ಕರ್ನಾಟಕ

ಕಸ ವಿಲೇವಾರಿಗೆ ದೇವರೆ ದಿಕ್ಕು

Pinterest LinkedIn Tumblr

27A6ಬೆಂಗಳೂರು, ಜ. ೨೭- ನಗರದಲ್ಲಿ 95 ವಾರ್ಡ್‌ಗಳ ಪೈಕಿ 35 ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಟೆಂಡರ್‌ಗೆ ಗುತ್ತಿಗೆದಾರರು ಪಾಲ್ಗೊಂಡಿದ್ದು, ಉಳಿದ ವಾರ್ಡ್‌ಗಳಲ್ಲಿ ಗುತ್ತಿಗೆದಾರರು ಮುಂದೆ ಬಾರದಿದ್ದ ಹಿನ್ನೆಲೆಯಲ್ಲಿ ಮರು ಟೆಂಡರ್ ಕರೆಯಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ಇಂದು ಇಲ್ಲಿ ತಿಳಿಸಿದರು.
ತೆರಿಗೆ ವಸೂಲಾತಿ ಆಂದೋಲನದ ಅಡಿ ಮೇಯೋ ಹಾಲ್‌ನಲ್ಲಿ ಕಂದಾಯ ಅಧಿಕಾರಿಗಳ ಸಭೆ ನಡೆಸಿದ ಅವರು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಈ ಬಾರಿಯ ಟೆಂಡರ್‌ನಲ್ಲಿ ನಿಯಮಗಳು ಕಠಿಣವಾಗಿರುವುದರಿಂದ ಅಷ್ಟಾಗಿ ಗುತ್ತಿಗೆದಾರರು ಭಾಗವಹಿಸಿಲ್ಲ ಎಂದೆನಿಸುತ್ತದೆ ಎಂದರು.
ಕನ್ನಹಳ್ಳಿ, ಸೀಗೆಹಳ್ಳಿ ಗ್ರಾಮಸ್ಥರು ಕಸ ವಿಲೇವಾರಿ ಘಟಕಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಉತ್ತರಿಸಿದ ಸಚಿವರು ಅಲ್ಲಿನ ಗ್ರಾಮಸ್ಥರು ತಮ್ಮ ಗ್ರಾಮಗಳು ಮಂಡೂರಿನಂತಾಗುತ್ತವೆ ಎಂಬ ತಪ್ಪು ಕಲ್ಪನೆ ಇಟ್ಟುಕೊಂಡಿದ್ದಾರೆ. ಆದರೆ ಆ ಭಾಗದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ನಡೆಯಲಿದೆ ಎಂದು ತಿಳಿಸಿದರು.
ಕಸ ವಿಲೇವಾರಿಯಿಂದಾಗಿ ದುರ್ವಾಸನೆ ಹರಡುತ್ತದೆ ಎಂದು ಗ್ರಾಮಸ್ಥರು ದೂರಿದ್ದಾರೆ. ನಾನು ಅನಿರೀಕ್ಷಿತವಾಗಿ ಕನ್ನಹಳ್ಳಿ, ಸೀಗೆಹಳ್ಳಿ ಘಟಕಗಳಿಗೆ ಭೇಟಿ ನೀಡಿ ಪರಿಶೀಲಸಲಿದ್ದೇನೆ ಎಂದರು.
ಬಿಬಿಎಂಪಿ ಆಯವ್ಯಯದ ಬಗ್ಗೆ ಮೇಯರ್ ಅವರನ್ನೇ ಕೇಳಿ ಎಂದ ಸಚಿವರು ಈ ಬಾರಿಯ ಬಜೆಟ್ ಗಾತ್ರದ ಬಗ್ಗೆ ಯಾವುದೇ ಸುಳಿವು ನೀಡಲಿಲ್ಲ.
ನಗರದಲ್ಲಿ ಬಂಡವಾಳ ಹೂಡಿಕೆ ಸಮಾವೇಶ ನಡೆಯುತ್ತಿದ್ದು, ನಗರದ ರಸ್ತೆಗಳು, ಫುಟ್‌ಪಾತ್‌ಗಳನ್ನು ಅಭಿವೃದ್ಧಿ ಪ‌ಡಿಸಲಾಗುತ್ತಿದೆ ಎಂದರು.
ಬಿಬಿಎಂಪಿ ಹಾಗೂ ಸರ್ಕಾರದ ಹಣಕಾಸು ನೆರವಿನೊಂದಿಗೆ ಅರಮನೆ ಸುತ್ತಮುತ್ತಲಿನ ಪ್ರದೇಶಗಳನ್ನು ಸುಂದರಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಅವರು ತಿಳಿದರು.
ಕಸ ವಿಲೇವಾರಿ ಘಟಕಗಳಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ನಿಗಾ ವಹಿಸಲಾಗುವುದು. ಅಲ್ಲಿ ವೈಜ್ಞಾನಿಕವಾಗಿಯೇ ಕಸ ವಿಲೇವಾರಿ ಮಾಡಿ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಮೇಯರ್ ಬಿ.ಎನ್. ಮಂಜುನಾಥ್ ರೆಡ್ಡಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಿವರಾಜು, ಮತ್ತಿತರರು ಉಪಸ್ಥಿತರಿದ್ದರು.

Write A Comment