ಬರಿಪದ: ಜಿಲ್ಲಾ ಕಲೆಕ್ಟರ್ ಅವರನ್ನು ಭೇಟಿ ಮಾಡುವುದಕ್ಕಾಗಿ ಪಕಟಿಯಾ ಸರ್ಕಾರಿ ಪ್ರೌಢಶಾಲೆಯ 73 ವಿದ್ಯಾರ್ಥಿನಿಯರು ನಿನ್ನೆ ರಾತ್ರಿ ಸುಮಾರು 30 ಕಿ.ಮೀ ನಡೆದುಕೊಂಡು ಹೋಗಿರುವ ಘಟನೆ ಒಡಿಶಾದ ಮಯುರ್ ಬಾಂಜ್ ಜಿಲ್ಲೆಯ ಬರಿಪದ ಎಂಬಲ್ಲಿ ನಡೆದಿದೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿಕೊಳ್ಳಲು ರಾತ್ರಿಯ ವೇಳೆ ಸುಮಾರು 30 ಕಿಲೋ ಮೀಟರ್ ನಡೆದ ಸರ್ಕಾರಿ ಶಾಲೆ ವಿದ್ಯಾರ್ಥಿನಿಯರು ಕಲೆಕ್ಟರ್ ರಾಜೇಶ್ ಪ್ರವಾಕರ್ ಪಾಟಿಲ್ ಅವರನ್ನು ಭೇಟಿ ಮಾಡಿದ್ದಾರೆ.
ನಿನ್ನೆ ಸಂಜೆ ಹಾಸ್ಟೆಲ್ ನಿಂದ ನಡೆದು ಹೋದ ವಿದ್ಯಾರ್ಥಿನಿಯರು ಮಧ್ಯರಾತ್ರಿಯ ವೇಳೆಗೆ ಕಲೆಕ್ಟರ್ ಅವರ ಮನೆ ತಲುಪಿದ್ದಾರೆ. ಹಾಸ್ಟೆಲ್ ನಲ್ಲಿ ತಮಗೆ ಕಿರುಕುಳ ನೀಡಲಾಗುತ್ತಿದೆ. ಹಾಸ್ಟೆಲ್ ನ ಕೆಲ ಸಿಬ್ಬಂದಿಗಳು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಆಡಳಿತ ಮಂಡಳಿ ಅಲಕ್ಷ್ಯತೆಯಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ತಮ್ಮ ನೋವುಗಳನ್ನು ಕಲೆಕ್ಟರ್ ಬಳಿ ಹಂಚಿಕೊಂಡಿದ್ದಾರೆ.