ಬೆಂಗಳೂರು, ಜ.20-ಫೆಬ್ರವರಿ 3 ರಿಂದ 5ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಯಾವುದೇ ಪ್ಲೆಕ್ಸ್‌ಗಳು ಇರದಂತೆ ನೋಡಿಕೊಳ್ಳಬೇಕೆಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಸೂಚಿಸಿದ್ದಾರೆ. ಅರಮನೆ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ಬಂಡವಾಳ ಹೂಡಿಕೆದಾರರ ಸಮಾವೇಶದ ಪೂರ್ವಬಾವಿ ಸಿದ್ಧತೆ ಪರಿಶೀಲನೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾವೇಶದ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಯಾವುದೇ ಪ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್‌ಗಳು ಇರಬಾರದು. ಬೆಂಗಳೂರನ್ನು ಶುಚಿ ಮತ್ತು ಸುಂದರ ಸಿಟಿಯನ್ನಾಗಿ ನೋಡಿಕೊಳ್ಳಬೇಕು. ಯಾವುದೇ ಪಕ್ಷಗಳ ಪ್ಲೆಕ್ಸ್, ಬ್ಯಾನರ್‌ಗಳಿದ್ದರೂ ನಿರ್ಧಾಕ್ಷೀಣ್ಯವಾಗಿ ತೆರವುಗೊಳಿಸಬೇಕೆಂದು ಬಿಬಿಎಂಪಿ ಕಮಿಷನರ್ ಕುಮಾರ್‌ನಾಯಕ್ ಅವರಿಗೆ ಸಚಿವರು ಸೂಚಿಸಿದ್ದಾರೆ.
ಬಂಡವಾಳ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ನಗರ ಪ್ರದಕ್ಷಿಣೆ ಮಾಡಿದ ದೇಶಪಾಂಡೆ ಅವರು ಸಿದ್ಧತೆಗಳ ಪರಿಶೀಲನೆ ನಡೆಸಿದರು. ವಸಂತನಗರ ಮಿಲ್ಲರ್ಸ್ಲ ರೋಡ್, ಜಯಮಾಲ್ ರೋಡ್, ಹೆಬ್ಬಾಳ ಪ್ಲೈಓವರ್ ಮುಂತಾದ ಕಡೆ ಪರಿಶೀಲನೆ ನಡೆಸಿದರು. ಜಯಮಾಲ್ ರೋಡ್, ಹೆಬ್ಬಾಳ ಪ್ಲೈಓವರ್‌ಗೆ ಸಮಾವೇಶದ ಹಿನ್ನೆಲೆಯಲ್ಲಿ ಡಾಂಬರೀಕರಣ ನಡೆಯುತ್ತಿದೆ.
ಸಚಿವರು ಇಂದು ಹೋದ ದಾರಿಯಲ್ಲೆಲ್ಲಾ ಟ್ರಾಫಿಕ್ ಜಾಮ್ ಉಂಟಾಗಿತ್ತು. ಏರ್‌ಫೋರ್ಟ್ ರೋಡ್‌ನಲ್ಲಿ ಬಿಬಿಎಂಪಿಯಿಂದ ಭರ್ಜರಿ ಕಾಮಗಾರಿ ನಡೆಯುತ್ತಿತ್ತು. ಡಿವೈಡರ್ ಸ್ವಚ್ಛಗೊಳಿಸುವ ಮತ್ತು ಬಣ್ಣ ಹಚ್ಚುವ ಕೆಲಸ ನಡೆಯುತ್ತಿತ್ತು. ಪರಿಶೀಲನಾ ಸಂದರ್ಭದಲ್ಲಿ ಕೃಷಿ ಸಚಿವ ಕೃಷ್ಣಭೈರೇಗೌಡ, ಎಸ್.ಆರ್.ಪಾಟೀಲ್, ಮೇಯರ್ ಮಂಜುನಾಥ ರೆಡ್ಡಿ, ಬಿಬಿಎಂಪಿ ಆಯುಕ್ತ ಕುಮಾರ್‌ನಾಯಕ್, ಕೈಗಾರಿಕಾ ಇಲಾಖೆ ಕಾರ್ಯದರ್ಶಿ ರತ್ನಪ್ರಭಾ, ಬಿಬಿಎಂಪಿ ಅಧಿಕಾರಿಗಳು ಜೊತೆಯಲ್ಲಿದ್ದರು.