ಬೆಂಗಳೂರು, ಜ.18- ಇಬ್ಬರು ಯುವಕರನ್ನು ಅಪಹರಣ ಮಾಡಿ ಒಂದು ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದ ಅಪಹರಣಕಾರರ ಪೈಕಿ ಒಬ್ಬಾತನನ್ನು ದೊಣ್ಣೆ, ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ, ಮತ್ತೊಬ್ಬನ ಕೊಲೆಗೆ ಯತ್ನಿಸಿರುವ ಘಟನೆ ಆರ್.ಟಿ.ನಗರ ಠಾಣಾ ವ್ಯಾಪ್ತಿಯಲ್ಲಿ ಮುಂಜಾನೆ ನಡೆದಿದೆ. ಗಂಗಾನಗರದ ನಿವಾಸಿ, ಕಾರು ಚಾಲಕ ಅರುಣ್ಕುಮಾರ್ (27) ಕೊಲೆಯಾದ ಅಪಹರಣಕಾರ. ಘಟನೆಯಲ್ಲಿ ದರ್ಶನ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾನೆ.
ಘಟನೆ ವಿವರ: ನಿನ್ನೆ ರಾತ್ರಿ ಅರುಣ್ಕುಮಾರ್, ದರ್ಶನ್, ವರುಣ್ ಸೇರಿದಂತೆ ಆರು ಮಂದಿ ಅಪಹರಣಕಾರರು ರವಿ ಬಾವರ್ ಮತ್ತು ಸಂದೀಪ್ ಎಂಬ ಯುವಕರನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ಅರಮನೆ ಮೈದಾನ ಇನ್ನಿತರೆಡೆಗಳಲ್ಲಿ ನಡೆಯುವ ಸಮಾರಂಭಗಳಿಗೆ ಕ್ಯಾಟರಿಂಗ್ ಮಾಡುವ ರವಿ ಬಾವರ್ ಮತ್ತು ಸಂದೀಪ್ನನ್ನು ಕಿಡ್ನ್ಯಾಪ್ ಮಾಡಿದ ಆರು ಮಂದಿ ಅಪಹರಣಕಾರರು 1 ಲಕ್ಷ ರೂ.ಗೆ ಬೇಡಿಕೆಯಿಟ್ಟು ಇಷ್ಟು ಹಣ ಕೊಟ್ಟರೆ ನಿಮ್ಮನ್ನು ಬಿಡುವುದಾಗಿ ಚಿಕ್ಕಜಾಲಕ್ಕೆ ಕರೆದೊಯ್ಯುತ್ತಾರೆ. ಈ ನಡುವೆ ರವಿ ಬಾವರ್ ಮತ್ತು ಸಂದೀಪ್ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಗಂಗಾನಗರಕ್ಕೆ ಬಂದರೆ ನಿಮಗೆ ಹಣ ಕೊಡುವುದಾಗಿ ರವಿಬಾವರ್ ಅಪಹರಣಕಾರರನ್ನು ನಂಬಿಸಿದ್ದಾನೆ. ಇವರ ಮಾತನ್ನು ನಂಬಿದ ಅರುಣ್ಕುಮಾರ್, ದರ್ಶನ್, ವರುಣ್ ಗಂಗಾನಗರಕ್ಕೆ ಇಂದು ಮುಂಜಾನೆ 2 ಗಂಟೆ ಸಂದರ್ಭದಲ್ಲಿ ಕಾರಿನಲ್ಲಿ ಇವರಿಬ್ಬರನ್ನು ಕರೆತರುತ್ತಿದ್ದಾಗ ರವಿಬಾವರ್ ಮತ್ತು ಸಂದೀಪ್ ಕಡೆಯವರು ಕಾರು ತಡೆದು ಏಕಾಏಕಿ ದೊಣ್ಣೆ , ಮಚ್ಚಿನಿಂದ ದಾಳಿ ಮಾಡಿ ಆರುಣ್ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಅಲ್ಲದೆ, ದರ್ಶನ್ ಕೈಗೆ ಮಚ್ಚಿನಿಂದ ಹಲ್ಲೆ ನಡೆಸಿದಾಗ ಗಾಬರಿಯಾದ ವರುಣ್ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಇತ್ತ ರವಿಬಾವರ್ ಮತ್ತು ಸಂದೀಪ್ನನ್ನು ಸ್ನೇಹಿತರು ಘಟನಾ ಸ್ಥಳದಿಂದ ಕರೆದೊಯ್ದಿದ್ದಾರೆ. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದ ಅರುಣ್ಕುಮಾರ್ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದು, ಶವವನ್ನು ಅಂಬೇಡ್ಕರ್ ಮೆಡಿಕಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ದಾಳಿ ವೇಳೆ ಗಂಭೀರ ಗಾಯಗೊಂಡಿರುವ ದರ್ಶನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದು ಡಿಸಿಪಿ ಟಿ.ಆರ್.ಸುರೇಶ್ ಮತ್ತು ಎಸಿಪಿ ಸಿದ್ದಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಆರ್.ಟಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಉಳಿದ ಅಪಹರಣಕಾರರಿಗಾಗಿ ಶೋಧ ಮುಂದುವರೆಸಿದ್ದಾರೆ.