ಕರ್ನಾಟಕ

ವಿದೇಶಿಗರ ಜೀವ ಉಳಿಸಿದ ಪೊಲೀಸರಿಗೆ ಅಮಾನತು ಶಿಕ್ಷೆಯೇ…?

Pinterest LinkedIn Tumblr

videshiಬೆಂಗಳೂರು, ಫೆ.7-ಸಾರ್ವಜನಿಕ ಚರ್ಚೆಗೆ ತೀವ್ರ ಗ್ರಾಸವಾಗಿರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ತಾಂಜೇನಿಯಾ ವಿದ್ಯಾರ್ಥಿನಿ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ದಕ್ಷ ಕ್ರಮದಿಂದ ಭಾರೀ ಅನಾಹುತಗಳು ತಪ್ಪಿವೆ. ತಮ್ಮ ಸಮಯ ಪ್ರಜ್ಞೆಯಿಂದ ಪೊಲೀಸರು ಇಬ್ಬರು ವಿದೇಶಿ ವಿದ್ಯಾರ್ಥಿಗಳ ಜೀವವನ್ನು ಉಳಿಸಿದ್ದಾರೆ. ಆದರೆ ಸರ್ಕಾರ ಎಸಿಪಿ, ಇನ್ಸ್‌ಪೆಕ್ಟರ್ ಸೇರಿದಂತೆ ಆರು ಜನ ಪೊಲೀಸರನ್ನು ಅಮಾನತುಮಾಡಿದೆ ಈ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಡೆದದ್ದಿಷ್ಟೆ: ಜನವರಿ 31 ರಂದು ಸಂಜೆ 7.15ರ ಸಮಯದಲ್ಲಿ ಸೂಡಾನ್ ದೇಶದ ವಿದ್ಯಾರ್ಥಿಗಳು ನಗರದ ಹೊರವಲಯದ ಹೆಸರಘಟ್ಟ ಸಮೀಪದ ಗಣಪತಿಪುರದ ಬಳಿ ಕಾರಿನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ಈ ಸಂದರ್ಭದಲ್ಲಿ ಶಹಾನ್ ತಾಜಮ್ ಎಂಬುವರು ಮೃತಪಟ್ಟಿದ್ದಾರೆ. ಆಗ ಸಾರ್ವಜನಿಕರು ಮತ್ತು ಅಪಘಾತ ಮಾಡಿದವರ ನಡುವೆ ಘರ್ಷಣೆ ನಡೆದಿದೆ. ಚಾಲಕನನ್ನು ಹಿಡಿದು ಥಳಿಸಿದ್ದಾರೆ. ಪೊಲೀಸರು ಸಕಾಲಕ್ಕೆ ಆಗಮಿಸಿ ಘರ್ಷಣೆಯನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದರಿಂದ ಸಾರ್ವಜನಿಕ ಆಕ್ರೋಶ ಹೆಚ್ಚಾಗಿದ್ದು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಏನೂ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರಿನ ಚಾಲಕನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದನ್ನು ಕಂಡ ಸಾರ್ವಜನಿಕರು ಅವರನ್ನು ಹಿಂಬಾಲಿಸಿ ಆಸ್ಪತ್ರೆಗೂ ಹೋಗಿದ್ದಾರೆ. ಪೊಲೀಸರು ಅವರ ಕಣ್ತಪ್ಪಿಸಿ ಆತನನ್ನು ಬೇರೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅದೇ ಸಂದರ್ಭದಲ್ಲಿ ಉದ್ರಿಕ್ತರು ಕಾರಿಗೆ ಬೆಂಕಿ ಇಟ್ಟಿದ್ದಾರೆ. ವಿದೇಶಿ ವಿದ್ಯಾರ್ಥಿಗಳಿದ್ದ ಇದೇ ಮಾರ್ಗವಾಗಿ ಬರುತ್ತಿದ್ದ ಇನ್ನೊಂದು ಕಾರನ್ನು ತಡೆದ ಉದ್ರಿಕ್ತ ಜನರು ಆ ಕಾರಿನ ಚಾಲಕನ ಮೇಲೆ ಹಲ್ಲೆಗೆ ಮುಂದಾದರು. ಇದನ್ನು ಕಂಡ ಪೊಲೀಸರು ತಡೆದು ಚಾಲಕನನ್ನು ಹೊಯ್ಸಳ ಜೀಪಿನಲ್ಲಿ ಸಪ್ತಗಿರಿ ಆಸ್ಪತ್ರೆಗೆ ಕರದೊಯ್ದರು. ಆವೇಶದಲ್ಲಿ ಸಾರ್ವಜನಿಕರು ಕಾರಿಗೆ ಬೆಂಕಿ ಇಟ್ಟರು. ಎರಡೂ ಕಾರುಗ ಳು ಸಂಪೂರ್ಣ ಭಸ್ಮವಾದವು.

ಇನ್ನೊಂದು ಕಾರಿನಲ್ಲಿದ್ದವರನ್ನು ಹೊಯ್ಸಳ ಮತ್ತು ಚೀತಾ ಪೊಲೀಸರು ರಕ್ಷಿಸಿ ಸಪ್ತಗಿರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪೊಲೀಸರು ಈ ಮುಂಜಾಗ್ರತಾ ಕ್ರಮಕೈಗೊಳ್ಳದಿದ್ದರೆ, ಅಲ್ಲಿ ಸೇರಿದ್ದ ಜನ ಅವರಲ್ಲಿದ್ದ ಆವೇಶಕ್ಕೆ ಈ ಕಾರಿನಲ್ಲಿದ್ದವರು ಬಲಿಯಾಗಬೇಕಾಗಿತ್ತು. ಆದರೆ ಯಾವುದನ್ನೂ ಲೆಕ್ಕಿಸದೆ ಪೊಲೀಸರು ಈ ವಿದ್ಯಾರ್ಥಿಗಳ ಪ್ರಾಣರಕ್ಷಣೆ ಮಾಡಿದ್ದಾರೆ. ಇಲ್ಲಿ ಜಮಾಯಿಸಿದ್ದ ಜನ ಜಾಸ್ತಿ ಇದ್ದಿದ್ದರಿಂದ ಕಾರಿನಲ್ಲಿದ್ದವರನ್ನು ಬೇರೆ ಕಡೆ ಹೋಗುವಂತೆ ಸೂಚಿಸಿದರು. ಅವರು ಬಸ್ ಹತ್ತಲು ತೆರಳುವಾಗ ಯಾರೋ ಕಿಡಿಗೇಡಿಗಳು ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಆ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ. ಪೊಲೀಸರ ಈ ಸಕಾಲಿಕ ಕ್ರಮದಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿದಂತಾಗಿದೆ.

ಜ.31ರಂದು ಹೆಬ್ಬಾಳ ಕ್ಷೇತ್ರದ ವಿಧಾನಸಭಾ ಉಪಚುನಾವಣಾ ಪ್ರಚಾರ ಸಂಬಂಧ ವಿವಿಧೆಡೆ ಒಂದೇ ದಿನ ಎಂಟು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹೆಬ್ಬಾಳ ಕ್ಷೇತ್ರ ಬೆಂಗಳೂರು ಉತ್ತರ ವಲಯ ವ್ಯಾಪ್ತಿಗೆ ಬರುತ್ತದೆ. ಈ ಕಾರ್ಯಕ್ರಮಗಳಿಗಾಗಿ ಬಂದೋಬಸ್ತ್‌ಗೆ ಬೆಂಗಳೂರು ಉತ್ತರ ವಿಭಾಗದ ಪೊಲೀಸರನ್ನು ನಿಯೋಜಿಸಲಾಗಿತ್ತು. ದಿಢೀರನೆ ಈ ಘಟನೆ ನಡೆದಿದ್ದರಿಂದ ಮತ್ತು ಪೊಲೀಸರ ಸಂಖ್ಯೆ ಕಡಿಮೆ ಇದ್ದಿದ್ದರಿಂದ ಇಲ್ಲಿ ಈ ಘಟನೆ ನಡೆಯಲು ಕಾರಣವಾಯಿತು. ಅಷ್ಟನ್ನು ಹೊರತುಪಡಿಸಿದರೆ ಪೊಲೀಸರು ಸಕಾಲದಲ್ಲಿ ತಮ್ಮ ಕ್ರಮವನ್ನು ಜರುಗಿಸಿದ್ದಾರೆ. 7.15ರಿಂದ 7.45ರೊಳಗೆ ಈ ಘಟನೆ ನಡೆದಿದೆ. ಕೇವಲ ಅರ್ಧಗಂಟೆಯೊಳಗೆ ಇಷ್ಟೆಲ್ಲಾ ಘಟನೆ ನಡೆದಿದೆ. ಅರ್ಧಗಂಟೆಯೊಳಗೆ ಪೊಲೀಸರು ಅಲರ್ಟ್ ಆಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಇಬ್ಬರು ವಿದ್ಯಾರ್ಥಿಗಳ ಜೀವವನ್ನು ಉಳಿಸಿದ್ದಾರೆ. ಆದರೆ ಸರ್ಕಾರ ಎಸಿಪಿ ಮತ್ತು ಇನ್ಸ್‌ಪೆಕ್ಟರ್ ಸೇರಿದಂತೆ ಆರು ಜನರನ್ನು ಅಮಾನತು ಮಾಡಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Write A Comment