ಕರ್ನಾಟಕ

ತಲೆನೋವಾದ ಬಿಜೆಪಿ ಅಭ್ಯರ್ಥಿ ಆಯ್ಕೆ ಕಟ್ಟಾಗೆ ವೆಚ್ಚ ಬೇಕಂತೆ..! ಕೈನತ್ತ ಸೂರ್ಯಕಾಂತ?

Pinterest LinkedIn Tumblr

bjpfiಬೆಂಗಳೂರು, ನ.20- ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವುದಾದರೆ  ಪಕ್ಷದ ವತಿಯಿಂದಲೇ ಚುನಾವಣಾ ವೆಚ್ಚ ಭರಿಸಬೇಕೆಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಪಟ್ಟು ಹಿಡಿದಿರುವುದು ಇನ್ನಷ್ಟು ಬಿಕ್ಕಟ್ಟನ್ನು ಸೃಷ್ಟಿಸಿದೆ.

ಮತ್ತೊಂದೆಡೆ ಈಗಾಗಲೇ ಬೀದರ್ ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಘೋಷಣೆಯಾದರೂ ಸೂರ್ಯಕಾಂತ ನಾಗಮಾರಪಲ್ಲಿ ಕೈನತ್ತ ಮುಖ ಮಾಡುತ್ತಿರುವುದು ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ಸದ್ಯಕ್ಕೆ ದೇವದುರ್ಗ ವಿಧಾನಸಭಾ ಕ್ಷೇತ್ರ ಹೊರತುಪಡಿಸಿದರೆ ಉಳಿದೆರಡು ಕ್ಷೇತ್ರಗಳಾದ ಹೆಬ್ಬಾಳ ಮತ್ತು ಬೀದರ್ ಉತ್ತರ ಕ್ಷೇತ್ರಗಳು ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿರು ವುದು ಬಿಜೆಪಿ ನಾಯಕರಿಗೆ ಸಮಸ್ಯೆ ಕಗ್ಗಂಟಾಗಿ  ಪರಿಣಮಿಸಿದೆ.

ದೇವದುರ್ಗದಲ್ಲಿ ಮಾಜಿ ಸಚಿವ ಶಿವನಗೌಡ ನಾಯಕ್ ಇಲ್ಲವೆ ಅವರ ತಾಯಿಗೆ ಟಿಕೆಟ್ ಖಾತರಿಯಾಗಿದೆ. ಉಳಿದಂತೆ ಇನ್ನೆರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಹೆಬ್ಬಾಳ ಕ್ಷೇತ್ರದಿಂದ ತಮಗೇ ಟಿಕೆಟ್ ನೀಡಬೇಕೆಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಪಟ್ಟು ಹಿಡಿದಿದ್ದಾರೆ.  ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಕಟ್ಟಾ ಸುಬ್ರಹ್ಮಣ್ಯನಾಯ್ಡು ಮನವೊಲಿಸುವ ಹೊಣೆಗಾರಿಕೆಯನ್ನು ನೀಡಲಾಗಿದೆ. ಎರಡು ದಿನಗಳಿಂದ ನಿರಂತರವಾಗಿ ಕಟ್ಟಾ ಜತೆ ನಿರಂತರವಾಗಿ ಡಿವಿಎಸ್ ಮಾತುಕತೆ ನಡೆಸಿದ್ದರೂ ಕೂಡ ಸಂಧಾನ ಫಲ ಕೊಟ್ಟಿಲ್ಲ. ಹೆಬ್ಬಾಳ ಕ್ಷೇತ್ರದಿಂದ ತಮಗೇ ಟಿಕೆಟ್ ನೀಡಬೇಕೆಂದು ಕಟ್ಟಾ ತಮ್ಮ ಪಟ್ಟನ್ನು ಸಡಿಲಿಸದಿರುವುದು ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಒಂದು ವೇಳೆ ನನ್ನನ್ನು ಹೊರತುಪಡಿಸಿ ಕ್ಷೇತ್ರದಲ್ಲಿ ಬೇರೊಬ್ಬರಿಗೆ ಟಿಕೆಟ್ ನೀಡಿದರೆ ಚುನಾವಣಾ ಕಣದಿಂದ ತಟಸ್ಥರಾಗಿ ಉಳಿಯುತ್ತೇನೆಂದು ಹೇಳಿರುವುದು ಇನ್ನಷ್ಟು ಇಕ್ಕಟ್ಟು ಸೃಷ್ಟಿಸಿದೆ.

ನನ್ನನ್ನು ಹೊರತುಪಡಿಸಿ ನಮ್ಮ ಕುಟುಂಬದ ಯಾರೊಬ್ಬರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನ್ನ ಮೇಲೆ ಆರೋಪಗಳಿದ್ದರೂ ನ್ಯಾಯಾಲಯದಲ್ಲಿ ನಾನು ಕಾನೂನು ಸಮರ ನಡೆಸುತ್ತೇನೆ. ಅನೇಕರ ಮೇಲೆ ಆಪಾದನೆಗಳು ಇರುವಾಗ ನನ್ನನ್ನೇಕೆ ಬಲಿಪಶು ಮಾಡುತ್ತೀರೆಂದು ಪಕ್ಷದ ನಾಯಕರ ಮುಂದೆ ಕಟ್ಟಾ ತಮ್ಮ ಅಳಲು ತೋಡಿಕೊಂಡಿದ್ದಾರೆಂದು ತಿಳಿದುಬಂದಿದೆ.

ಇಕ್ಕಟ್ಟಿನಲ್ಲಿ ಕಮಲ:  ಹೀಗೆ ಕಟ್ಟಾ ಸುಬ್ರಹ್ಮಣ್ಯನಾಯ್ಡು ತಮ್ಮ ನಿಲುವನ್ನು ಸಡಿಲಿಸದ ಕಾರಣ ಈ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡಬೇಕೆಂಬುದು ಪಕ್ಷದ ನಾಯಕರಿಗೆ ದಿಕ್ಕೇ ಕಾಣದಂತಾಗಿದೆ. ಕಟ್ಟಾ ಕಡೆಗಣಿಸಿ ಟಿಕೆಟ್ ನೀಡಿದರೆ ನಾಳೆ ಒಳ ಹೊಡೆತ ನೀಡಬಹುದೆಂಬ ಗುಮ್ಮವು ವರಿಷ್ಠರನ್ನು ಕಾಡುತ್ತಿದೆ. ಹೀಗಾಗಿ ಅವರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಸಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪಕ್ಷದ ನಾಯಕರು ಕಸರತ್ತು ನಡೆಸುತ್ತಿದ್ದಾರೆ.

ಕಟ್ಟಾ ಸುಬ್ರಹ್ಮಣ್ಯನಾಯ್ಡು ಸೂಚಿಸುವ ಅಭ್ಯರ್ಥಿಗೇ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ. ಅವರ ಸೊಸೆ ಸೌಮ್ಯ ಇಲ್ಲವೆ ಮಾಜಿ ಶಾಸಕ ದಿ.ಜಗದೀಶ್ ಕುಮಾರ್ ಪತ್ನಿ ಲಲಿತಾ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಇನ್ನೂ ಗೊಂದಲ: ಬೀದರ್ ಉತ್ತರ ಲೋಕಸಭಾ ಕ್ಷೇತ್ರದಿಂದ ಈಗಾಗಲೇ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಪುತ್ರ ಸೂರ್ಯಕಾಂತ ನಾಗಮಾರಪಲ್ಲಿಗೆ ಬಿಜೆಪಿ ಟಿಕೆಟ್ ನೀಡಲು ಮುಂದಾಗಿತ್ತು. ಆದರೆ, ಕಳೆದೆರಡು ದಿನಗಳಿಂದ ಹಬ್ಬಿರುವ ವದಂತಿಯೊಂದು ಬಿಜೆಪಿ ನಾಯಕರನ್ನು ನಿದ್ದೆಗೆಡುವಂತೆ ಮಾಡಿದೆ. ಈಗಾಗಲೇ ಸೂರ್ಯಕಾಂತ ನಾಗಮಾರಪಲ್ಲಿ ಪರ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಪ್ರಚಾರ ನಡೆಸುತ್ತಿದ್ದಾರೆ.  ಈ ಬೆಳವಣಿಗೆಗಳ ನಡುವೆಯೇ ಸೂರ್ಯಕಾಂತ ನಾಗಮಾರಪಲ್ಲಿ ಕಾಂಗ್ರೆಸ್‌ನಿಂದಲೂ ಟಿಕೆಟ್ ಪಡೆದು ಸ್ಪರ್ಧಿಸುವ ಕಸರತ್ತು ನಡೆಸುತ್ತಿದ್ದಾರೆ. ಇದು ಬಿಜೆಪಿಯನ್ನು ಚಿಂತೆಗೀಡುಮಾಡಿದೆ. ಒಟ್ಟಿನಲ್ಲಿ ಉಪಚುನಾವಣೆ ಬಿಜೆಪಿಯಲ್ಲಿ ದಿನಕ್ಕೊಂದು ವಿವಾದ ಸೃಷ್ಟಿಸುತ್ತಿದ್ದು, ಕೊನೆ ಕ್ಷಣದವರೆಗೂ ಯಾರು, ಯಾವ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲಿದ್ದಾರೆ ಎಂಬುದು ನಿಗೂಢವಾಗಿದೆ.

Write A Comment