ಬೆಂಗಳೂರು, ಜ.19- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಹಬ್ಬದಲ್ಲಿ ಚಿನ್ನದ ಅಂಬಾರಿ ಹೊರುತ್ತಿದ್ದ ಆನೆ ಅರ್ಜುನ ಕೊನೆಗೂ ಪತ್ತೆಯಾಗಿದೆ. ಕಳೆದ ಒಂದು ವಾರದ ಹಿಂದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಕ್ಯಾಂಪ್‌ನಿಂದ ಅರ್ಜುನನು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದನು. 54 ವರ್ಷದ ಅರ್ಜುನನು ಕೇರಳ ಸಮೀಪದ ಗಡಿ ಭಾಗದಲ್ಲಿ ಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳು ಪುನಃ ರಾಷ್ಟ್ರೀಯ ಉದ್ಯಾನವನಕ್ಕೆ ಕರೆ ತಂದಿದ್ದಾರೆ. ಕೇರಳ ಸಮೀಪದ ಕುಟ್ಟಾ ಎಂಬಲ್ಲಿ ತಿರುಗಾಡುತ್ತಿದ್ದ ಈ ಆನೆಯನ್ನು ಅರಣ್ಯಾಧಿಕಾರಿಗಳು ಪತ್ತೆ ಮಾಡಿದ್ದಾರೆ.
ಈ ಬಾರಿ ದಸರಾ ವೇಳೆ ನಾಡದೇವಿ ಚಾಮುಂಡೇಶ್ವರಿ ಅಂಬಾರಿ ಹೊತ್ತು ಸಾಗಿದ್ದ ಅರ್ಜುನ ಹಲವು ವರ್ಷಗಳಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸ್ತವ್ಯ ಹೂಡಿತ್ತು. ಕಳೆದ ವಾರ ಬೆಳಗ್ಗೆ ಆಹಾರ ಸೇವನೆ ಮಾಡಿದ ಬಳಿಕ ಎಂದಿನಂತೆ ಆನೆಯನ್ನು ಮಾವುತರು ಅರಣ್ಯದೊಳಗೆ ಬಿಟ್ಟಿದ್ದರು. ದಿನಂಪ್ರತಿ ಸಂಜೆಯಾಗುತ್ತಿದ್ದಂತೆ ಕ್ಯಾಂಪ್‌ಗೆ ಹಿಂತಿರುಗುತ್ತಿದ್ದ ಅರ್ಜುನ ಅಂದು ಸುಮಾರು ಹೊತ್ತಾದರೂ ಕ್ಯಾಂಪ್‌ಗೆ ಬಂದಿರಲಿಲ್ಲ.
ಕಂಗಾಲಾದ ಮಾವುತರು ಆರು ದಿನಗಳಿಂದ ಅರ್ಜುನನ್ನು ಪತ್ತೆ ಮಾಡಲು ಕಾಡು ಮೇಡು ಅಲೆದಿದ್ದಾರೆ. ಕೊನೆಗೆ ಕೇರಳದ ಅರಣ್ಯಾಧಿಕಾರಿಗಳಿಗೆ ಆನೆ ನಾಪತ್ತೆಯಾಗಿರುವ ವಿಷಯವನ್ನು ನೀಡಲಾಗಿತ್ತು. ಕುಟ್ಟಾ ಎಂಬಲ್ಲಿ ಆನೆಯೊಂದು ತಿರುಗಾಡುತ್ತಿದೆ ಎಂಬ ಮಾಹಿತಿಯನ್ನು ಅರಣ್ಯಾಧಿಕಾರಿಗಳು ಮಾವುತರಿಗೆ ನೀಡಿದರು. ಸ್ಥಳಕ್ಕೆ ಧಾವಿಸಿದ ಮಾವುತರು ಅರ್ಜುನನ್ನು ಹಿಡಿದು ಪುನಃ ಶಿಬಿರಕ್ಕೆ ಕರೆತಂದಿದ್ದಾರೆ. ಕಳೆದ ಐದು ವರ್ಷಗಳಿಂದ ಇದೇ ಆನೆ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯನ್ನು ಹೊತ್ತು ಸಾಗುತ್ತಿದೆ.