ಕರ್ನಾಟಕ

ಮಾನವರಹಿತ ಯುದ್ಧವಾಹನ ಸಿದ್ಧ

Pinterest LinkedIn Tumblr

mys

ಮೈಸೂರು: ಯುದ್ಧಗಳಲ್ಲಿ ಸೈನಿಕರ ಜೀವವನ್ನು ಕಾಪಾಡಲು, ಸೈನಿಕರ ಬದಲಾಗಿ ತಾವೇ ರಣಾಂಗಣದಲ್ಲಿ ಹೋರಾಡುವ ಮಾನವರಹಿತ ಯುದ್ಧವಾಹನವನ್ನು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸಿದ್ಧಪಡಿಸಿದೆ.

ಈ ತಂತ್ರಜ್ಞಾನ ಪೂರ್ಣಗೊಂಡಿದ್ದು, ಪ್ರಯೋಗಾರ್ಥ ಮಾದರಿಗಳನ್ನು ‘ಭಾರತೀಯ ವಿಜ್ಞಾನ ಸಮಾವೇಶ’ ಅಂಗವಾಗಿ ನಡೆಯುತ್ತಿರುವ ‘ಪ್ರೈಡ್‌ ಆಫ್‌ ಇಂಡಿಯಾ’ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭಾರತದಲ್ಲೇ ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಗಿದೆ.

ಈ ಬುದ್ಧಿವಂತ ಯುದ್ಧ ವಾಹನಗಳು ತನ್ನಲ್ಲಿ ಅಳವಡಿಸಲಾಗಿರುವ ‘ಇನ್‌ಫ್ರಾರೆಡ್‌ ಸೆನ್ಸರ್‌’ಗಳನ್ನು ಬಳಸಿಕೊಂಡು, ಕಂಪ್ಯೂಟರ್‌ ಬುದ್ಧಿಮತ್ತೆಯಿಂದ ಕಾರ್ಯನಿರ್ವಹಿಸಲಿದೆ. ರಣಾಂಗಣದಲ್ಲಿ ಸ್ವಯಂ ಚಾಲನೆಗೊಂಡು ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಲಿದೆ.

ಏನಿದು ವಾಹನ?: ಸರಳವಾಗಿ ಹೇಳುವುದಾದರೆ, ಇವು ಮಾನವರಹಿತ ಯುದ್ಧವಾಹನಗಳು. ಅಂದರೆ, ಚಾಲಕನ ಅಗತ್ಯ ಈ ವಾಹನಗಳಿಗಿಲ್ಲ. ‘ಮೊಬೈಲ್‌ ಆಟೊನೊಮಸ್‌ ರೊಬೊ ಸಿಸ್ಟಂ’ ಹಾಗೂ ‘ಮೊಬೈಲ್‌ ಆಟೊನೊಮಸ್‌ ಸ್ಟಬಿಲೈಸೇಷನ್‌ ಸಿಸ್ಟಂ’ ಎಂಬ ಎರಡು ವಾಹನಗಳ ಅಭಿವೃದ್ಧಿ ಆಗಿದ್ದು, ಇವೆರಡೂ ವಾಹನಗಳು ಸಾಂಪ್ರದಾಯಿಕ ಇಂಧನಕ್ಕೆ ಬದಲಾಗಿ ವಿದ್ಯುತ್ತನ್ನು ಬಳಸಿಕೊಳ್ಳುತ್ತವೆ.

‘ಮೊಬೈಲ್‌ ಆಟೊನೊಮಸ್‌ ರೊಬೊ ಸಿಸ್ಟಂ’ ವಾಹನವು ರಣಾಂಗಣ ದಲ್ಲಿ ಹುದುಗಿಸಿಟ್ಟಿರುವ ಬಾಂಬ್‌ಗಳನ್ನು ಹುಡುಕಿ ನಿಷ್ಕ್ರಿಯಗೊಳಿಸುತ್ತದೆ. ಈ ವಾಹನದಲ್ಲಿರುವ ರೊಬೊ ತೋಳು, ಅತಿ ತೂಕದ ಬಾಂಬ್‌ಗಳನ್ನು ತನ್ನ ಹಸ್ತದ ಸಹಾಯದಿಂದ ಎತ್ತುತ್ತದೆ. ನೆಲದಲ್ಲಿರುವ ಬಾಂಬ್‌ಗಳನ್ನು ಎತ್ತಿಕೊಂಡು ತನ್ನ ಒಡಲಿನಲ್ಲಿ ಶೇಖರಿಸಿಕೊಂಡು, ಸೈನಿಕರ ಜೀವ ಕಾಪಾಡುತ್ತದೆ.

‘ಮೊಬೈಲ್‌ ಆಟೊನೊಮಸ್‌ ಸ್ಟಬಿಲೈಸೇಷನ್‌ ಸಿಸ್ಟಂ’ ವಾಹನದಲ್ಲಿ ಅತಿ ತೂಕದ ಶಸ್ತ್ರಾಸ್ತ್ರಗಳನ್ನು ಅಳವಡಿಸಬಹುದು. ಮೆಷಿನ್‌ಗನ್‌ ಹಾಗೂ ಬಾಂಬ್‌ಗಳನ್ನು ತನ್ನೊಡಲಿನಲ್ಲಿ ಇಟ್ಟುಕೊಂಡು ಅವನ್ನು ಪ್ರಯೋಗಿಸುವ ಬುದ್ಧಿಶಕ್ತಿಯನ್ನು ಈ ವಾಹನ ಹೊಂದಿದೆ.

ಈ ಎರಡೂ ವಾಹನಗಳಲ್ಲಿ ಶಕ್ತಿಶಾಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅತಿ ಉತ್ಕೃಷ್ಟ ಗುಣಮಟ್ಟದ ಛಾಯಾಚಿತ್ರಗಳನ್ನು ತೆಗೆಯುತ್ತವೆ. ಜತೆಗೆ, ದೂರದಲ್ಲಿರುವ ಮಾಹಿತಿ ಕೇಂದ್ರಕ್ಕೆ ರವಾನಿಸುತ್ತವೆ. ಕ್ಯಾಮೆರಾ ಸಹಾಯದಿಂದ, ನಿಯಂತ್ರಣಾ ಕೇಂದ್ರದಿಂದ ವಾಹನದ ಚಾಲನೆಯನ್ನು (ಹೆಚ್ಚುವರಿ ವ್ಯವಸ್ಥೆ) ನಿಯಂತ್ರಿಸಬಹುದಾಗಿದೆ.

‘ಈ ಎರಡೂ ವಾಹನಗಳನ್ನು ಪುಣೆಯಲ್ಲಿರುವ ‘ಡಿಆರ್‌ಡಿಒ’ನ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಭವಿಷ್ಯದಲ್ಲಿ ಸೈನಿಕರ ಬಳಕೆಯನ್ನು ಯುದ್ಧದಲ್ಲಿ ಕಡಿಮೆ ಮಾಡಲಾಗುತ್ತದೆ. ಅವರ ಜಾಗವನ್ನು ರೊಬೊಗಳು ತುಂಬುತ್ತವೆ. ಸೈನಿಕರ ಅಮೂಲ್ಯ ಜೀವಗಳನ್ನು ಕಾಪಾಡುವ ಜತೆಗೆ, ಅಪಾರ ಪ್ರಮಾಣದ ಸಾಂಪ್ರದಾಯಿಕ ಇಂಧನ ಇದರಿಂದ ಉಳಿಯುತ್ತದೆ’ ಎಂದು ಡಿಆರ್‌ಡಿಒ ವಿಜ್ಞಾನಿ ಎಂ.ಎಂ. ಕುಬೇರ್‌ ‘ಪ್ರಜಾವಾಣಿ’ಗೆ ತಿಳಿಸಿದರು.
ನೇಸರ ಕಾಡನಕುಪ್ಪೆ

Write A Comment