ಕರ್ನಾಟಕ

ಸೆಂಟ್ರಲ್‌ ಕಾಲೇಜಿಗೆ ಹುಸಿ ಬಾಂಬ್‌ ಕರೆ ಖಾಸಗಿ ಭದ್ರತಾ ಸಿಬ್ಬಂದಿ ಬಂಧನ

Pinterest LinkedIn Tumblr

Threat-Call

ಬೆಂಗಳೂರು: ಕುಡಿದ ಅಮಲಿನಲ್ಲಿ ಮೈಸೂರು ಬ್ಯಾಂಕ್ ವೃತ್ತ ಸಮೀಪದ ಸೆಂಟ್ರಲ್ ಕಾಲೇಜಿನಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದ ಗಂಗಾಧರ್ (42) ಎಂಬಾತನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮೂಲತಃ ಮೈಸೂರಿನ ರಾಮಕೃಷ್ಣನಗರದ ಗಂಗಾಧರ್, ಕ್ಯಾನನ್ ಭದ್ರತಾ ಏಜೆನ್ಸಿಯಲ್ಲಿ ಭದ್ರತಾ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಡಿ. 25ರಂದು ಶಿವಾಜಿನಗರದ ಒಪಿಎಚ್ ರಸ್ತೆಯಿಂದ ತನ್ನ ಮೊಬೈಲ್‌ ಮೂಲಕ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ಗಂಗಾಧರ್, ‘ನಾನು ದಾವೂದ್‌. ಸೆಂಟ್ರಲ್ ಕಾಲೇಜಿನಲ್ಲಿ ಬಾಂಬ್‌ ಇಟ್ಟಿದ್ದೇನೆ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ.

ಈ ಬಗ್ಗೆ ನಿಯಂತ್ರಣ ಕೊಠಡಿ ಸಿಬ್ಬಂದಿ ಮಾಹಿತಿ ನೀಡಿದ್ದರು. ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದ ಜತೆ ಸ್ಥಳಕ್ಕೆ ತೆರಳಿ
ಪರಿಶೀಲಿಸಿದಾಗ ಅದು ಹುಸಿ ಬಾಂಬ್ ಕರೆ ಎಂದು ಗೊತ್ತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಂತರ ಆರೋಪಿ ಮೊಬೈಲ್ ಸ್ವಿಚ್‌ ಆಫ್ ಮಾಡಿಕೊಂಡಿದ್ದ. ಗುರುವಾರ (ಡಿ. 31) ಮತ್ತೆ ಆತನಿಗೆ ಕರೆ ಮಾಡಿದಾಗ ಆತನ ಮೊಬೈಲ್ ಶಿವಾಜಿನಗರ ಟವರ್‌ನಿಂದ ಸಂಪರ್ಕ ಪಡೆಯುತ್ತಿತ್ತು. ಅಲ್ಲಿಗೆ ತೆರಳಿ ಆತನನ್ನು ಬಂಧಲಾಯಿತು.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪತ್ನಿಯಿಂದ ದೂರವಾಗಿದ್ದ ಗಂಗಾಧರ್, ಸೆಂಟ್ರಲ್‌ ಕಾಲೇಜಿನ ಆವರಣದಲ್ಲಿ ಭದ್ರತಾ ಸಿಬ್ಬಂದಿಗೆ ನೀಡಲಾಗಿದ್ದ ಕೊಠಡಿಯಲ್ಲಿ ವಾಸವಾಗಿದ್ದ. ಕುಡಿದ ಅಮಲಿನಲ್ಲಿ ಸಂಸ್ಥೆಯ ಸಿಬ್ಬಂದಿಯೊಂದಿಗೆ ಜಗಳ ಮಾಡಿಕೊಂಡಿದ್ದ ಆತ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Write A Comment