ತುಮಕೂರು, ಫೆ.4: ಎಂಜಿನಿಯರ್ ಮತ್ತು ಪೊಲೀಸ್ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ಕರೆ ಮಾಡಿ ತಾನು ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಹಣ ನೀಡುವಂತೆ ಹೆದರಿಸುತ್ತಿದ್ದ ನಕಲಿ ಲೋಕಾಯುಕ್ತ ಅಧಿಕಾರಿಯನ್ನು ತಿಲಕ್ ಪಾರ್ಕ್ ವೃತ್ತ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಸದಲಗ ಗ್ರಾಮದ ಕುಂಭಾರ ಗಲ್ಲಿ ನಿವಾಸಿ ಮುರುಗಪ್ಪ ನಿಂಗಪ್ಪ ಕಂಬಾರ್ (51) ಬಂಧಿತ ನಕಲಿ ಅಧಿಕಾರಿ. ಗುಬ್ಬಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್.ಆರ್.ರಮೇಶ್ ತುಮಕೂರಿನಲ್ಲಿದ್ದಾಗ ಇವರ ಮೊಬೈಲ್‌ಗೆ ವ್ಯಕ್ತಿಯೊಬ್ಬ ಕರೆ ಮಾಡಿ ನಾನು ಲೋಕಾಯುಕ್ತ ಎಸ್‌ಪಿ ಮಾತನಾಡುತ್ತಿರುವುದೆಂದು ಪರಿಚಯಿಸಿಕೊಂಡು, ನಿಮ್ಮ ಮೇಲೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ.
ನೀವು ಭ್ರಷ್ಟಾಚಾರ ಮಾಡಿದ್ದೀರ ಎಂದು ಬೆದರಿಸಿದ್ದನು. ಅಲ್ಲದೆ, ನಿಮ್ಮ ಮನೆ ರೈಡ್ ಮಾಡುತ್ತೇನೆಂದು ಹೆದರಿಸಿ, ಹಣ ನೀಡುವಂತೆ ಬೆದರಿಸಿದ್ದನು. ಈ ವಿಷಯವನ್ನು ರಮೇಶ್ ಅವರು ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಕರೆ ಮಾಡಿ ತಿಳಿಸಿದಾಗ ಅವರು ಎನ್‌ಇಪಿಎಸ್ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಅದರಂತೆ ರಮೇಶ್ ಅವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಬಿ.ಮಂಜುನಾಥ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಿಲಕ್‌ಪಾರ್ಕ್ ವೃತ್ತ ನಿರೀಕ್ಷಕ ಬಾಳೇಗೌಡ ಅವರಿಗೆ ವಹಿಸಿದ್ದರು. ಆದೇಶದನ್ವಯ ಪ್ರಕರಣದ ತನಿಖೆ ಚುರುಕುಗೊಳಿಸಿದಾಗ ದೂರವಾಣಿ ಕರೆ ಬಂದಿರುವುದು ಕಾರವಾರದಿಂದ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ತಕ್ಷಣ ಇನ್ಸ್‌ಪೆಕ್ಟರ್‌ರೊಬ್ಬರನ್ನು ಕಾರವಾರಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದಾಗ ದೂರವಾಣಿ ಕರೆ ಇಲ್ಲಿನ ಜೈಲಿನಿಂದ ಬಂದಿರುವುದು ಎಂಬುದು ಗೊತ್ತಾಗುತ್ತದೆ. ತಕ್ಷಣ ಜೈಲಿಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ ಮೊಬೈಲ್ ಮತ್ತು ಸಿಮ್‌ಕಾರ್ಡ್‌ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಜೈಲಿನಲ್ಲಿದ್ದುಕೊಂಡೇ ತಿಪಟೂರು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ರೊಬ್ಬರಿಗೆ ಹೆದರಿಸಿ 90 ಸಾವಿರ ಹಣ ವಸೂಲಿ ಮಾಡಿರುವುದಲ್ಲದೆ, ತಿಪಟೂರಿನಲ್ಲೇ ಮತ್ತೊಬ್ಬ ಎಂಜಿನಿಯರ್‌ಗೂ ಸಹ ಹಣಕ್ಕಾಗಿ ಹೆದರಿಸಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಅದೇ ರೀತಿ ತುಮಕೂರು ಜಿಲ್ಲೆ, ಧಾರವಾಡ, ಬೆಳಗಾಂ, ಉತ್ತರ ಕನ್ನಡ, ಗುಲ್ಬರ್ಗ ಮುಂತಾದ ಜಿಲ್ಲೆಗಳಿಗೆ ಉನ್ನತ ಮಟ್ಟದ ಅಧಿಕಾರಿಗಳನ್ನು ಗುರುತಿಸಿ ಅವರುಗಳಿಗೆ ಲೋಕಾಯುಕ್ತ ಅಧಿಕಾರಿ ಎಂದು ಹೆದರಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಈತನು ಬೆಳಗಾಂ ಜಿಲ್ಲೆಯಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಟೆಬಲ್ ಆಗಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಲಾಖೆಯಿಂದ ವಜಾಗೊಂಡಿದ್ದು, ಇದೇ ರೀತಿಯ ಬೆಳಗಾಂನ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ ಪ್ರಕರಣದಲ್ಲಿ ಸಜೆ ಆಗಿ ಶಿಕ್ಷೆ ಅನುಭವಿಸಿದ್ದಾನೆ.
ಈತನ ಮೇಲೆ ಯಲಬುರ್ಗ, ಹಿರೇಕೇರೂರು, ಬೆಳಗಾಂನ ಮಾರ್ಕೆಟ್, ಕಡೂರು, ಬೇಲೂರು, ಕೊಪ್ಪ, ಹೊಳೆನಸರೀಪರು, ಚನ್ನರಾಯಪುರ, ಕಾರವಾರ, ಮುಂಡಗಡ, ಕೋಲಾರ ಟೌನ್, ಬೆಂಗಳೂರು ವಿಧಾನಸೌಧ, ಹಲಸೂರು ಗೇಟ್, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗಳಲ್ಲಿ ಒಟ್ಟು 17 ಪ್ರಕರಣಗಳು ಈತನ ಮೇಲೆ ದಾಖಲಾಗಿವೆ. ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅಡಿಷನಲ್ ಎಸ್‌ಪಿ ಜೆ.ಬಿ.ಮಂಜುನಾಥ್, ಡಿವೈಎಸ್‌ಪಿ ಚಿದಾನಂದಸ್ವಾಮಿ ನೇತೃತ್ವದಲ್ಲಿ ತಿಲಕ್‌ಪಾರ್ಕ್ ವೃತ್ತ ನಿರೀಕ್ಷಕ ಬಾಳೇಗೌಡ, ಕ್ಯಾತಸಂದ್ರ ಸಿಪಿಐ ರವಿಕುಮಾರ್, ಹೆಡ್‌ಕಾನ್ಸ್‌ಟೆಬಲ್ ಸಿದ್ದಪ್ಪ, ಸಿಬ್ಬಂದಿಗಳಾದ ಮಂಜುನಾಥ್, ವಸಂತ್‌ಕುಮಾರ್ ಕಾರ್ಯಾಚರಣೆಯಲ್ಲಿದ್ದರು.