ಬೆಂಗಳೂರು, ಡಿ.31- ಪಿಯುಸಿ ವಿದ್ಯಾರ್ಥಿಯನ್ನು ಅಪಹರಿಸಿ 20 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟು ಪರಾರಿಯಾ ಗಿದ್ದ ನಾಲ್ವರು ಅಪಹರಣಕಾರರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಪ್ಲೊಮಾ ವ್ಯಾಸಂಗ ಮಾಡಿ ಮಡಿಕೆ ತಯಾರಿಸುವ ಕೆಲಸ ಮಾಡುತ್ತಿದ್ದ ನಾರಾಯಣಪುರ ವಾಸಿ ನವೀನ್‌ಕುಮಾರ್ (22) ಕೊರಿಯರ್ ಬಾಯ್ ಆಗಿರುವ ವಿದ್ಯಾರಣ್ಯಪುರ ವಾಸಿ ಅಜಿತ್(21), ವೆಲ್ಡಿಂಗ್ ಕೆಲಸ ಮಾಡುವ ದೊಡ್ಡ ಬೊಮ್ಮಸಂದ್ರದ ಕಾಳಪ್ಪಲೇಔಟ್ ನಿವಾಸಿ ಎಡ್ವಿನ್ (24) ಮತ್ತು ಲೇತ್ ಮಿಷನ್ ಕೆಲಸ ಮಾಡುವ ಹೊಸೂರಿನ ವಾಸಿ ದಾಮೋದರ್ (20) ಬಂಧಿತ ಅಪಹರಣಕಾರರು.
ಆರೋಪಿಗಳು ಡಿ.28ರಂದು ಬೆಳಗ್ಗೆ 7.30ರಲ್ಲಿ ಸ್ನೇಹಿತನ ಜತೆ ಸ್ಕೂಟರ್‌ನಲ್ಲಿ ಕಾಲೇಜಿಗೆ ಹೋಗುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬೆಟ್ಟಹಲಸೂರಿನ ವಾಸಿ ವೈದ್ಯನಾಥನ್ ಅಲಿಯಾಸ್ ವೈಭವ್ (17)ನನ್ನು ಅಡ್ಡಗಟ್ಟಿ ಅಪಹರಿಸಿದ್ದರು.
ಈ ಬಗ್ಗೆ ಸ್ನೇಹಿತನ ಮನೆಯವರಿಗೆ ತಿಳಿಸಿದ್ದು ವಿದ್ಯಾರ್ಥಿಯ ತಂದೆ ಯಲಹಂಕ ಉಪನಗರ ಠಾಣೆಗೆ ದೂರು ನೀಡಿದ್ದರು.
ಡಿಸಿಪಿ ವಿಕಾಸ್‌ಕುಮಾರ್ ವಿಕಾಸ್ ಅವರ ಮಾರ್ಗದರ್ಶನದಲ್ಲಿ ಈಶಾನ್ಯ ವಿಭಾಗದ ಪೊಲೀಸರ ವಿಶೇಷ ತಂಡ ಒಬ್ಬನನ್ನು ವಶಕ್ಕೆ ಪಡೆದು ಆತ ನಿಡಿದ ಸುಳಿವಿನ ಮೇರೆಗೆ ದೊಡ್ಡಬಳ್ಳಾಪುರ ಸಮೀಪದ ನೀಲಗಿರಿ ತೋಪಿನಲ್ಲಿ ವಿದ್ಯಾರ್ಥಿಯನ್ನು ರಕ್ಷಿಸಿದ್ದರು. ಆದರೆ ಪೊಲೀಸರು ಸ್ಥಳಕ್ಕೆ ಹೋಗುವುದರೊಳಗೆ ಅಪಹರಣಕಾರರು ಹುಡುಗನನ್ನು ಬಿಟ್ಟು ಪರಾರಿಯಾಗಿದ್ದರು. ಕಾರ್ಯಾಚರಣೆ ಮುಂದುವರೆಸಿದ ಪೊಲೀಸರು ಆರೋಪಿಗಳ ಮೊಬೈಲ್‌ನ ಸಿಡಿಆರ್ ಆಧರಿಸಿ ಮತ್ತು ಕೃತ್ಯಕ್ಕೆ ಬಳಸಿದ ಕಾರಿನ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾರ್ಥಿಯನ್ನು ಅಪಹರಿಸಿ ಆತನ ತಂದೆಗೆ 20 ಲಕ್ಷ ರೂ.ಗೆ ಒತ್ತಾಯಿಸಿ ಕನಿಷ್ಠ 15 ಲಕ್ಷ ರೂ.ಗಳನ್ನಾದರೂ ಪಡೆದು ಅದರಲ್ಲಿ ದಾಮೋದರ್‌ಗೆ 2 ಲಕ್ಷ ರೂ. ನೀಡಿ ಉಳಿದ ಹಣವನ್ನು ಮೂವರು ಹಂಚಿಕೊಳ್ಳಲು ಯೋಜನೆ ರೂಪಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಅಪಹರಣಕ್ಕೊಳಗಾಗಿದ್ದ ವಿದ್ಯಾರ್ಥಿಯ ತಂದೆ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಈಗ ಉದ್ಯಮಿಯಾಗಿದ್ದಾರೆ. ಹಾಗಾಗಿ ಅವರ ಬಳಿ ಹಣವಿದೆ ಎಂದು ಆರೋಪಿಗಳು ಹಣಕ್ಕಾಗಿ ಕೃತ್ಯ ಎಸಗಿದ್ದರೆಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸಿಪಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಯಲಹಂಕ ಉಪನಗರ, ಯಲಹಂಕ, ಕೊಡಿಗೆಹಳ್ಳಿ, ಬಾಗಲೂರು ಠಾಣೆಗಳ ಇನ್ಸ್‌ಪೆಕ್ಟರ್‌ಗಳು, ಡಿಸಿಪಿ ಕಚೇರಿಯ ಅಪರಾಧ ತಂಡದವರು ಕಾರ್ಯಾಚರಣೆ ನಡೆಸಿದ್ದಾರೆ.
ಬಂಧಿತರಿಂದ ಫೋರ್ಡ್‌ಫಿಗೊ ಜೂಮ್‌ಕಾರ್, ಮಾರುತಿ ಓಮ್ನಿ, ಹೊಂಡಾ ಆಕ್ಟೀವಾ, ಪಲ್ಸರ್‌ಬೈಕ್, 4 ಮೊಬೈಲ್, ವಿದ್ಯಾರ್ಥಿಯಿಂದ ಕಿತ್ತುಕೊಂಡಿದ್ದ ಹೊಂಡಾ ಆಕ್ಟೀವಾ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.