ಮೈಸೂರು.ಡಿ.21: ಏಕಾದಶಿಗಳಲ್ಲೇ ಅತ್ಯಂತ ಶ್ರೇಷ್ಠವಾದ ಏಕಾದಶಿ ಹಾಗೂ ಧನುರ್ಮಾಸದ ಶುಕ್ಲ ಪಕ್ಷದ ವೈಕುಂಠ ಏಕಾದಶಿ ಪ್ರಯುಕ್ತ ನಗರದಲ್ಲೆಡೆ ವಂಕಟೇಶ್ವರನ ದೇವಾಯಗಳಲ್ಲಿ ಇಂದು ಅತ್ಯಂತ ಸಂಭ್ರಮ ಸಡಗರದಿಂದ ವಿಶೇಷ ಪೂಜೆಗಳು ನಡೆದವು.
ಶ್ರೀ ಹರಿ ದರ್ಶನಕ್ಕೆ ನಗರದೆಲ್ಲೆಡೆ ಇರುವ ವೆಂಕಟೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ವ್ಯವಸ್ಥೆ ಮಾಡಲಾಗಿದ್ದು. ಇಂದು ಮುಂಜಾನೆಯಿಂದಲೇ ಸಹಸ್ರಾರು ಮಂದಿ ಭಗವಂತನ ದರ್ಶನ ಪಡೆದು ಪೂನೀತಾರಾದರು.
ಇಂದು ಶುಭದಿನ ಭಕ್ತರಿಗಾಗಿ ವೈಕುಂಠದಲ್ಲಿ ದ್ವಾರದ ಬಾಗಿಲುಗಳು ತೆರೆದಿರುತ್ತವೆ ಎಂಬ ಪ್ರತೀತಿ ಇದೆ. ಇಂದು ಶ್ರೀ ಹರಿ ದರ್ಶನ ಗೈಯುವ ಪ್ರತಿಯೊಬ್ಬ ಭಕ್ತರಿಗೂ ಶುಭಫಲಗಳು ಪ್ರಾಪ್ತವಾಗಿ ಆರೋಗ್ಯ ಭಾಗ್ಯಗಳು ವೃದ್ಧಿಸುವುದಲ್ಲದೇ ಭಕ್ತರು ಬೇಡುವ ವರವನ್ನು ಶ್ರೀಮನ್ನಾರಾಯಣ ಕರುಣಿಸುತ್ತಾನೆ. ಎಂಬ ಭಾವನೆ ಜನಮಾನಸರಲ್ಲಿ ಮೂಡಿದೆ. ಇಂದು ಮುಂಜಾನೆಯಿಂದಲೇ ಒಂಟಿ ಕೊಪ್ಪಲಿನ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ಸಚ್ಚಿದಾನಂದ ಆಶ್ರಮದಲ್ಲಿರುವ ವೆಂಕಟೇಶ್ವರ ದೇವಾಲಯ, ಜಯನಗರದಲ್ಲಿರುವ ವೆಂಕಟೇಶ್ವರ ಮತ್ತು ವಿಜಯನಗರದಲ್ಲಿರುವ ಯೋಗನರಸಿಂಹಸ್ವಾಮಿ ದೇವಾಲಯಗಳಲ್ಲಿ ಭಕ್ತರು ದೇವರ ದರ್ಶನ ಪಡೆದು ಪುನೀತಾರಾದರು. ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ವಿಶೇಷವಾಗಿ ವಿವಿಧ ಪುಷ್ಪ ಮತ್ತು ಆಭರಣಗಳಿಂದ ಅಲಂಕರಿಸಲಾಗಿತ್ತು. ಭಕ್ತಾದಿಗಳಿಗಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.