ಕರ್ನಾಟಕ

ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿ: ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಿವರಾಜು ಹೇಳಿಕೆ

Pinterest LinkedIn Tumblr

kemಬೆಂಗಳೂರು: ಕೆಂಪಾಪುರದಲ್ಲಿರುವ ಕೆಂಪೇಗೌಡ ಅವರ ಸಮಾಧಿ ಸ್ಥಳದ ಅಭಿವೃದ್ಧಿಗೆ ಅಗತ್ಯವಾದ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗುವುದು ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಿವರಾಜು ತಿಳಿಸಿದರು. ಕೌನ್ಸಿಲ್‌ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ಅಡಮಾನ ಇಟ್ಟಿದ್ದ ಕೆಂಪೇಗೌಡ ವಸ್ತು ಸಂಗ್ರಹಾಲಯವನ್ನು ಈಗ ಋಣಮುಕ್ತಗೊಳಿಸಲಾಗಿದೆ ಎಂದು ಅವರು ಹೇಳಿದರು. ‘ರಾಜ್ಯ ಸರ್ಕಾರ ಸಹ ಸಮಾಧಿ ಸ್ಥಳದ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ಅದಕ್ಕೆ ಪೂರಕವಾಗಿ ಬಿಬಿಎಂಪಿ ಕೆಲಸ ಮಾಡಲಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಂಪೇಗೌಡ ಅಧ್ಯಯನ ಪೀಠ ಆರಂಭಿಸಲಾಗುತ್ತದೆ’ ಎಂದು ಮೇಯರ್‌ ಪ್ರಕಟಿಸಿದರು.

ರಾಜಕೀಯ ಮೇಲಾಟ: ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ಮೇಲಾಟದ ಝಲಕ್‌ವೊಂದಕ್ಕೂ ಕೌನ್ಸಿಲ್‌ ಸಭೆ ವೇದಿಕೆಯಾಯಿತು. ಕೆ.ಆರ್‌.ಪುರದ ಕೇಬಲ್‌ ಸೇತುವೆ ಮುಂಭಾಗದಲ್ಲಿ ಬಸ್‌ ಶೆಲ್ಟರ್‌ ಜತೆಗೆ ನಿರ್ಮಿಸಲಾದ ಮಳಿಗೆಗಳ ವಿಷಯವಾಗಿ ಬಿಜೆಪಿಯ ಕೆ.ಪೂರ್ಣಿಮಾ ಹಾಗೂ ಕಾಂಗ್ರೆಸ್‌ ಬಿ.ಎನ್‌. ಶ್ರೀಕಾಂತ್‌ ಮಧ್ಯೆ ತುರುಸಿನ ವಾಗ್ವಾದ ನಡೆಯಿತು.

ವಾಗ್ವಾದ ತಾರಕಕ್ಕೇರಿದಾಗ ಅವರ ಪಕ್ಷಗಳ ಉಳಿದ ಸದಸ್ಯರು ಬೆಂಬಲಕ್ಕೆ ಧಾವಿಸಿದರು. ಆಗ ಗದ್ದಲದ ವಾತಾವರಣ ಉಂಟಾಯಿತು. ವಿಷಯ ಪ್ರಸ್ತಾಪಿಸಿದ ಪೂರ್ಣಿಮಾ, ‘ಸಂಚಾರ ದಟ್ಟಣೆ ತಪ್ಪಿಸಲು ಸೇತುವೆ ಮುಂಭಾಗದಲ್ಲಿ ಬಸ್‌ಗಳ ನಿಲುಗಡೆಗೆ ನಾನು ಮತ್ತು ಸಂಚಾರ ಪೊಲೀಸರು ಜತೆಯಾಗಿ ಜಾಗ ಗುರುತಿಸಿದ್ದೆವು. ಅಲ್ಲಿನ ಫುಟ್‌ಪಾತ್‌ ಮೇಲೆ ಸ್ಥಳೀಯ ಶಾಸಕರ ಬೆಂಬಲಿಗರು ಬಸ್‌ ಶೆಲ್ಟರ್‌ ಜತೆಗೆ 14 ಮಳಿಗೆಗಳನ್ನು ನಿರ್ಮಾಣ ಮಾಡಿದ್ದಾರೆ. ಶಾಸಕರ ಚಿತ್ರವನ್ನೂ ಹಾಕಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾವೂ ಫುಟ್‌ಪಾತ್‌ ಮೇಲೆ ಕಟ್ಟಡ ಕಟ್ಟುತ್ತೇವೆ. ನಮಗೂ ಅನುಮತಿ ಕೊಡಿ’ ಎಂದು ಆಗ್ರಹಿಸಿದರು. ‘ಶಾಸಕರ ಮೇಲೆ ಅಭಿಮಾನ ಇದ್ದರೆ ಅವರ ಬೆಂಬಲಿಗರು ತಮ್ಮ ಸ್ವತ್ತಿನಲ್ಲಿ ಮಹಲು ಕಟ್ಟಿ ದಾನ ಮಾಡಲಿ. ಪಾಲಿಕೆ ಸ್ವತ್ತಿನಲ್ಲಿ ಅವರಿಗೇನು ಹಕ್ಕು’ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶ್ರೀಕಾಂತ್‌, ‘ಕಟ್ಟಡ ಇರುವುದು ಟಿನ್‌ ಫ್ಯಾಕ್ಟರಿ ಪ್ರದೇಶದಲ್ಲಿಯೇ ಹೊರತು ಪಾಲಿಕೆ ಜಾಗದಲ್ಲಿ ಅಲ್ಲ. ಜನೋಪಯೋಗಿ ಕೆಲಸ ಮಾಡಲು ವಿರೋಧಿಸಿದರೆ ಕೇಳುವುದಿಲ್ಲ’ ಎಂದು ಹೇಳಿದರು.

‘ಕಟ್ಟಡ ತೆರವುಗೊಳಿಸದಿದ್ದರೆ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಪೂರ್ಣಿಮಾ ಸಿಟ್ಟಿನಿಂದ ಹೇಳಿದರೆ, ‘ರಸ್ತೆಗಿಳಿದು ಹೋರಾಟ ಮಾಡುತ್ತಾರೆ ಎಂದು ಕಟ್ಟಡದ ತಂಟೆಗೆ ಬಂದರೆ ಬೆಂಗಳೂರು ಬಂದ್‌ ಮಾಡುತ್ತೇವೆ’ ಎಂದು ಶ್ರೀಕಾಂತ್‌ ಮಾರುತ್ತರ ನೀಡಿದರು.

‘ನೀವು ಈಗಷ್ಟೇ ಸದಸ್ಯರಾಗಿ ಆಯ್ಕೆ ಆಗಿದ್ದೀರಿ. ಹೀಗೆಲ್ಲ ವರ್ತಿಸಬಾರದು. ಇಂತಹ ಧಮಕಿ ನಡೆಯಲ್ಲ’ ಎಂದು ಮೇಯರ್‌ ಬುದ್ಧಿವಾದ ಹೇಳಿದರು. ‘ಆಯುಕ್ತರೊಂದಿಗೆ ಸ್ಥಳ ಸಮೀಕ್ಷೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಚರ್ಚೆಗೆ ಅಂತ್ಯ ಹಾಡಿದರು.
*
ಇತರೆ ಪ್ರಮುಖ ಸಂಗತಿಗಳು
* ಬಿಬಿಎಂಪಿ ಆರ್ಥಿಕ ಅವ್ಯವಹಾರಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಒತ್ತಾಯಿಸಿದರು. ‘ಲೆಕ್ಕಪರಿಶೀಲನೆ ಹಾಗೂ ಆಡಳಿತ ವರದಿ ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ಮಂಡಿಸಲಾಗುವುದು. ಎಲ್ಲ ಹುಳುಕುಗಳು ಅಲ್ಲಿ ಬಯಲಾಗಲಿವೆ’ ಎಂದು ಮೇಯರ್‌ ಉತ್ತರಿಸಿದರು.

* ಬಡವರಿಗೆ ಮನೆ ಕಟ್ಟಿಕೊಡಲು ಪಾಲಿಕೆಯ ಪಾಲು ₹ 116 ಕೋಟಿಯನ್ನು ಕೊಳಚೆ ನಿರ್ಮೂಲನಾ ಮಂಡಳಿಗೆ ನೀಡಬೇಕು ಎಂದು ಆಡಳಿತ ಪಕ್ಷದ ನಾಯಕ ಆರ್‌.ಎಸ್‌. ಸತ್ಯನಾರಾಯಣ ಆಗ್ರಹಿಸಿದರು. ಮುಂದಿನ ಬಜೆಟ್‌ನಲ್ಲಿ ಹಣಕಾಸಿನ ವ್ಯವಸ್ಥೆ ಮಾಡಲಾಗುವುದು ಎಂದು ಮೇಯರ್‌ ಭರವಸೆ ನೀಡಿದರು.

* ಚಾಮರಾಜಪೇಟೆ ಭಾಗದಲ್ಲಿ ನಕಲಿ ಬಿಲ್‌ ಹಗರಣದಲ್ಲಿ ಭಾಗಿಯಾಗಿದ್ದ ಗುತ್ತಿಗೆದಾರರಿಗೇ ಹೊಸ ಗುತ್ತಿಗೆ ನೀಡಿದ್ದಕ್ಕೆ ಆ ಭಾಗದ ಸದಸ್ಯರು ಆಕ್ಷೇಪ ಎತ್ತಿದರು. ಗುತ್ತಿಗೆ ರದ್ದುಗೊಳಿಸಿ ಮರು ಟೆಂಡರ್‌ ಕರೆಯಲು ಆಗ್ರಹಿಸಿದರು.

* ತ್ಯಾಜ್ಯನಿರ್ವಹಣಾ ತಜ್ಞ ಎನ್‌.ಎಸ್‌. ರಮಾಕಾಂತ್‌ ಅವರಿಂದ ಕಸದ ವಿಲೇವಾರಿ ಕುರಿತಂತೆ ಸದಸ್ಯರಿಗೆ ಪಾಠ ಮಾಡಿಸಲಾಯಿತು

Write A Comment