ಕರ್ನಾಟಕ

ಮೇಕೆದಾಟು ಯೋಜನೆಗೆ ಶೀಘ್ರ ಹಸಿರು ನಿಶಾನೆ

Pinterest LinkedIn Tumblr

mekedatuಬೆಂಗಳೂರು, ಜ.12-ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಶೀಘ್ರವೆ ಹಸಿರು ನಿಶಾನೆ ಸಿಗಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ತಿಳಿಸಿದರು. 2ನೆ ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಸಿದ್ಧತೆ ಅಂತಿಮ ಹಂತ ತಲುಪಿದೆ. ಶೀಘ್ರವೆ ಈ ಯೋಜನೆಗೆ ಕೇಂದ್ರದ ಒಪ್ಪಿಗೆ ದೊರೆಯಲಿದ್ದು, ಯೋಜನೆ ಅನುಷ್ಠಾನಕ್ಕೆ ಎಲ್ಲಾ ಸಿದ್ಧ್ದತೆ ನಡೆಸಲಾಗುತ್ತಿದೆ ಎಂದರು. ಬರಪೀಡಿತ ಕೋಲಾರ-ಚಿಕ್ಕಬಳ್ಳಾಪುರ ಮತ್ತಿತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಗೆ ಅನುಮತಿ ದೊರೆತಿದ್ದು, ಕಾಮಗಾರಿ ಪ್ರಾರಂಭವಾಗಿದೆ. ಅರಣ್ಯ ಭಾಗದಲ್ಲಿ ಕಾಮಗಾರಿ ನಡೆಸಲು ಕೆಲವು ಷರತ್ತುಗಳಿದ್ದು, ಅವುಗಳನ್ನು ಪೂರೈಸಿದ ನಂತರ ಅಲ್ಲಿಯೂ ಕಾಮಗಾರಿಗೆ ಅನುಮತಿ ದೊರೆಯಲಿದೆ ಎಂದು ಹೇಳಿದರು.

ಮಹದಾಯಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಗೋವಾ ಮುಖ್ಯಮಂತ್ರಿಗೆ ಪತ್ರಬರೆದಿದ್ದು, ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ. ಅಲ್ಲದೆ ಮತ್ತೊಂದು ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿಗೆ ಬರೆದು ಈ ವಿಚಾರವನ್ನು ನೆನಪಿಸುವಂತೆ ಮನವಿ ಮಾಡಲಾಗುವುದು.

ಈ ವಿಷಯದಲ್ಲಿ ಪ್ರತಿಪಕ್ಷವಾದ ಬಿಜೆಪಿ ಆಗುವ ಕೆಲಸ ಮಾಡಬೇಕು. ವಿನಾಕಾರಣ ಟೀಕಿಸುವುದು ಸರಿಯಲ್ಲ. ಗೋವಾ ಮುಖ್ಯಮಂತ್ರಿ ಅವರಿಂದ ಮಾತುಕತೆಗೆ ಅನುಮತಿ ದೊರೆತ ತಕ್ಷಣ ಅಲ್ಲಿನ ಪ್ರತಿಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ಅನಗತ್ಯ ಗೊಂದಲ ಉಂಟುಮಾಡುವುದು ಬೇಡ ಎಂದರು. ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳೆತ್ತುವ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ನೆದರ್‌ಲ್ಯಾಂಡ್ ಮೂಲದ ಕಂಪೆನಿಯೊಂದು ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ಆಸಕ್ತಿ ಹೊಂದಿದೆ. ಈ ಬಗ್ಗೆ ಇನ್ನೊಂದು ತಿಂಗಳಿನಲ್ಲಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.

ಎರಡು ಪ್ರತ್ಯೇಕ ಜಲಾಶಯ ನಿರ್ಮಾಣ ಸೇರಿದಂತೆ ಪರ್ಯಾಯ ವ್ಯವಸ್ಥೆ ಬಗ್ಗೆಯೂ ಚಿಂತಿಸಲಾಗುತ್ತಿದೆ. ಜಲಾಶಯದಲ್ಲಿ 32ಟಿಎಂಸಿ ಹೂಳು ತುಂಬಿಕೊಂಡಿದ್ದು, ತುರ್ತಾಗಿ ಹೂಳೆತ್ತಬೇಕಾಗಿದೆ ಎಂದು ತಿಳಿಸಿದರು.
ಇದಕ್ಕು ಮುನ್ನ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಣೆಕಟ್ಟು ಸುರಕ್ಷತೆಗೆ ಕೇಂದ್ರ ಸರ್ಕಾರ ನೀಡಿರುವ ಭರವಸೆಯಂತೆ ರಾಜ್ಯ ಸರ್ಕಾರಕ್ಕೆ ಹಣ ನೀಡಬೇಕು. ಅಣೆಕಟ್ಟುಗಳ ದುgಸ್ತಿಗೆ ಆದ್ಯತೆ ನೀಡಬೇಕು. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಇದಕ್ಕೆ ಕೇಂದ್ರ ಸರ್ಕಾರದ ಜಲ ಆಯೋಗ ಹಣ ನೀಡಬೇಕು ಎಂದು ಹೇಳಿದರು. ರಾಜ್ಯದಲ್ಲಿ 8ದೊಡ್ಡ ಜಲಾಶಯಗಳು ಹಾಗೂ 12ರಾಷ್ಟ್ರೀಯ ಮಹತ್ವದ ಅಣೆಕಟ್ಟುಗಳಿದ್ದು, ಅವುಗಳ ರಕ್ಷಣೆ ಮುಖ್ಯ. ರಾಜ್ಯ ಸರ್ಕಾರ ನೀರಾವರಿಗೆ ಆದ್ಯತೆ ನೀಡಿದ್ದು, ತೀವ್ರಗತಿಯಲ್ಲಿ ಯೋಜನೆಗಳನ್ನು ಪೂರ್ಣ ಗೊಳಿಸುತ್ತಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ರಾಷ್ಟ್ರೀಯ ನೀತಿ:

ದೇಶದಲ್ಲಿರುವ ಜಲಾಶಯಗಳ ಸುರಕ್ಷತೆಯಿಂದ ಅಣೆಕಟ್ಟು ಸುರಕ್ಷತಾ ನೀತಿ ಜಾರಿಗೆ ತರಲಾಗುವುದು ಎಂದು ಕೇಂದ್ರ ಜಲ ಆಯೋಗದ ಅಧ್ಯಕ್ಷ ಘನಶ್ಯಾಮ್ ಝಾ ತಿಳಿಸಿದರು. ಸುರಕ್ಷತಾ ನೀತಿ ಜಾರಿಗೆ ತರುವ ಸಂಬಂಧ ಚರ್ಚೆ ನಡೆದಿದ್ದು, ಶೀಘ್ರವೆ ಜಾರಿಗೆ ತರಲಾಗುವುದು. ಸಂರಕ್ಷತಾ ನೀತಿಗೆ ಸಂಬಂಧಪಟ್ಟ ನೀತಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.  ಸಮ್ಮೇಳನದಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಪಿ.ಬಿ.ರಾಮಮೂರ್ತಿ, ಗುರುಪಾದಸ್ವಾಮಿ, ಅನುರಾಗ ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.

Write A Comment