
ಮೈಸೂರು: ‘ದೇಶದಲ್ಲಿ 2050ರ ಹೊತ್ತಿಗೆ ನಗರವಾಸಿಗಳ ಪ್ರಮಾಣ ಶೇ 50ಕ್ಕಿಂತ ಹೆಚ್ಚಾಗಲಿದೆ. ಹೀಗಾಗಿ ಸ್ಥಳೀಯ ಪರಿಸರ ಮತ್ತು ಪರಂಪರೆ ಗಮನದಲ್ಲಿ ಇಟ್ಟುಕೊಂಡು ವೈಜ್ಞಾನಿಕವಾಗಿ ಸುಸ್ಥಿರ ನಗರಾಭಿವೃದ್ಧಿ ಯೋಜನೆಗಳನ್ನು ರೂಪಿಸುವ ಅಗತ್ಯ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಭಾನುವಾರ ‘103ನೇ ಭಾರತೀಯ ವಿಜ್ಞಾನ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿ, ಈ ವಿಷಯದಲ್ಲಿ ವಿಜ್ಞಾನಿಗಳ ಸಹಕಾರ ಯಾಚಿಸಿದರು.
‘ಸಮೀಕ್ಷೆಗಳ ಪ್ರಕಾರ 2025ರ ವೇಳೆಗೆ ವಿಶ್ವದ ನಗರವಾಸಿಗಳಲ್ಲಿ ಶೇ 10ರಷ್ಟು ಭಾರತೀಯರೇ ಆಗಲಿದ್ದಾರೆ. ಮುಂದಿನ ದಿನಗಳಲ್ಲಿ ನಗರಗಳ ಬೆಳವಣಿಗೆ ಮತ್ತಷ್ಟು ತೀವ್ರವಾಗಲಿದೆ. ಕೊಳೆಗೇರಿಗಳು ಮತ್ತಷ್ಟು ಹೆಚ್ಚಾಗಲಿವೆ. ಪೌಷ್ಟಿಕತೆ ಮತ್ತು ಆರೋಗ್ಯ ಸಮಸ್ಯೆಗಳು ಮತ್ತಷ್ಟು ಬಾಧಿಸಲಿವೆ. ಇವಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ನಗರಗಳು ಉದ್ಯೋಗ, ಆರ್ಥಿಕ ಬೆಳವಣಿಗೆಯ ಪ್ರಮುಖ ಕೇಂದ್ರಗಳು. ಹೀಗಾಗಿ, ಕೇಂದ್ರ ಸರ್ಕಾರವು ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಒತ್ತು ನೀಡಿದೆ’ ಎಂದು ಹೇಳಿದರು.
‘ಗುರಿಗಳನ್ನು ತಲುಪುವ ನಿಟ್ಟಿನಲ್ಲಿ ಉತ್ತಮ ಯೋಜನೆಗಳ ಅಗತ್ಯ ಇದೆ. ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಬೇಕಾಗಿದೆ. ನಗರಗಳಲ್ಲಿ ಮತ್ತಷ್ಟು ಮೂಲಸೌಕರ್ಯಗಳನ್ನು ನಿರ್ಮಿಸುವ ಅಗತ್ಯ ಇದೆ. ಸ್ಥಳೀಯ ವಸ್ತುಗಳನ್ನು ವೈಜ್ಞಾನಿಕವಾಗಿ ಬಳಸಿ ನಗರಾಭಿವೃದ್ಧಿ ಮಾಡಬೇಕಿದೆ’ ಎಂದರು.
‘ಘನತ್ಯಾಜ್ಯ ನಿರ್ವಹಣೆಗೆ ಸೂಕ್ತ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ನಗರ ಪರಿಸರ ಮತ್ತು ಕೃಷಿಗೆ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ವೈಜ್ಞಾನಿಕ ಪರಿಹಾರಗಳ ಅನ್ವೇಷಣೆಗೆ ಮುಂದಾಗಬೇಕು’ ಎಂದರು.
ಇಂಧನ: ಭಾರತದ ಸರ್ವತೋಮುಖ ಅಭಿವೃದ್ಧಿಗೆ 2022ರ ವೇಳೆಗೆ ಸರಿಸುಮಾರು 175 ಗಿಗಾವಾಟ್ ಶಕ್ತಿಯ ಅಗತ್ಯವಿದೆ. ಇದಕ್ಕಾಗಿ ಗ್ರಿಡ್‌ಗಳಲ್ಲಿ ಕಡಿಮೆ ಸೋರಿಕೆಯ ತಂತ್ರಜ್ಞಾನದ ಜೊತೆಯಲ್ಲಿ ಪರಿಸರ ಸ್ನೇಹಿ ಇಂಧನಗಳನ್ನು ಕಡಿಮೆ ಬೆಲೆಯಲ್ಲಿ ಪಡೆಯಬಹುದಾದ ತಂತ್ರಜ್ಞಾನ ಅವಿಷ್ಕಾರ ಸಹ ಆಗಬೇಕಿದೆ ಎಂದರು.
ಕಲ್ಲಿದ್ದಲು, ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಮತ್ತಷ್ಟು ಮಿತವ್ಯಯಕಾರಿ ಮಾಡುವ ಜೊತೆಯಲ್ಲಿ ಸೌರಶಕ್ತಿ ಬಳಕೆಯತ್ತ ಗಮನಹರಿಸಬೇಕು. ಹವಾಮಾನ ಬದಲಾವಣೆಯ ಮೇಲೆ ಕಡಿವಾಣ ಹಾಕಲು ಪರಿಸರ ಸ್ನೇಹಿ ಇಂಧನ ಬಳಕೆಯನ್ನು ತೀವ್ರಗೊಳಿಸಬೇಕು. ಈ ನಿಟ್ಟಿನಲ್ಲಿ ವಿಜ್ಞಾನ ಬಳಕೆ ಸಂಶೋಧನೆಯನ್ನು ಚುರುಕುಗೊಳಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.
ವಿಜ್ಞಾನಿಗಳಿಗೆ ‘ಇ’ ಪಂಚಸೂತ್ರ
ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ವಿಜ್ಞಾನಿಗಳ ಜವಾಬ್ದಾರಿ ಹೆಚ್ಚು ಇದೆ. ಹೀಗಾಗಿ, ವಿಜ್ಞಾನಿಗಳು ‘ಪಂಚ ಇ ಸೂತ್ರ’ ಪಾಲಿಸಬೇಕು ಎಂದು ಮೋದಿ ಕರೆ ನೀಡಿದರು.
ಅವರ ಪ್ರಕಾರ: ‘5 E’ ಸೂತ್ರದಲ್ಲಿ ಮೊದಲ ‘ಇ’– ಎಕಾನಮಿ (ಆರ್ಥಿಕತೆ). ಅಂದರೆ, ಕಡಿಮೆ ವೆಚ್ಚ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳುವುದು. ಎರಡನೇ ‘ಇ’– ಎನ್‌ವಿರಾನ್ಮೆಂಟ್ (ಪರಿಸರ). ಇಂಗಾಲ ಹೊರಸೂಸುವಿಕೆಗೆ ಕಡಿವಾಣ ಹಾಕಿ ಪರಿಸರ ಸಂರಕ್ಷಣೆ ಮಾಡುವುದು. ಮೂರನೇ ‘ಇ’– ಎನರ್ಜಿ (ಶಕ್ತಿ ಸಂಪನ್ಮೂಲ). ಪರಿಸರಕ್ಕೆ ಹಾನಿಯಾಗದಂಥ ಶಕ್ತಿ ಸಂಪನ್ಮೂಲಗಳು ಮತ್ತು ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆಗೆ ಒತ್ತು ನೀಡುವುದು. ನಾಲ್ಕನೇ ‘ಇ’– ಎಂಪಥಿ (ಕಾಳಜಿ) ಸಾಮಾಜಿಕ ಸವಾಲುಗಳು, ಸಂಸ್ಕೃತಿಗೆ ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುವುದು. ಐದನೇ ‘ಇ’ – ಇಕ್ವಿಟಿ (ಸಮಾನತೆ).