ಕರ್ನಾಟಕ

ಮೂರು ವರ್ಷದಲ್ಲಿ ಹೆಲಿಕಾಪ್ಟರ್‌ ತಯಾರಿ; ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‌ನಲ್ಲಿ ಘಟಕಕ್ಕೆ ಶಂಕುಸ್ಥಾಪನೆ

Pinterest LinkedIn Tumblr

Modi Tumkur

ತುಮಕೂರು: ಮುಂದಿನ ಮೂರು ವರ್ಷದಲ್ಲಿ (2018ರ ವೇಳೆಗೆ) ಹೊಸ ಹೆಲಿಕಾಪ್ಟರ್‌ಗಳ ತಯಾರಿಕೆ ಬಿದರೆಹಳ್ಳ ಕಾವಲ್ ಘಟಕದಲ್ಲಿ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರಕಟಿಸಿದರು.

ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‌ನಲ್ಲಿ ಎಚ್ಎಎಲ್ ಲಘು ಯುದ್ಧ ಹೆಲಿಕಾಪ್ಟರ್‌ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ತಂತ್ರಜ್ಞಾನ, ತಂತ್ರಜ್ಞರು, ತಮಗಿರುವ ಶಕ್ತಿ, ಅನುಭವವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ಮುಂದಿನ ಹದಿನೈದು ವರ್ಷಗಳಲ್ಲಿ ನೂತನ ಘಟಕದಲ್ಲಿ 600 ಹೆಲಿಕಾಪ್ಟರ್‌ ತಯಾರಿಸಬಹುದಾಗಿದೆ. ಅದಕ್ಕಾಗಿ ₹ 5 ಸಾವಿರ ಕೋಟಿ ಬಂಡವಾಳ ತೊಡಗಿಸಲಾಗುತ್ತಿದೆ. ಇಡೀ ಜಿಲ್ಲೆಯಲ್ಲೇ ಅತಿ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ ಇದಾಗಿದ್ದು, ಸುಮಾರು 4 ಸಾವಿರ ಕುಟುಂಬಗಳಿಗೆ ಉದ್ಯೋಗ ಸಿಗಲಿದೆ ಎಂದು ಹೇಳಿದರು.

ನಮ್ಮ ಸೈನಿಕರಿಗೆ ಸೌಲಭ್ಯ ಕೊಟ್ಟರೆ ರಾಷ್ಟ್ರ ರಕ್ಷಣೆ ಮಾಡುತ್ತಾರೆ. ಆದರೆ ರಕ್ಷಣಾ ಸಾಮಗ್ರಿಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿದೆ. ದೇಶ ರಕ್ಷಣೆಗೆ ವಿದೇಶಿಯರನ್ನು ಅವಲಂಬಿಸಬೇಕಾಗಿದ್ದು, ಇದಕ್ಕಾಗಿ ಸಾಕಷ್ಟು ಆರ್ಥಿಕ ವೆಚ್ಚವಾಗುತ್ತಿದೆ. ಇನ್ನು ಮುಂದೆ ರಕ್ಷಣಾ ಸಾಮಗ್ರಿಗಳ ಆಮದು ತಗ್ಗಿಸಬೇಕಿದೆ. ನಮಗೆ ಯುದ್ಧ ಸಾಮಗ್ರಿ ತಯಾರಿಸಿಕೊಡುತ್ತಿದ್ದ ಕಂಪೆನಿಗಳಿಂದ ಖರೀದಿ ಕಡಿಮೆಮಾಡಿ, ದೇಶೀಯವಾಗಿ ಉತ್ಪಾದನೆ ಮಾಡಿಕೊಡುವಂತೆ ಷರತ್ತು ಹಾಕಲಾಗುತ್ತಿದೆ. ಇದನ್ನೇ ‘ಮೇಕ್‌ ಇನ್ ಇಂಡಿಯಾ’ದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಪ್ರಧಾನಿ ವಿವರಿಸಿದರು.

ಹಿಂದೆ ಆಹಾರ ಕ್ಷೇತ್ರದಲ್ಲಿನ ಸ್ವಾವಲಂಬನೆಗೆ ರೈತರು ಶ್ರಮಿಸಿದರು. ಈಗ ರಕ್ಷಣಾ ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧಿಸುವ ಪ್ರಯತ್ನ ಸಾಗಿದೆ. ರಾಷ್ಟ್ರ ಕಾಯುವ ಸೈನಿಕರಿಗೆ ಉತ್ತಮ ಗುಣಮಟ್ಟದ ಸಶಸ್ತ್ರಗಳನ್ನು ಕೋಡಬೇಕಾಗಿದೆ. ಸೈನಿಕರ ಶಕ್ತಿ ಬಲಪಡಿಸಿದರೆ ದೇಶದಲ್ಲಿ ಭದ್ರತೆ ನೆಲೆಸುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಆತ್ಯಾಧುನಿಕ ಸಶಸ್ತ್ರಗಳನ್ನು ಸೈನಿಕರ ಕೈಗೆ ಕೊಡಬೇಕಾಗಿದೆ. ಅದಕ್ಕೆ ಬೇಕಾದ ಸಂಶೋಧನೆ ನಡೆಸಿ, ತಂತ್ರಜ್ಞಾನವನ್ನು ರೂಪಿಸಿಕೊಳ್ಳಬೇಕಾಗಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಜಗತ್ತಿನ ಯಾವ ದೇಶಕ್ಕಿಂತಲೂ ಭಾರತ ರಕ್ಷಣೆಯಲ್ಲಿ ಹಿಂದುಳಿಯಬಾರದು. ಕಳಪೆ ಗುಣಮಟ್ಟದ ಸಶಸ್ತ್ರಗಳು ಇರಬಾರದು. ಎಲ್ಲಾ ರಾಷ್ಟ್ರಕ್ಕಿಂತ ದೇಶವು ಗುಣಮಟ್ಟದ ಸಶಸ್ತ್ರಗಳನ್ನು ಹೊಂದುವಂತಾಗಬೇಕು. ಆಧುನಿಕ ಸಶಸ್ತ್ರಗಳನ್ನು ನಾವೇ ನಿರ್ಮಾಣ ಮಾಡಿಕೊಳ್ಳುವಂತೆ ಆಗಬೇಕು ಎಂದು ಮೋದಿ ತಿಳಿಸಿದರು.

ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದ ಗೌಡ ಇತರರು ಪಾಲ್ಗೊಂಡಿದ್ದರು.

ಹೆಚ್ಚು ಸಹಕಾರ:ಸಿಎಂ
ವೈಮಾನಿಕ ನೀತಿ ಜಾರಿಗೊಳಿಸಿರುವ ದೇಶದ ಮೊದಲ ರಾಜ್ಯ ನಮ್ಮದಾಗಿದೆ. ವೈಮಾನಿಕ ಕ್ಷೇತ್ರದ ಉತ್ಪಾದನೆ, ಸಂಶೋಧನೆಗೆ ಹೆಚ್ಚಿನ ಸಹಕಾರ, ಉತ್ತೇಜನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದೇವನಹಳ್ಳಿ ಬಳಿ ಸಾವಿರ ಎಕರೆಯಲ್ಲಿ ಏರೊಸ್ಪೇಸ್‌ ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದೆ. ಇನ್‌ವೆಸ್ಟ್ ಕರ್ನಾಟಕದಲ್ಲೂ ವೈಮಾನಿಕ ಕ್ಷೇತ್ರದ ಬಂಡವಾಳ ಹೂಡಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದರು.

ಬಿದರೆಹಳ್ಳ ಕಾವಲ್‌ ಘಟಕ ಆರಂಭಕ್ಕೆ ಬೇಕಾದ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಿದೆ. ಭೂಮಿ, ನೀರು ಕೊಟ್ಟಿದೆ. ರಾಜ್ಯ ಸರ್ಕಾರದ ಖರ್ಚಿನಲ್ಲೇ ವಿದ್ಯುತ್‌ ಮಾರ್ಗ ಸ್ಥಳಾಂತರಕ್ಕೂ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.

Write A Comment