ಬೆಂಗಳೂರು: ಮುಸ್ಲಿಂ ಜನಸಂಖ್ಯೆ ಹೆಚ್ಚಳದಿಂದಾಗಿ ದೇಶದ ಭದ್ರತೆಗೆ, ಅಖಂಡತೆಗೆ ಧಕ್ಕೆಯಾಗುತ್ತದೆ. ಭಯೋತ್ಪಾದನೆ ಹೆಚ್ಚಳಕ್ಕೂ ಇದೇ ಕಾರಣ ಎನ್ನುತ್ತಿದ್ದ ವಿಶ್ವ ಹಿಂದು ಪರಿಷತ್(ವಿಹಿಂಪ) ಇದೀಗ ಮುಸ್ಲಿಂ ಸಮುದಾಯ ಕುರಿತ ಮನೋಭಾವವನ್ನು ಬದಲಾಯಿಸಿಕೊಂಡಿದೆ. ಬಹುಪತ್ನಿತ್ವ ಹಾಗೂ ಜನಸಂಖ್ಯಾ ಹೆಚ್ಚಳದಿಂದ, ಮುಸ್ಲಿಂ ಸಮುದಾಯ ಅಭಿವೃದ್ಧಿ ಹೊಂದಲು ಅಡ್ಡಗಾಲಾಗುತ್ತದೆ. ಶೀಘ್ರವೇ ಈ ಕುರಿತು ಚಿಂತನೆ ನಡೆಸಬೇಕು ಎಂದು ವಿಹಿಂಪ ಅಭಿಪ್ರಾಯಪಟ್ಟಿದೆ.
ವಸಂತನಗರದ ಸರ್ದಾರ್ ಪಟೇಲ್ ಭವನದಲ್ಲಿ ನಡೆಯುತ್ತಿರುವ ತನ್ನ ಅಂಗ ಸಂಸ್ಥೆ ಬಜರಂಗದಳದ ಎರಡು ದಿನಗಳ ಅಖಿಲ ಭಾರತೀಯ ಬೈಠಕ್ ಸಂದರ್ಭ ಸುದ್ದಿಗೋಷ್ಠಿಯಲ್ಲಿ ವಿಹಿಂಪ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರಕುಮಾರ್ ಜೈನ್ ಮಾತನಾಡಿ, ಒಂದೇ ಸಮುದಾಯದ ಜನಸಂಖ್ಯೆ ಹೆಚ್ಚಳ ಸಹಜವಾದದ್ದಲ್ಲ. ನಿರ್ದಿಷ್ಟ ಉದ್ದೇಶವನ್ನಿಟ್ಟುಕೊಂಡು ನಡೆಯುತ್ತಿರುವ ಬಹುಪತ್ನಿತ್ವ, ಜನಸಂಖ್ಯೆ ಹೆಚ್ಚಳಕ್ಕೆ ರಾಜಕೀಯ ಕೋನವೂ ಇದೆ ಎಂದರು. ವಿಶ್ವದ ಇತರೆ ದೇಶಗಳ ಮುಸ್ಲಿಮರಿಗಿಲ್ಲದ ಈ ಸ್ವಾತಂತ್ರ್ಯಂದಾಗಿ ದೇಶಕ್ಕೆ ಅಪಾಯ ತಪ್ಪಿದ್ದಲ್ಲ. ಅದರ ಜತೆಗೆ, ಮುಸ್ಲಿಂ ಸಮುದಾಯವೇ ಇದರ ಅಡ್ಡಪರಿಣಾಮವನ್ನು ಅನುಭವಿಸುತ್ತದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆ ನಿಯಂತ್ರಣ ಕ್ರಮವನ್ನು ಅಳವಡಿಸಿಕೊಳ್ಳುವುದು ದೇಶದ ಹಾಗೂ ಆ ಸಮುದಾಯದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿದರು.
ಇಬ್ಬರು ಪತ್ನಿಯರಿದ್ದರೆ ಸರ್ಕಾರಿ ಕೆಲಸ ನಿರಾಕರಣೆ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಬೇಕು. ಸಂವಿಧಾನದ 44ನೇ ವಿಧಿಯಲ್ಲಿರುವಂತೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಬೇಕು. ಈಗಾಗಲೇ 5 ಬಾರಿ ಸುಪ್ರೀಂಕೋರ್ಟ್ ಈ ಕುರಿತು ಒತ್ತಾಯಿಸಿದೆ. ಕೇಂದ್ರ ಸರ್ಕಾರ ಕೂಡಲೇ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಸಿದ್ದು ವಿರುದ್ಧ ಆಕ್ರೋಶ
ಹಿಂದುಗಳ ಕೊಲೆ ಹಾಗೂ ಮತಾಂತರ ಮಾಡಿದ ಟಿಪ್ಪು ಸುಲ್ತಾನನ ಜಯಂತಿ ಆಚರಣೆಗೆ ಮುಂದಾದ ಸಿಎಂ ಸಿದ್ದರಾಮಯ್ಯ ಬಗ್ಗೆ ಸುರೇಂದ್ರಕುಮಾರ್ ಜೈನ್ ಅಸಮಾಧಾನ ವ್ಯಕ್ತಪಡಿಸಿದರು. ಬಹುಸಂಖ್ಯಾತರ ವಿರೋಧವಿದ್ದಾಗಲೂ ಪಟ್ಟು ಹಿಡಿದು ಮತಾಂಧನೊಬ್ಬನ ಜಯಂತಿಯನ್ನು ಹಿಂದುಗಳ ಹಬ್ಬದ ದಿನದಂದೇ ಆಚರಿಸುತ್ತಾರೆ ಎಂದರೆ ಸಿಎಂ ಮನಸ್ಥಿತಿ ಎಂಥದ್ದು ಎಂದು ನೀವೇ ಊಹಿಸಿಕೊಳ್ಳಿ ಎಂದರು. ತುಷ್ಟೀಕರಣ ನೀತಿಯಿಂದಾಗಿ ದೇಶಾದ್ಯಂತ ಮುಸ್ಲಿಂ ಸಮಾಜದಲ್ಲಿ ಆಕ್ರಮಣಕಾರಿ ಮನೋವೃತ್ತಿ ಬೆಳೆಯುತ್ತಿದೆ. ಇದು ಮತ್ತಷ್ಟು ಮುಂದುವರಿದು ಕೆಲ ಯುವಕರು ಐಸಿಸ್ ಸೇರ್ಪಡೆಗೊಳ್ಳಲು ಪ್ರೇರಣೆಯಾಗುತ್ತಿದೆ ಎಂದು ತಿಳಿಸಿದರು.
ಒಂದು ಲಕ್ಷ ಸ್ಥಳಗಳಲ್ಲಿ ರಾಮನವಮಿ
ದೇಶದ 80 ಸಾವಿರ ಸ್ಥಳಗಳಲ್ಲಿ ಇದೀಗ ವಿಹಿಂಪ ಶಾಖೆಗಳಿವೆ. ರಾಮನವಮಿ ವೇಳೆಗೆ 1 ಲಕ್ಷಕ್ಕೆ ಏರಿಕೆಯಾಗಲಿದೆ. ಎಲ್ಲ ಕೇಂದ್ರಗಳಲ್ಲೂ ವಿಜೃಂಭಣೆಯ ರಾಮನವಮಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಕ್ಷೇತ್ರಿಯ ಸಂಚಾಲಕ ಸೂರ್ಯನಾರಾಯಣ ತಿಳಿಸಿದರು. ಪ್ರತಿ ವರ್ಷ ಯುವಕರನ್ನು ತರಬೇತಿಗೊಳಿಸಲು 2 ಶಿಬಿರಗಳು ನಡೆಯುತ್ತವೆ. ದೈಹಿಕ ಹಾಗೂ ಬೌದ್ಧಿಕ ಶಿಕ್ಷಣದ ಜತೆಗೆ ಲವ್ಜಿಹಾದ್ನಿಂದ ಹಿಂದು ಯುವತಿಯರನ್ನು ರಕ್ಷಿಸಲು ಆತ್ಮರಕ್ಷಣಾ ಕಲೆಗಳಾದ ಜೂಡೊ, ಕರಾಟೆ ಕಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿಹಿಂಪಕ್ಕೆ ಬಿಜೆಪಿ ಬೇಕಿಲ್ಲ!
ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ನಡೆದ ರಾಮಜನ್ಮಭೂಮಿ ಆಂದೋಲನವನ್ನೇ ಏಣಿಯನ್ನಾಗಿಸಿಕೊಂಡು ಮುಂದುವರಿದ ಭಾರತೀಯ ಜನತಾ ಪಕ್ಷ(ಬಿಜೆಪಿ) ಇದೀಗ ವಿಹಿಂಪನಿಂದ ದೂರವಾಗಿದೆ. ಸಾಮಾನ್ಯವಾಗಿ ವಿಹಿಂಪ, ಬಜರಂಗದಳ ಕಾರ್ಯಕರ್ತರ ಬೆಂಬಲಕ್ಕೆ ನಿಲ್ಲುತ್ತಿದ್ದ ಬಿಜೆಪಿ ನಾಯಕರು, ಕಳೆದ ಬಾರಿ ರಾಜ್ಯದಲ್ಲಿ ಅಧಿಕಾರ ಹಿಡಿದ ನಂತರ ತೋರಿದ ವರ್ತನೆಯಿಂದಾಗಿ ಇಡೀ ಸಂಘಟನೆ ಅಘೊಷಿತವಾಗಿ ಪಕ್ಷದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿಕೊಳ್ಳುತ್ತ ಸಾಗಿದೆ.
ಬಿಜೆಪಿಯನ್ನು ನೆಚ್ಚಿಕೊಂಡು ನಾವು ಕೆಲಸ ಮಾಡುವುದಿಲ್ಲ. ಸ್ವಂತ ನೆಲೆಯಲ್ಲಿ ಕಾರ್ಯನಿರ್ವಹಿಸುವುದು ನಮ್ಮ ಗುಣ. ಬಿಜೆಪಿಯವರು ಬಿಡಿಸಿಕೊಂಡು ಬರುತ್ತಾರೆ ಎಂಬ ಆಶಾಭಾವನೆಯಲ್ಲಿ ನಾವು ಜೈಲಿಗೆ ಹೋಗುವುದಿಲ್ಲ. ಗೋರಕ್ಷಣೆ, ರಾಷ್ಟ್ರರಕ್ಷಣೆಗಾಗಿ ಕಷ್ಟ ಅನುಭವಿಸಲು ಸಿದ್ಧರಾಗಿರುವವರೇ ನಮ್ಮ ಸಂಘಟನೆಯಲ್ಲಿದ್ದಾರೆ ಎಂದು ಬಜರಂಗದಳದ ಹಿರಿಯ ಕಾಯಕರ್ತರೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಜರಂಗದಳದ ಕಾರ್ಯಕರ್ತರನ್ನೇ ಗೂಂಡಾ ಕಾಯ್ದೆಯಡಿ ಬಂಧಿಸಿದ್ದನ್ನು ಸಂಘಟನೆ ಮರೆತಿಲ್ಲ. ಇದರಿಂದ ಅನೇಕ ಕಾರ್ಯಕರ್ತರು ನೋವು ಅನುಭವಿಸಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಸ್ಥಳೀಯ ಬಿಜೆಪಿ ನಾಯಕರು ವೈಯಕ್ತಿಕ ನೆಲೆಗಟ್ಟಿನಲ್ಲಿ ಸಹಾಯ ಮುಂದುವರಿಸಿದ್ದಾರೆ. ಆದರೆ ಇಡೀ ಪಕ್ಷ, ಅದರಲ್ಲೂ ರಾಜ್ಯಮಟ್ಟದ ನಾಯಕರಿಂದ ಸಹಾಯವನ್ನು ಬಹುತೇಕ ಮರೆತೇಬಿಟ್ಟಿದ್ದೇವೆ ಎಂಬುದು ಮತ್ತೊಬ್ಬ ಪದಾಧಿಕಾರಿಯ ಅಭಿಪ್ರಾಯ. ಈ ವಿಚಾರಕ್ಕೆ ಪೂರಕವಾಗಿ ಸುದ್ದಿಗೋಷ್ಠಿಯಲ್ಲಿ ಸುರೇಂದ್ರಕುಮಾರ್ ಜೈನ್ ಮಾತನಾಡಿ, ‘ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಇಷ್ಟವಾಗಲಿ ಅಥವಾ ಕಷ್ಟವಾಗಲಿ ಎನ್ನುವುದಕ್ಕಾಗಿ ಹೋರಾಟ ನಡೆಸುವುದಿಲ್ಲ. ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತರುವುದೂ ನಮ್ಮ ಉದ್ದೇಶವಲ್ಲ. ನಮ್ಮ ಕಾರ್ಯದಿಂದ ಪಕ್ಷಕ್ಕೆ ತೊಂದರೆಯಾದರೆ ಅದಕ್ಕೆ ನಾವು ಜವಾಬ್ದಾರರಲ್ಲ’ ಎಂದು ಪರೋಕ್ಷವಾಗಿ ನುಡಿದರು.