ಕರ್ನಾಟಕ

ಕರ್ನಾಟಕ ಗಡಿರಕ್ಷಣಾ ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಮಳೀಮಠ್ ಇನ್ನಿಲ್ಲ

Pinterest LinkedIn Tumblr

justice-vs-malimath-webfff

ಬೆಂಗಳೂರು: ಕರ್ನಾಟಕ ಗಡಿ ರಕ್ಷಣಾ ಆಯೋಗದ ಅಧ್ಯಕ್ಷ, ಕರ್ನಾಟಕ ಮತ್ತು ಕೇರಳ ರಾಜ್ಯ ಹೈಕೋರ್ಟ್​ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎಸ್. ಮಳೀಮಠ್ ಅವರು ಬುಧವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.

86ರ ಹರೆಯದ ಮಳೀಮಠ್ ಅವರು ಪತ್ನಿ ಪ್ರೇಮಾ ದೇವಿ ವಿ. ಮಳೀಮಠ್, ಒಬ್ಬ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ವೈರಾಣು ಸೋಂಕಿನ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಮಳೀಮಠ್ ಅವರನ್ನು ವಾರದ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ. ಗುರುವಾರ ಬೆಳಗ್ಗೆ 10.30ರ ವೇಳೆಗೆ ಬೆಂಗಳೂರಿನ ಚಾಮರಾಜಪೇಟೆ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

1929ರ ಜೂನ್ 12ರಂದು ಜನಿಸಿದ ವಿ.ಎಸ್. ಮಳೀಮಠ್ ಅವರು ಎಲ್​ಎಲ್​ಬಿ ಪದವಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದರು. 1952ರಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಪಬ್ಲಿಕ್ ಇಂಟರ್​ನ್ಯಾಷನಲ್ ಕಾನೂನು ಸ್ನಾತಕೋತ್ತರ ಪದವಿ ಪಡೆದಿದ್ದರು. ಬಳಿಕ ಬಾಂಬೆ ಹೈಕೋರ್ಟಿನಲ್ಲಿ ವಕಾಲತ್ತು ಆರಂಭಿಸಿದ್ದ ಅವರು 1956ರಲ್ಲಿ ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಾಯಿಸಿದ್ದರು. ಭಾರತದ ಕ್ರಿಮಿನಲ್ ನ್ಯಾಯ ಸುಧಾರಣಾ ಸಮಿತಿಯ ಮುಖ್ಯಸ್ಥ, ವಿಶ್ವಸಂಸ್ಥೆಯ ಪ್ರತಿನಿಧಿಯಾಗಿ ನೈಜೀರಿಯಾ ಮತ್ತು ಶ್ರೀಲಂಕಾದಲ್ಲಿ ಮಾನವ ಹಕ್ಕುಗಳ ಜಾರಿ ನಿಗಾ ಸೇವೆ, ಅಡ್ವೋಕೇಟ್ ಜನರಲ್ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು.

ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಅವರು ನ್ಯಾಯಮೂರ್ತಿ ಮಳೀಮಠ್ ನಿಧನಕ್ಕೆ ತಮ್ಮ ಸಂತಾಪ ವ್ಯಕ್ತ ಪಡಿಸಿದ್ದಾರೆ.

Write A Comment