ಕರ್ನಾಟಕ

ಇದೇನ್ ವಿಸ್ಮಯ: ಬೋರ್ ವೆಲ್ ನಲ್ಲಿ ನೀರಿನ ಬದಲು ಬೆಂಕಿ ಉಗುಳ್ತಿದೆ!

Pinterest LinkedIn Tumblr

bgk-borewell

ಬಾಗಲಕೋಟೆ: ಭೀಮಪ್ಪ ಗೋಲಭಾವಿ ಎಂಬ ರೈತ ಕಳೆದ 3 ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಕೊರೆಸಿದ್ದ ಕೊಳವೆಬಾವಿಯಲ್ಲಿ ನೀರು ಚಿಮ್ಮುವ ಬದಲು ಇದೀಗ ದಿಢೀರ್ ಅಂತ ಬೆಂಕಿ ಉಗುಳತೊಡಗಿದ ಘಟನೆ ಬಾಗಲಕೋಟೆಯ ಸೋರಗಾಂವಿ ಗ್ರಾಮದಲ್ಲಿ ನಡೆದಿದೆ.

ಸುಮಾರು 400 ಅಡಿ ಆಳದ ಕೊಳವೆ ಬಾವಿಯಲ್ಲಿ ನೀರಿನ ಬದಲು, ಗಳಗಳನೆ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡು ಗ್ರಾಮಸ್ಥರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ ಬೋರ್ ವೆಲ್ ಬೆಂಕಿಯಲ್ಲಿ ಮೆಕ್ಕೆಜೋಳ, ಅನ್ನ ಬೇಯಿಸುತ್ತಿರುವ ದೃಶ್ಯ ಕೂಡಾ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಎಷ್ಟೇ ಬೆಂಕಿ ನಂದಿಸಿದ್ರೂ ಹೋಗೋಲ್ಲೋರಿ…ಮತ್ತೆ ಬೆಂಕಿ ಕಾಣಿಸಿಕೊಳ್ಳತ್ತೈತಿ.. ಇಲ್ ಮಕ್ಕಳು ಓಡಾಡ್ತಿರ್ತಾವ ಹೀಂಗ ಬೆಂಕಿ ಹೊತ್ತಕಂಡ್ರ್ ಏನ್ ಮಾಡ್ಲಿ..ಸಂಬಂಧಪಟ್ಟ ಅಧಿಕಾರಿಗಳು ಬಂದ್ ನೋಡ್ಲಿ ಎಂದು ಸೋರಗಾಂವ ಗ್ರಾಮಸ್ಥರು ವಿನಂತಿಸಿಕೊಂಡಿದ್ದಾರೆ.

ಬೋರ್ ವೆಲ್ ನಲ್ಲಿ ಈ ರೀತಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. 2013ರಲ್ಲೂ ಬಾಗಲಕೋಟೆಯ ಮುದೋಳದಲ್ಲಿಯೂ ಬೋರ್ ವೆಲ್ ನಲ್ಲಿ ದಿಢೀರ್ ಅಂತ ಬೆಂಕಿ ಕಾಣಿಸಿಕೊಂಡಿತ್ತು.

ಬೆಂಕಿಯಲ್ಲಿ ಅನ್ನ, ಮೆಕ್ಕೆಜೋಳ ಬೇಯಿಸಬೇಡಿ:
ಕೊಳವೆ ಬಾವಿಯಿಂದ ಬರುತ್ತಿರುವ ಬೆಂಕಿಯಲ್ಲಿ ಅನ್ನ, ಮೆಕ್ಕೆಜೋಳ ಬೇಯಿಸಬೇಡಿ. ಯಾಕೆಂದರೆ ಅದರಲ್ಲಿ ರಾಸಾಯನಿಕ ಅಂಶ ಇರುತ್ತದೆ ಎಂದು ವಿಜ್ಞಾನಿ ಟಿಆರ್ ಅನಂತರಾಮು ಟಿವಿ9 ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
-ಉದಯವಾಣಿ

Write A Comment