ಅಗರ್ತಲಾ: ತನ್ನ ಎರಡನೇ ಪತಿಯನ್ನು ಕೊಲ್ಲುವ ಉದ್ದೇಶದಿಂದ ಆತನಿಗಾಗಿ ಆತನ ಪತ್ನಿಯು ಸಿದ್ಧಪಡಿಸಿಟ್ಟಿದ್ದ ವಿಷ ಬೆರೆಸಿದ ಚಹಾವನ್ನು ನಾಲ್ಕು ವರ್ಷದ ಮಗಳು ಸೇವಿಸಿ ಮೃತಪಟ್ಟರೆ 12 ವರ್ಷ ಪ್ರಾಯದ ಮತ್ತೂಬ್ಬ ಮಗಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಇಲ್ಲಿಂದ 25 ಕಿ.ಮೀ. ದೂರದ ಗೋವಿಂದ ಸರ್ದಾರ್ ಪಾರಾ ಎಂಬಲ್ಲಿ ನಡೆದಿದೆ.
ಸೀತಾ ರಾಣಿ ದೇಬರ್ಮ (29) ಎಂಬಾಕೆಯ ತನ್ನ ಎರಡನೇ ಪತಿಯಾಗಿರುವ ಗೌತಮ್ ದೇಬರ್ಮ ನನ್ನು ಕೊಲ್ಲುವ ಉದ್ದೇಶದಿಂದ ವಿಷ ಬೆರೆಸಿದ ಚಹಾವನ್ನು ಸಿದ್ಧಪಡಿಸಿ ಕೊಟ್ಟಿದ್ದಳು. ಆದರೆ ವಿಧಿಯ ವಿಪರ್ಯಾಸವೆಂಬಂತೆ ಆತ ಆ ಚಹಾ ಸೇವಿಸದೆ ಹಾಗೆಯೇ ಬಿಟ್ಟು ಹೋಗಿದ್ದ.
ಈ ವಿಷಯುಕ್ತ ಚಹಾವನ್ನು ಸೀತಾ ರಾಣಿಯ ಇಬ್ಬರು ಪುತ್ರಿಯರಾದ ಶ್ರಿಯಾ (4) ಮತ್ತು ಮೆರಿ ದೇಬರ್ಮ ಸೇವಿಸಿದರು.
ದುರದೃಷ್ಟವೆಂಬಂತೆ ಒಡನೆಯೇ ಅಸ್ವಸ್ಥರಾದ ಇವರಿಬ್ಬರನ್ನು ಜಿಬಿ ಆಸ್ಪತ್ರೆಗೆ ಸಾಗಿಸಲಾಯಿತು. ಶ್ರಿಯಾ ಮಾರ್ಗ ಮಧ್ಯದಲ್ಲೇ ಅಸುನೀಗಿದಳು. ಮೆರಿ ದೇಬರ್ಮ ಳ ಸ್ಥಿತಿಯು ಈಗ ಗಂಭೀರವಿದ್ದು ಆಕೆ ಸಾವು – ಬದುಕಿನ ಹೋರಾಟದಲ್ಲಿದ್ದಾಳೆ ಎಂದು ಪೊಲೀಸ್ ಕಂಟ್ರೋಲ್ ವಿಭಾಗದ ಎಸ್ ಪಿ ಉತ್ತಮ್ ಭೌಮಿಕ್ ತಿಳಿಸಿದ್ದಾರೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
-ಉದಯವಾಣಿ