ಕರ್ನಾಟಕ

ವಿದೇಶಿಗರ ಮೋಜು-ಮಸ್ತಿ : ‘ಮಾದಕ ’ನಗರವಾದ ಸಿಲಿಕಾನ್ ಸಿಟಿ ಬೆಂಗಳೂರು

Pinterest LinkedIn Tumblr

viiiಬೆಂಗಳೂರು, ಫೆ.7- ಸಾರ್… ನಮ್ಗೂ ವಯಸ್ಸಿಗೆ ಬಂದ ಮಕ್ಕಳಿದ್ದಾರೆ. ವಿದೇಶಿಗರ ಹಾವಳಿಯಿಂದ ಮಕ್ಕಳನ್ನು ಹೊರ ಕಳುಹಿಸಲು ಸಾಧ್ಯವಾಗುತ್ತಿಲ್ಲ ಏನ್ಮಾಡೋದು ಸ್ವಾಮಿ. ವಿದೇಶಿಗರ ವರ್ತನೆ ನೋಡಿದರೆ ಅಸಹ್ಯವೆನಿಸುತ್ತದೆ. ಆದರೂ ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ನಗರದ ಹೆಬ್ಬಾಗಿಲು ತುಮಕೂರು ರಸ್ತೆಯಿಂದ ಅಣತಿ ದೂರದಲ್ಲಿರುವ ಗಣಪತಿನಗರದ ನಿವಾಸಿಗಳು. ವಿದ್ಯಾಭ್ಯಾಸದ ನೆಪದಲ್ಲಿ ದೂರದ ಆಫ್ರಿಕಾ ಖಂಡದ ಹಲವಾರು ದೇಶಗಳಿಂದ ಬಂದು ನೆಲೆಸಿರುವ ವಿದೇಶಿಗರು ಹೆಸರಘಟ್ಟ ಮುಖ್ಯ ರಸ್ತೆಯ ಈ ಮೋದಕ ನಗರಿಯನ್ನು ಮಾದಕ ನಗರವನ್ನಾಗಿ ಪರಿವರ್ತಿಸಿದ್ದಾರೆ ಎನ್ನುವುದು ಈ ಸಂಜೆ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಬಯಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದಾಗ ಗಣಪತಿ ನಗರದಲ್ಲಿ ನೆಲೆಸಿರುವ ವಿದೇಶಿಗರ ಮೋಜು ಮಸ್ತಿಯ ಒಂದೊಂದು ದೃಶ್ಯಗಳು ಗೋಚರಿಸತೊಡಗಿದವು.

ಗಣಪತಿ ನಗರಕ್ಕೆ ಹೊಂದಿಕೊಂಡಂತಿರುವ ನಿರ್ಜನ ಪ್ರದೇಶವೇ ವಿದೇಶಿಗರ ಮೋಜು ಮಸ್ತಿಯ ತಾಣವಾಗಿ ಪರಿವರ್ತನೆಗೊಂಡಿದೆ. ಈ ಪ್ರದೇಶದಲ್ಲಿ ಮದ್ಯದ ಬಾಟಲಿಗಳು, ಸಿಗರೇಟ್ ತುಂಡುಗಳು, ಮಾದಕ ದ್ರವ್ಯಗಳ ತುಣುಕುಗಳನ್ನು ಎಲ್ಲೆಂದರೆಲ್ಲಿ ಬಿಸಾಡಲಾಗಿದೆ. ಈ ಪ್ರದೇಶದಲ್ಲೇ ಇರುವ ಒಂಟಿ ಮನೆಯಲ್ಲಿ ವಿದೇಶಿಗರು ರಾತ್ರಿಯಾದಂತೆ ನಡೆಸಬಾರದ ಕೃತ್ಯಗಳನ್ನು ನಡೆಸುತ್ತಾರೆ. ಆದರೂ ಅವರನ್ನು ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿಯೇ ಅವರು ತಮ್ಮಿಷ್ಟ ಬಂದಂತೆ ವರ್ತಿಸುತ್ತಿದ್ದಾರೆ ಎಂದು ಅಲವತ್ತುಕೊಳ್ಳುತ್ತಾರೆ ಸ್ಥಳೀಯ ನಿವಾಸಿ ಹನುಮಂತಪ್ಪ.

ಸಮೀಪದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಉದ್ದೇಶದಿಂದ ಇಲ್ಲಿಗೆ ಬಂದು ನೆಲೆಸಿರುವ ವಿದೇಶಿಗರು ಹಾಡು ಹಗಲೇ ಜನಸಂದಣಿ ಪ್ರದೇಶಗಳಲ್ಲೇ ಮನಸೋ ಇಚ್ಛೆ , ಮಾದಕ ದ್ರವ್ಯ ಸೇವಿಸುವುದೇ ಅಲ್ಲದೆ ಲೈಂಗಿಕ ಚೇಷ್ಟೆಗಳನ್ನು ಪ್ರದರ್ಶಿಸುತ್ತಾರೆ ಎಂಬುವುದು ಸ್ಥಳೀಯರ ಆರೋಪವಾಗಿದೆ. ವಿದೇಶಿಗರ ಹಾವ-ಭಾವ ನಮ್ಮ ಮಕ್ಕಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ನಾವು ಮನೆಯಿಂದ ಮಕ್ಕಳನ್ನು ಹೊರ ಕಳುಹಿಸುತ್ತಿಲ್ಲ. ದಯವಿಟ್ಟು ಈ ವಿದೇಶಿಗರ ಮೋಜು ಮಸ್ತಿಗೆ ಕಡಿವಾಣ ಹಾಕಿ ಎಂದು ಕೈ ಮುಗಿಯುತ್ತಾರೆ ರಜಿಯಾ ಬೇಗಂ.

ತಾಂಜೇನಿಯಾ , ಸೂಡಾನ್ ಮತ್ತಿತರ ಆಫ್ರಿಕಾ ದೇಶದಿಂದ ಬಂದಿರುವ ವಿದೇಶಿಗರು ನಡೆಸುವ ಚೇಷ್ಟೆಗಳನ್ನು ಕಾಣಬೇಕಾದರೆ ಸೂರ್ಯ ಮುಳುಗುವ ಹೊತ್ತಿಗೆ ಗಣಪತಿ ನಗರದ ಪ್ರಾರ್ಥನಾ ಮಂದಿರದ ಸಮೀಪ ಬಂದರೆ ಸಾಕು. ಜನರೆದುರು ಅವರು ನಡೆಸುವ ಅಂಗಚೇಷ್ಟೆಗಳು ಅಸಹ್ಯ ಹುಟ್ಟಿಸುತ್ತದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಡ್ರಗ್ಸ್ ಲಭ್ಯ: ನಾವು ಅಂಗಡಿಗೆ ಹೋಗಿ ಉಪ್ಪು ತರುವಂತೆ ಈ ಪರದೇಶಿಗಳು ತಮಗೆ ಬೇಕಾದ ಮಾದಕ ದ್ರವ್ಯಗಳನ್ನು ತರುತ್ತಾರೆ. ಇವರಿಗೆ ಡ್ರಗ್ಸ್ ಯಾರು ಸರಬರಾಜು ಮಾಡುತ್ತಾರೋ ಆ ದೇವರೇ ಬಲ್ಲ. ದುಡ್ಡಿನ ಆಸೆಗೆ ಕೆಲ ಸ್ಥಳೀಯರು ಪರದೇಶಿಗಳಿಗೆ ಮಾದಕ ದ್ರವ್ಯ ಸರಬರಾಜು ಮಾಡುತ್ತಾರೆ ಎಂಬ ಅನುಮಾನವಿದೆ. ಪೊಲೀಸರು ಮಾದಕ ದ್ರವ್ಯ ಜಾಲವನ್ನು ಭೇದಿಸಿ ವಿದೇಶಿಗರು ನಡೆಸುತ್ತಿರುವ ಮೋಜು ಮಸ್ತಿಗೆ ಕಡಿವಾಣ ಹಾಕಬೇಕು ಎನ್ನುವುದು ಸ್ಥಳೀಯರ ಒಟ್ಟಾರೆ ಅಭಿಪ್ರಾಯವಾಗಿದೆ.

Write A Comment