ನಾಯಕನಹಟ್ಟಿ: ಸಾಲದ ಬಾಧೆಯ ಹಿನ್ನೆಲೆಯಲ್ಲಿ ರೈತನೊಬ್ಬ 15 ದಿನ ಅನ್ನಾಹಾರ ತ್ಯಜಿಸಿ ಪ್ರಾಣಬಿಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬಂಡೆತಿಮ್ಲಾಪುರ ಗ್ರಾಮದಲ್ಲಿ ನಡೆದಿದೆ.
ಎನ್.ಗಿಡ್ಡಪ್ಪ (46) ಎಂಬಾತನೇ ಮೃತಪಟ್ಟ ರೈತ. ಪ್ರಿತಾರ್ಜಿತವಾಗಿ ಬಂದಿದ್ದ ಎಂಟು ಎಕರೆ ಜಮೀನನ್ನು ಗಿಡ್ಡಪ್ಪ ಅವರು ಇಬ್ಬರು ಸಹೋದರರ ಜತೆ ಹಂಚಿಕೊಂಡಿದ್ದ. ತನ್ನ ಪಾಲಿಗೆ ಬಂದಿದ್ದ ಹೊಲದಲ್ಲಿ ಈರುಳ್ಳಿ ಮತ್ತು ಶೇಂಗಾ ಬೆಳೆದಿದ್ದ. ಕಳೆದ ವರ್ಷ 12 ಕೊಳವೆಬಾವಿ ಕೊರೆಸಿದ್ದ. ಆದರೆ ಅವೆಲ್ಲವೂ ವಿಫಲವಾಗಿದ್ದವು. ನೀರಿನ ಕೊರತೆಯಿಂದ ಬೆಳೆಗಳೆಲ್ಲ ಒಣಗಿದ್ದವು. ಈತ ಬ್ಯಾಂಕ್ ಹಾಗೂ ಖಾಸಗಿಯಾಗಿ 4.5 ಲಕ್ಷ ರೂ. ಸಾಲ ಮಾಡಿದ್ದ. ಬೆಳೆಹಾನಿ ಹಾಗೂ ಸಾಲಬಾಧೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಗಿಡ್ಡಪ್ಪ, ಕಳೆದ 15 ದಿನಗಳಿಂದ ಅನ್ನಾಹಾರ ತ್ಯಜಿಸಿದ್ದ ಎನ್ನಲಾಗಿದೆ. ಊಟ ಮಾಡುವಂತೆ ಪತ್ನಿ ಹಾಗೂ ಮಕ್ಕಳು ಸಾಕಷ್ಟು ಬಾರಿ ಒತ್ತಾಯಿಸಿದರೂ ಈತ ಮಾತ್ರ ಊಟ ಮಾಡಿರಲಿಲ್ಲ.
ಮನೆಯವರೇ ಒತ್ತಾಯ ಮಾಡಿ ನೀರು ಕುಡಿಸುತ್ತಿದ್ದರು. ಈ ಮಧ್ಯೆ ಉಪವಾಸದಿಂದ ಅಸ್ವಸ್ಥನಾಗಿದ್ದ ಈತನನ್ನು ಎರಡು ಬಾರಿ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಮಂಗಳವಾರ ಈತ ಕೊನೆಯುಸಿರೆಳೆದಿದ್ದಾನೆ. ತಾನು ಮಾಡಿದ ಸಾಲದ ವಿವರವನ್ನು ನೋಟ್‌ಪುಸ್ತಕವೊಂದರಲ್ಲಿ ಬರೆದಿಟ್ಟಿರುವ ಗಿಡ್ಡಪ್ಪಗೆ ಪತ್ನಿ, ಮೂವರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದಾರೆ. ಬುಧವಾರ ಅಂತ್ಯಕ್ರಿಯೆ ನಡೆಯಿತು. ಆತ್ಮಹತ್ಯೆ ಮಾಡಿಕೊಳ್ಳುವುದು ಅವಮಾನ. ಅದರ ಬದಲಿಗೆ ಉಪವಾಸವಿದ್ದು ಪ್ರಾಣಬಿಡುವುದು ಸೂಕ್ತ ಎಂದು ತನ್ನ ಸ್ನೇಹಿತರ ಬಳಿ ಹೇಳುತ್ತಿದ್ದ ಎಂದು ಹೇಳಲಾಗಿದೆ.
ಮತ್ತೆ ಮೂವರು ರೈತರ ಆತ್ಮಹತ್ಯೆ: ಇದೇ ವೇಳೆ ರಾಜ್ಯದಲ್ಲಿ ಮತ್ತೆ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರದ ಮುಳ್ಯ ಅಟೂÉರಿನ ಶಾಮಯ್ಯಗೌಡ (55), ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಐನಾಪುರ ಗ್ರಾಮದ ಮಲ್ಲಪ್ಪ ಹಯ್ನಾಳಪ್ಪ ದೇವರಮನಿ (47) ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಒಡ್ಡರಕೊಪ್ಪಲು ಗ್ರಾಮದ ನಟರಾಜು (50) ಎಂಬಾತ ನೇಣಿಗೆ ಕೊರಳೊಡ್ಡಿದ್ದಾನೆ.
-ಉದಯವಾಣಿ