ಭುವನೇಶ್ವರ್, ಫೆ. ೭- ಜನ ಸಮುದಾಯಕ್ಕೆ ಅನುಕೂಲವಾಗುವ ಆವಿಷ್ಕಾರ ಹಾಗೂ ಸಂಶೋಧನೆಗಳನ್ನು ಕೈಗೊಳ್ಳುವಂತೆ ವಿಜ್ಞಾನಿಗಳಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರಮೋದಿ, ಜನಸಾಮಾನ್ಯರಿಗೆ ಸುಲಭವಾಗಿ ಕೈಗೆಟಕುವ ಪರಿಸರದ ಮೇಲೆ ಶೂನ್ಯ ಪರಿಣಾಮ ಬೀರುವ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕು ಎಂದಿದ್ದಾರೆ.
ಸಂಶೋಧನೆಗಳಲ್ಲಿ ತೊಡಗಿಕೊಳ್ಳುವ ಪ್ರತಿಯೊಬ್ಬ ವಿಜ್ಞಾನಿಗೂ ನೊಬೆಲ್ ಪ್ರಶಸ್ತಿ ಸಿಗದಿರಬಹುದು. ಆದರೆ, ಜನಸಾಮಾನ್ಯರಿಗೆ ಅನುಕೂಲವಾಗುವ ಆವಿಷ್ಕಾರ, ಸಂಶೋಧನೆಗಳು ಅವರಿಗೆ ಸಿಗುವ ನಿಜವಾದ ಪ್ರಶಸ್ತಿ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ಇಲ್ಲಿನ ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಸಂಸ್ಥೆಯ ನೂತನ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಅವರು, ಪಾರಂಪರಿಕ ಜ್ಞಾನ ಮತ್ತು ಮೌನ ತಂತ್ರಜ್ಞಾನಗಳನ್ನು ಬೆಸೆಯುವ ಅಗತ್ಯವಿದೆ ಎಂದರು.
ಜಗತ್ತಿನ ಖ್ಯಾತ ಗಣಿತಶಾಸ್ತ್ರಜ್ಞ ಡಾ. ಮಂಜುಭಾರ್ಗವ ಪುರಾಣ ಗ್ರಂಥಗಳಿಂದ ಜ್ಞಾನ ಸಂಪಾದಿಸಿದ್ದರು. ಅವರ ತಂದೆ ಸಂಸ್ಕೃತ ವಿದ್ವಾಂಸರಾಗಿದ್ದು, ಅವರ ಗಣಿತಜ್ಞಾನ ದೊಡ್ಡದಾಗಲು ಕಾರಣ ಎಂದು ಪ್ರಧಾನಿ ಹೇಳಿ, ಸಾಂಪ್ರಾದಾಯಿಕ ಜ್ಞಾನದ ಜೊತೆ ಇಂದಿನ ತಂತ್ರಜ್ಞಾನ ಹಾಗೂ ವಿಜ್ಞಾನ ಜೋಡಣೆ ಆಗಬೇಕಿದೆ ಎಂದರು.