ಕರ್ನಾಟಕ

ಹೆಬ್ಬಾಳದಲ್ಲಿ ಬಿಜೆಪಿ ಗೆಲುವು ಸದಾನಂದಗೌಡ ವಿಶ್ವಾಸ

Pinterest LinkedIn Tumblr

bjpಬೆಂಗಳೂರು, ಫೆ. ೭ – ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿನ ಶಪಥ ಕೈಗೊಂಡಿರುವ ಬಿ.ಜೆ.ಪಿ. ಮತದಾರರನ್ನು ಸಂಪರ್ಕಿಸುವ ಮಹಾ ಅಭಿಯಾನ ಕೈಗೊಂಡಿದ್ದು, ಅದರಂತೆ ಇಂದು ಬೃಹತ್ ಬೈಕ್ ಱ್ಯಾಲಿ ನಡೆಸುವ ಮೂಲಕ ಮತಯಾಚನೆ ನಡೆಸಲಾಯಿತು.

ಸಂಜಯನಗರದ ರಾಧಾಕೃಷ್ಣ ದೇವಸ್ಥಾನ ಬಳಿ ಈ ಬೈಕ್‌ ಱ್ಯಾಲಿಗೆ ಕೇಂದ್ರದ ಕಾನೂನು ಸಚಿವ ಡಿ.ವಿ. ಸದಾನಂದಗೌಡರು ಸ್ವತಃ ಬೈಕ್ ಓ‌ಡಿಸುವ ಮೂಲಕ ಚಾಲನೆ ನೀಡಿ, ಕಾರ್ಯಕರ್ತರ ಉತ್ಸಾಹಕ್ಕೆ ಉತ್ತೇಜನ ನೀಡಿದರು.

ಬಿ.ಜೆ.ಪಿ. ಅಲೆ
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರು, ಇಡೀ ಕ್ಷೇತ್ರದಲ್ಲಿ ಬಿ.ಜೆ.ಪಿ. ಅಲೆಯಿದ್ದು, ಬಿ.ಜೆ.ಪಿ. ಪರವಾದ ಒಲವು ಮತದಾರರಲ್ಲಿ ವ್ಯಕ್ತವಾಗಿದೆ ಎಂದರು.

ಮತದಾರರ ಮಹಾ ಸಂಪರ್ಕ ಅಭಿಯಾನದಡಿ ಬಿ.ಜೆ.ಪಿ. ಕಾರ್ಯಕರ್ತರು ಮನೆ ಮನೆಗೂ ತೆರಳಿ ಕಾಂಗ್ರೆಸ್‌ನ ದುರಾಡಳಿತದ ಬಗ್ಗೆ ಜನರಿಗೆ ಅರಿವು ಮೂಡಿಸಿ, ಅಭಿವೃದ್ಧಿಗಾಗಿ ಬಿ.ಜೆ.ಪಿ.ಗೆ ಮತ ನೀಡುವಂತೆ ಮನವೊಲಿಸಿ ಎಂದು ಕರೆ ನೀಡಿದರು.

ಗೆಲುವಿನ ವಿಶ್ವಾಸ
ಇದೇ ಸಂದರ್ಭದಲ್ಲಿ ಮಾತನಾಡಿದ ಬಿ.ಜೆ.ಪಿ. ಅಭ್ಯರ್ಥಿ ವೈ.ವಿ. ನಾರಾಯಣಸ್ವಾಮಿ, ಕ್ಷೇತ್ರದ ಜನತೆ ಪ್ರಚಾರಕ್ಕೆ ಹೋದೆ‌ಡೆಯಲ್ಲೆಲ್ಲಾ ತಮಗೆ ತೋರುತ್ತಿರುವ ಪ್ರೀತಿ, ಒಲವುಗಳಿಗೆ ಆಭಾರಿಯಾಗಿದ್ದೇನೆ, ಮತದಾರರ ಆಶೀರ್ವಾದ ತಮ್ಮ ಮೇಲಿದೆ, ಗೆಲುವಿನ ವಿಶ್ವಾಸ ತಮ್ಮದು ಎಂದರು.

ಈ ಬೈಕ್‌ ಱ್ಯಾಲಿಯಲ್ಲಿ ನಟ ಜಗ್ಗೇಶ್, ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮುಖಂಡ ಅಬ್ದುಲ್ ಅಜೀಂ ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ಬಿ.ಜೆ.ಪಿ. ಪರ ಮತಯಾಚಿಸಿದರು.

ವಿಷನ್ ಹೆಬ್ಬಾಳ ಅಭಿವೃದ್ಧಿ ಕಾರ್ಯಸೂಚಿ ಬಿಡುಗಡೆ
ಹೆಬ್ಬಾಳ ಉಪ ಚುನಾವಣೆಗೆ ಬಿ.ಜೆ.ಪಿ. ಕ್ಷೇತ್ರದ ಅಭಿವೃದ್ಧಿಗೆ ವಿಷನ್ ಹೆಬ್ಬಾಳ ಬಿಡುಗಡೆ ಮಾಡಿದ್ದು, ಇದರಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಪಟ್ಟಿ ಇದೆ.

ಕ್ಷೇತ್ರದ ನಾಗರೀಕರ ಅನುಕೂಲಕ್ಕಾಗಿ `ಹೆಬ್ಬಾಳ ಸಹಾಯ ಆಪ್’ ರೂಪಿಸಿ ಇದನ್ನು ಬಿಬಿಎಂಪಿ ಬೆಸ್ಕಾಂ, ಜಲ ಮಂಡಳಿ ಹಾಗೂ ಇತರೆ ಸರ್ಕಾರಿ ಸಂಸ್ಥೆಗಳೊಂದಿಗೆ ಜೋಡಿಸಿ, ಆನ್‌ಲೈನ್‌ನಲ್ಲಿ ದೂರು ದಾಖಲಿಸಿದರೆ ತಕ್ಷಣ ಪರಿಹಾರ ಒದಗಿಸುವುದಾಗಿ ಈ ವಿಷನ್ ಹೆಬ್ಬಾಳದಲ್ಲಿ ಬಿಜೆಪಿ ಹೇಳಿದೆ. ಇದರೊಂದಿಗೆ ಬಯೋಗ್ಯಾಸ್ ಘಟಕ ಸ್ಥಾಪನೆ, ಹಸಿತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ, ಒಣತ್ಯಾಜ್ಯ ಸಂಗ್ರಹಣೆ, ವಿಲೇವಾರಿಗೆ ಸೂಕ್ತ ವ್ಯವಸ್ಥೆ, ಮಹಿಳೆಯರಿಗೆ ವೃತ್ತಿ ತರಬೇತಿ, ಕೌಶಲ್ಯ ತರಬೇತಿ, ಸರ್ಕಾರಿ ಯೋಜನೆಗಳ ಅನುಕೂಲ ಪಡೆಯಲು ಸೂಕ್ತ ಮಾಹಿತಿ ತರಬೇತಿ, ಕೇಂದ್ರಗಳ ಸ್ಥಾಪನೆ, ಕಾನೂನು ಸುವ್ಯವಸ್ಥೆ ಕಾಪಾಡಲು‌, ಸಂಚಾರ ದಟ್ಟಣೆ ತಗ್ಗಿಸಲು, ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಮಿತಿ ರಚನೆ, ಪಾದಚಾರಿ ಮಾರ್ಗ ಸ್ಕೈವಾಕ್ ನಿರ್ಮಾಣ, ಹೆಬ್ಬಾಳದ ಪ್ರತಿ ರಸ್ತೆ, ಒಳ ಚರಂಡಿ ಮತ್ತು ಪಾದಚಾರಿ ಮಾರ್ಗದ ಮಾಹಿತಿ ದಾಖಲೆ, ಬೆಂಗಳೂರು ನಗರದ ಮಾಸ್ಟರ್ ಪ್ಲಾನ್‌ಗಳಲ್ಲಿ ಅಡಕವಾಗಿರುವ ಮಿಶ್ರ ವಲಯಗಳನ್ನು ರದ್ದುಗೊಳಿಸುವ ಪ್ರಯತ್ನ, ಸರ್ಕಾರಿ ಖಾಲಿ ನಿವೇಶನಗಳನ್ನು ಹಾಗೇ ಉಳಿಸಿಕೊಂಡು ಹಸಿರು ತಾಣವಾಗಿಸುವ ಪ್ರಯತ್ನ, ಟ್ರೀ ಪಾರ್ಕ್ ನಿರ್ಮಾಣ, ಆಟದ ಮೈದಾನಗಳಲ್ಲಿ ಸುಸಜ್ಜಿತ ವ್ಯಾಯಾಮ ಶಾಲೆ, ವೃದ್ಧರಿಗೆ ಡೆ| ಕೇರ್ ಉಚಿತ ಸೌಲಭ್ಯ ನೀಡುವುದಾಗಿ ಬಿ.ಜೆ.ಪಿ. ವಿಷನ್ ಹೆಬ್ಬಾಳದಲ್ಲಿ ಹೇಳಿದೆ.

ಹಾಗೆಯೇ ಕ್ಷೇತ್ರದಲ್ಲಿ ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್ ಕೇಂದ್ರ ಆರಂಭ, ಸುರಕ್ಷತೆಗಾಗಿ ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಟಿ.ವಿ. ಅಳವಡಿಕೆ, ಬಡವರಿಗೆ ವಸತಿ, ಉತ್ತಮ ರಸ್ತೆ, ಸುರಕ್ಷಾ ಸಂಸ್ಥೆ, ಒಳಚರಂಡಿ, ಶುದ್ಧ ಕುಡಿಯುವ ನೀರು, ವೈಫೈ ಸೌಲಭ್ಯದ ಬಗ್ಗೆಯೂ ವಿಷನ್ ಹೆಬ್ಬಾಳದಲ್ಲಿ ಪ್ರಸ್ತಾಪಿಸಲಾಗಿದೆ.

Write A Comment