ಬೆಂಗಳೂರು: ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ಜ.30ರಂದು ನಡೆಯುವ ಹುತಾತ್ಮರ ದಿನಾಚರಣೆ ಸಂದರ್ಭದಲ್ಲಿ 2 ನಿಮಿಷಗಳ ಮೌನವನ್ನು ಕಡ್ಡಾಯವಾಗಿ ಆಚರಿಸಲು ರಾಜ್ಯ ಸರ್ಕಾರ ಸೂಚಿಸಿದೆ.
ಅಂದು ಬೆಳಗ್ಗೆ 11ಕ್ಕೆ 2 ನಿಮಿಷಗಳ ಮೌನಾಚರಿಸಬೇಕು. ಮೌನಾಚರಣೆ ಆರಂಭ ಮತ್ತು ಅಂತ್ಯ ಸೂಚಿಸುವ ಸಲುವಾಗಿ ಸೈರನ್ ಕೂಗಿಸಬೇಕು. ಲಭ್ಯವಿದ್ದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಬೇಕು. ರಾಜ್ಯದ ಪೊಲೀಸ್ ಮಹಾನಿರೀಕ್ಷಕರು ಇದಕ್ಕೆ ಅಗತ್ಯ ಏರ್ಪಾಡು ಮಾಡಬೇಕು. ಶಬ್ದ ಕೇಳಿದ ಕೂಡಲೇ ಜನರು ನಿಂತಲ್ಲೇ ಮೌನ ಆಚರಿಸಬೇಕೆಂದು ಸ್ಥಾಯಿ ಸೂಚನೆಯಲ್ಲಿ ವಿವರಿಸಲಾಗಿದೆ. ಮೌನಾಚರಣೆ ಸಂದರ್ಭದಲ್ಲಿ ಕಾರ್ಖಾನೆ ಹಾಗೂ ವರ್ಕ್ಶಾಪ್ಗಳೂ ಕೆಲಸ ಸ್ಥಗಿತಗೊಳಿಸಬೇಕು. ಬೆಳಗ್ಗೆ 11ಕ್ಕೆ ಹೊರಡುವ ವಿಮಾನ, ಹಡಗು, ರೈಲುಗಳು 2 ನಿಮಿಷ ವಿಳಂಬವಾಗಿ ಹೊರಡಬೇಕೆಂದು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ.
ಕಾರ್ಯಕ್ರಮಗಳನ್ನು ರೂಪಿಸುವ ಜವಾಬ್ದಾರಿ ಆಯಾ ಇಲಾಖಾ ಮುಖ್ಯಸ್ಥರು ಮತು ಜಿಲ್ಲಾಧಿಕಾರಿಗಳದ್ದಾಗಿದೆ. ಬೆ.10.44 -10.56ರವರೆಗೆ ಸುಮಿರನ ಕರಲೆ ಮೇರೆ ಮನ್…. ವೈಷ್ಣವೋ ಜನತೋ…. ಮತ್ತು ರಘುಪತಿ ರಾಘವ ರಾಜಾರಾಂ ಭಜನೆಗಳನ್ನು ಕ್ರಮವಾಗಿ ಹಾಡಬೇಕು. ನಂತರ ಸ್ವಾತಂತ್ರ್ಯ ಹೋರಾಟಗಾರರ ದಿಟ್ಟತನ ಹಾಗೂ ಪರಿಶ್ರಮದ ಮಹತ್ವ ತಿಳಿಸುವ ಉಪನ್ಯಾಸಗಳನ್ನು ಏರ್ಪಡಿಸಬೇಕು. ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಪ್ರಾದೇಶಿಕ ಆಯುಕ್ತರು, ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಮತ್ತಿತರ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿರುವ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಸರ್ಕಾರ ಸೂಚಿಸಿದೆ.