ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿದ್ದರೂ ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗ ಎಂಬ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರ ವಿವಾದಾತ್ಮಕ ಹೇಳಿಕೆ ರಾಜ್ಯದ ಗಡಿ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪುಣೆಯ ಪಿಂಪ್ರಿಯಲ್ಲಿ ನಡೆದ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ದೇವೇಂದ್ರ ಫಡ್ನವೀಸ್ ನೀಡಿರುವ ಹೇಳಿಕೆ ಯನ್ನು ಖಂಡಿಸಿರುವ ಕನ್ನಡ ಪರ ಹೋರಾಟಗಾರರು, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಗಡಿ ವಿವಾದ ಜೀವಂತವಿರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಎಂಇಎಸ್ ಕಾರ್ಯಕರ್ತರನ್ನು ಖುಷಿ ಪಡಿಸುವ ತಂತ್ರಕ್ಕೆ ಮಹಾರಾಷ್ಟ್ರ ಸಿಎಂ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕನ್ನಡ ಹಾಗೂ ಮರಾಠಿ ಭಾಷಿಕರು ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ. ಭಾಷಾ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ಎಂಇಎಸ್ ಕಾರ್ಯಕರ್ತರದ್ದಾಗಿದೆ ಎಂದು ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರಾಠಿಗರು ಜೀವಂತ ಇರುವವರೆಗೆ ಬೆಳಗಾವಿ ಗಡಿ ಭಾಗದ ಹೋರಾಟ ನಡೆಯುತ್ತಲೇ ಇರುತ್ತದೆ. ಗಡಿ ವಿವಾದದ ಹೋರಾಟಕ್ಕೆ ಮಹಾರಾಷ್ಟ್ರ ಸರ್ಕಾರ, ಮರಾಠಿ ಭಾಷಿಕರ ಬೆಂಬಲ ಇದೆ ಎಂದು ಹೇಳಿಕೆ ನೀಡುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಗಡಿ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.