ ಅಧಿಕಾರಿಗಳ ಮೇಲಿನ ಅಸಮಾಧಾನದಿಂದ 6 ತಿಂಗಳ ಹಿಂದೆ ಕೆಲಸ ಬಿಟ್ಟು ಕೇಬಲ್ ಆಪರೇಟರ್ ಆಗಿ ರಮೇಶ್ ಜೀವನ ಸಾಗಿಸುತ್ತಿದ್ದಾರೆ. ಶಾಲೆಗೆ ಚಿರತೆ ಬಂದಿರುವ ವಿಷಯ ತಿಳಿದು ಸ್ಥಳಕ್ಕೆ ಬಂದಾಗ ಹಿರಿಯ ಅಧಿಕಾರಿಗಳು ಕಣ್ಣಿಗೆ ಬಿದ್ದಿದ್ದರು.

ಅಷ್ಟೊತ್ತಿಗೆ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಮತ್ತು ಚಾಲಕ ಬೆನ್ನಿಸ್ ಮೇಲೆ ಚಿರತೆ ದಾಳಿ ನಡೆಸಿತ್ತು. 2 ಅರಿವಳಿಕೆ ಚುಚ್ಚುಮದ್ದು ಕೊಟ್ಟರೂ ಪ್ರಜ್ಞೆ ತಪ್ಪದೆ ಶೌಚಗೃಹದಲ್ಲಿ ಅವಿತುಕೊಂಡಿತ್ತು. ಅದರ ಬಳಿಗೆ ಹೋಗಲು ಎಲ್ಲರೂ ಹಿಂದೇಟು ಹಾಕುತ್ತಿದ್ದರು. ಆಗ ಸಂಜಯ್ ಗುಬ್ಬಿ ಸೂಚನೆ ಮೇರೆಗೆ ರಮೇಶ್ ಗನ್ ಹಿಡಿದು ಮುನ್ನುಗ್ಗಿದ್ದಾರೆ. ಶೌಚಗೃಹದಲ್ಲಿ ಗುಟುರು ಹಾಕುತ್ತಿದ್ದ ಶಬ್ದ ಕೇಳಿ ಹೊರಬರದಂತೆ ಎಲ್ಲೆಡೆ ಬಲೆ ಅಳವಡಿಸಿ ಗನ್​ವುೂಲಕ ಅರಿವಳಿಕೆ ಚುಚ್ಚುಮದ್ದು ಕೊಟ್ಟಿದ್ದಾರೆ. ಸ್ವಲ್ಪ ಸಮಯದ ನಂತರ ಚಿರತೆ ಪ್ರಜ್ಞೆ ತಪ್ಪಿತು.

53 ಚಿರತೆ, 23 ಆನೆ ಹಿಡಿದ ಸಾಹಸಿ

ಎಸ್ಸೆಸ್ಸೆಲ್ಸಿ ಬಳಿಕ ಮುಂದಿನ ವ್ಯಾಸಂಗಕ್ಕೆ ಹಣ ಇಲ್ಲದೆ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರ ನಾಗಿ ಸೇರಿಕೊಂಡೆ. ವನ್ಯಜೀವಿ ತಜ್ಞರಾದ ಚಟ್ಟಿಯಪ್ಪ, ಶ್ರೀನಿವಾಸ್ ಮತ್ತು ಬಸವರಾಜು ಜತೆ ಸಾಕಷ್ಟು ಕಲಿತುಕೊಂಡು ರಾಮನಗರ, ಹಾಸನ, ಚನ್ನಪಟ್ಟಣ, ಅರಸಿಕೆರೆ ಸೇರಿ ವಿವಿಧೆಡೆ 53 ಚಿರತೆ, 23 ಆನೆಗಳ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದೆ ಎಂದು ರಮೇಶ್ ‘ವಿಜಯವಾಣಿ’ ಗೆ ತಿಳಿಸಿದರು. ವನ್ಯಜೀವಿಗಳ ಅಧ್ಯಯನಕ್ಕೆ ತೆರಳುವಾಗ ಸಂಜಯ್ ಗುಬ್ಬಿ ತಮ್ಮ ಜತೆಗೆ ಕರೆದೊಯ್ದು ಪ್ರಾಣಿಗಳ ಬಗ್ಗೆ ತಿಳಿಸಿಕೊಡುತ್ತಿದ್ದರು. ಅವರ ಜತೆಯಲ್ಲಿ 5 ಚಿರತೆ ಹಿಡಿದ್ದೇನೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿಗಳ ಆರೈಕೆ ವೇಳೆ ದಾಳಿಗೆ ತುತ್ತಾಗಿ ಅಧಿಕಾರಿಗಳು ಸಹಾಯಕ್ಕೆ ಬಾರದಿದ್ದರಿಂದ ನೊಂದು ಕೆಲಸ ಬಿಟ್ಟೆ ಎಂದು ರಮೇಶ್ ಹೇಳಿದರು.

ಸೆಕ್ಯೂರಿಟಿ ಗಾರ್ಡ್​ಗಳಿಗೆ ಸನ್ಮಾನ

ಅನಾಹುತ ತಪ್ಪಿಸಿದ ಸೆಕ್ಯೂರಿಟಿ ಗಾರ್ಡ್​ಗಳಾದ ಸ್ಯಾಮ್ಯುಯಲ್ ಮತ್ತು ಬಾಬು ಅವರಿಗೆ ಪಾಲಕರಾದ ಶ್ವೇತಾ ಮತ್ತು ಧೀರೇಂಧರ್ ದಂಪತಿ ಶಾಲು ಹೊದಿಸಿ ಹೂಗುಚ್ಚ ಕೊಟ್ಟು ಸನ್ಮಾನಿಸಿದರು. ಇವರಲ್ಲದೆ, ಇತರ ನೂರಾರು ಪಾಲಕರು ಸೆಕ್ಯೂರಿಟಿ ಗಾರ್ಡ್​ಗಳ ಕೈ ಕುಲುಕಿ ಅಭಿನಂದಿಸಿದರು. ಈ ವೇಳೆ ವಿಜಯವಾಣಿ ಜತೆ ಮಾತನಾಡಿದ ಶ್ವೇತಾ, ನಿದ್ರೆಯ ಮಂಪರಿನಲ್ಲೂ ಶೌಚಗೃಹದಲ್ಲಿ ಅಡಗಿದ್ದ ಚಿರತೆಯನ್ನು ಪತ್ತೆ ಹಚ್ಚಿರುವುದು ಹಾಗೂ ಅನಾಹುತ ನಡೆಯದಂತೆ ಜಾಗ್ರತೆ ವಹಿಸಿದ್ದು ಪ್ರಶಂಸನೀಯ ಎಂದರು.

ಮಕ್ಕಳಲ್ಲಿ ಚಿರತೆ ಆತಂಕ

ಬೆಂಗಳೂರು: ಚಿರತೆ ನುಗ್ಗಿ ತಲ್ಲಣ ಉಂಟು ಮಾಡಿದ್ದ ವಿಬ್​ಗಯಾರ್ ಶಾಲೆಯತ್ತ ಸೋಮವಾರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಯದಿಂದಲೇ ಹೆಜ್ಜೆ ಹಾಕಿದರು. ಪಾಲಕರು ಖುದ್ದು ಮಕ್ಕಳನ್ನು ತರಗತಿಗೆ ಬಿಟ್ಟು ಪ್ರಾಂಶುಪಾಲರಿಂದ ಮಾಹಿತಿ ಪಡೆದು ಆತಂಕದಲ್ಲೇ ಹಿಂದಿರುಗಿದರು.

ಬೆಳಗ್ಗೆ 8.10 ರಿಂದ ಮಧ್ಯಾಹ್ನ 2.50ರವರೆಗೆ ತರಗತಿಯ ಸಮಯ. ಸೋಮವಾರ ತರಗತಿಗೆ ಬೆಳಗ್ಗೆ 8.45ರವರೆಗೂ ವಿದ್ಯಾರ್ಥಿಗಳು ಬರುತ್ತಿದ್ದರು. ಶೇ.50 ಮಂದಿ ಶಾಲಾ ವಾಹನಗಳಿಗೆ ಮಕ್ಕಳನ್ನು ಕಳುಹಿಸದೆ ಸ್ವಂತ ವಾಹನಗಳಲ್ಲಿ ಬಿಟ್ಟು ಹೋಗುತ್ತಿದ್ದ ದೃಶ್ಯ ಕಂಡು ಬಂತು.

ಚಿರತೆ ಸೆರೆಸಿಕ್ಕ ಮೇಲೆ ಭಾನುವಾರ ರಾತ್ರಿ 8.30ಕ್ಕೆ ಎಲ್ಲ ಪಾಲಕರಿಗೂ ಪ್ರಾಂಶುಪಾಲರು ಮಾಹಿತಿ ಕೊಟ್ಟಿದ್ದರೂ. ಆದರೂ ಸಹ ಮಕ್ಕಳನ್ನು ಬಿಡಲು ಬಂದಿದ್ದ ಪಾಲಕರು ಶಾಲಾ ಆಡಳಿತ ಮಂಡಳಿ ಸದಸ್ಯರನ್ನು ಹಾಗೂ ಪ್ರಾಂಶುಪಾಲ ರೋಷನ್ ಡಿಸೋಜಾ ಅವರಿಂದ ಮಾಹಿತಿ ಪಡೆದು ಜಾಗೃತಿ ವಹಿಸುವಂತೆ ಸಲಹೆ ಕೊಟ್ಟು ಹೋಗುತ್ತಿದ್ದರೂ. ಆದರೂ ಸಹ ಪಾಲಕರ ಮುಖದಲ್ಲಿ ಆತಂಕ ಹೋಗಿರಲಿಲ್ಲ.

ಶಾಲೆಯ ಗೇಟ್ ಪ್ರವೇಶ ಮಾಡುತ್ತಿದಂತೆ ವಿದ್ಯಾರ್ಥಿಗಳು ಸುದ್ದಿವಾಹಿನಿಗಳಲ್ಲಿ ನೋಡಿದ್ದ ಚಿರತೆಯ ಆರ್ಭಟವನ್ನು ನೆನಪಿಸಿ ಕೊಳ್ಳುತ್ತಾ ಚಿರತೆ ಹೆಜ್ಜೆಗಳನ್ನು ಗುರುತು ಹಿಡಿಯುವುದು ಮತ್ತು ಓಡಾಡಿದ್ದ ಪ್ರದೇಶವನ್ನು ಕುತೂಹಲದಿಂದ ನೋಡುತ್ತ ಸಹಪಾಠಿಗಳ ಜತೆ ಚರ್ಚೆ ನಡೆಸುತ್ತಿದ್ದರು. ಇದರಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಯೂ ಹೊರತಾಗಿರಲಿಲ್ಲ.

ಶೇ.10 ಮಕ್ಕಳು ಗೈರು

ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಪಟ್ಟು ಚಿರತೆ ಹಿಡಿದು ಆತಂಕ ದೂರ ಮಾಡಿದ್ದಾರೆ. ಈ ಬಗ್ಗೆ ಭಾನುವಾರ ರಾತ್ರಿಯೇ ಪಾಲಕರಿಗೆ ಎಸ್​ಎಂಎಸ್ ಮಾಹಿತಿ ರವಾನೆ ಮಾಡಲಾಗಿತ್ತು. ಆದರೂ ಶೇ.10 ಮಕ್ಕಳು ಗೈರಾಗಿದ್ದರು. ಶಾಲೆಗೆ ಚಿರತೆ ನುಗ್ಗಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಕಾಡು ಪ್ರಾಣಿಗಳು ಬರದಂತೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಸಲಹೆ ಪಡೆದುಕೊಳ್ಳಲಾಗುತ್ತದೆ ಎಂದು ಪ್ರಾಂಶುಪಾಲ ರೋಷನ್ ಡಿಸೋಜಾ ತಿಳಿಸಿದ್ದಾರೆ.

ಶಾಲೆಯೊಳಗೆ ಚಿರತೆ ಓಡಾಡಿದ ದೃಶ್ಯ ನೆನಪಿಕೊಂಡರೆ ಭಯ ಉಂಟಾಗುತ್ತದೆ. ಪ್ರೀ ನರ್ಸರಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಕಳುಹಿಸಲು ಭಯವಾಗಿ ಖುದ್ದು ನಾನೇ ಶಾಲೆಗೆ ಬಿಟ್ಟಿದ್ದೇನೆ.

| ಹರೀಶ್ ಪಾಲಕರು

Write A Comment