
ದಾವಣಗೆರೆ, ಫೆ.4: ಕಳೆದ ಆರು ವರ್ಷದ ಹಿಂದೆ ಮೃತಪಟ್ಟಿದ್ದ ಮಹಿಳೆಯ ದೇಹವನ್ನು ಸಂಸ್ಕಾರ ಮಾಡಿದ್ದು, ಇದುವರೆಗೂ ಕೊಳೆಯದೆ ಹಾಗೆಯೇ ಇದ್ದು, ನಗರಕ್ಕೆ ಸಮೀಪದ ಶಿರಮಗೊಂಡನಹಳ್ಳಿಯ ಜನ ಅಚ್ಚರಿಗೊಂಡಿದ್ದಾರೆ. ಆರು ವರ್ಷಗಳ ಹಿಂದೆ ಶಿರಮಗೊಂಡನ ಹಳ್ಳಿಯ ಗೌರಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದರು. ಅವರ ಶವವನ್ನು ಅದೇ ಗ್ರಾಮದ ಕುಂಬಾರ ಚನ್ನಬಸಪ್ಪ ಅವರ ಜಮೀನಿನಲ್ಲಿ ಹೂಳಿ ಸಂಸ್ಕಾರ ಮಾಡಲಾಗಿತ್ತು. ನಾಲ್ಕೈದು ದಿನದ ಹಿಂದೆ ಚನ್ನಬಸಪ್ಪ ಅವರು ಜಮೀನಿನಲ್ಲಿ ಜೆಸಿಬಿ ಯಂತ್ರದ ಮೂಲಕ ಮಣ್ಣು ತುಂಬಿಸುತ್ತಿದ್ದಾಗ ಗೌರಮ್ಮನ ದೇಹ ಹೂತಿದ್ದಾಗ ಇದ್ದಂತೆಯೇ ಇದ್ದುದು ಕಂಡು ಸ್ಥಳೀಯರು ದಿಗ್ಭ್ರಮೆಗೊಂಡಿದ್ದಾರೆ.
ನಂತರ ದೇಹವನ್ನು ಹೊರತೆಗೆದು ಕ್ರಮಬದ್ಧವಾಗಿ ಸುಡುವ ಮೂಲಕ ಸಂಸ್ಕಾರ ಮಾಡಲಾಯಿತು. ಆಕೆಗೆ ತೊನ್ನು ಇದ್ದುದರಿಂದ ದೇಹ ಹಾಗೆಯೇ ಇದ್ದಿರಬಹುದು. ಇಂತಹ ದೇಹವನ್ನು ಹೂತು ಸಂಸ್ಕಾರ ಮಾಡಿದರೆ ಮಳೆ ಬರುವುದಿಲ್ಲ. ಹಾಗಾಗಿಯೇ ಆರು ವರ್ಷಗಳಿಂದ ಸರಿಯಾದ ಮಳೆ ಬಂದಿಲ್ಲ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದುದು ಕಂಡುಬಂತು. ಆದರೆ, ಆರು ವರ್ಷವಾದರೂ ಮಹಿಳೆಯ ದೇಹ ಕೊಳೆಯದೆ ಇದ್ದುದಕ್ಕೆ ವೈಜ್ಞನಿಕಕಾರಣ ತಿಳಿದಿಲ್ಲ.