ಕರ್ನಾಟಕ

1500 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳ ವಿಸ್ತರಣೆ: ರೋಷನ್‌ಬೇಗ್

Pinterest LinkedIn Tumblr

rosanಬೆಂಗಳೂರು, ಡಿ.16-ನಗರದ ಸಂಚಾರಿ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ 1500 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ರಸ್ತೆಗಳನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲ ಸೌಕರ್ಯ ಹಾಗೂ ವಾರ್ತಾ ಸಚಿವ ರೋಷನ್‌ಬೇಗ್ ತಿಳಿಸಿದರು.  ಬೆಂಗಳೂರು ನಗರ ಸುಸ್ಥಿರ ಮೂಲಸೌಕರ್ಯ ಕುರಿತು ಖಾಸಗಿ ಹೋಟೆಲ್‌ನಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.  ಬಳ್ಳಾರಿ, ಸರ್ಜಾಪುರ, ಜಯಮಹಲ್, ಟ್ಯಾನರಿ, ದಿಣ್ಣೂರು ಹಾಗೂ ವರ್ತೂರು ರಸ್ತೆಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಸುಬ್ರತೋಮುಖರ್ಜಿ ರಸ್ತೆಯನ್ನು ವಿಸ್ತರಿಸಿ ಕೆಳಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ನಗರದ 25 ಕಡೆ ಸ್ಕೈವಾಕ್ ನಿರ್ಮಿಸುತ್ತಿದ್ದು ಹೆಬ್ಬಾಳ ರಿಂಗ್ ರಸ್ತೆ ಜಂಕ್ಷನ್ ಬಳಿ ಕೆಳಸೇತುವೆ ನಿರ್ಮಿಸಿ ಮೇಲ್ಸೇತುವೆ ವಿಸ್ತರಣೆ ಮಾಡಲಾಗುವುದು. ದೊಡ್ಡ ನೆಕ್ಕುಂದಿ ಜಂಕ್ಷನ್‌ನಲ್ಲಿ  ಮೇಲ್ಸೇತುವೆ ನಿರ್ಮಾಣ ಮಾಡುವುದರಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಇದಲ್ಲದೆ ಆಯ್ದ ಸ್ಥಳಗಳಲ್ಲಿ ಗ್ರೇಡ್ ಸೆಪರೇಟರ್ ನಿರ್ಮಾಣ ಮಾಡಲು ಚಿಂತನೆ ನಡೆದಿದೆ ಎಂದರು. ಟೆಂಡರ್ ಶೂರ್ ಯೋಜನೆಯಡಿ 58 ರಸ್ತೆಗಳ ಅಭಿವೃದ್ದಿಗೆ ಕ್ರಮ ವಹಿಸಲಾಗುತ್ತಿದ್ದು ಓಕಳಿಪುರ ಬಳಿ ರೈಲ್ವೆ ಕ್ರಾಸಿಂಗ್ ವಿಸ್ತರಣೆ ಸೇರಿದಂತೆ ಇತರೆ ಕಡೆಗಳಲ್ಲಿ ನೈರುತ್ಯ ರೈಲ್ವೇ ಸಹಯೋಗದಲ್ಲಿ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ನಿರ್ಮಾಣ ಮಾಡಲಿದ್ದೇವೆ ಎಂದು ವಿವರಿಸಿದರು.

ಕೆಂಪೇಗೌಡ ಬಡಾವಣೆಯಲ್ಲಿ 5 ಸಾವಿರ ನಿವೇಶನ ಸೃಷ್ಟಿಸಲಿದ್ದೇವೆ. ಇದರೊಂದಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ರಾಜ್ಯ ಹೆದ್ದಾರಿ 7 ಮತ್ತು 4 ನ್ನು ಸಂಪರ್ಕಿಸಲು ಜಪಾನ್‌ನ ಜೈಕಾ ಕಂಪೆನಿ ನೆರವಿನೊಂದಿಗೆ ಫೆರಿಫೆರಲ್ ರಸ್ತೆ ನಿರ್ಮಿಸಲಾಗುತ್ತಿದೆ.  ನಗರದ ಉತ್ತರ, ದಕ್ಷಿಣ ಹಾಗು ಪಶ್ಚಿಮ ಭಾಗವನ್ನು ಸಂಪರ್ಕಿಸುವ ಎರಡು ಪ್ರಮುಖ ಕಾರಿಡಾರ್ ನಿರ್ಮಿಸುವ ಪ್ರಸ್ತಾವವಿದೆ. ಇದು ನಿರ್ಮಾಣವಾದಲ್ಲಿ ಸಾಕಷ್ಟು ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದರು.  ನಗರದ ಮನೆ ಮನೆಗಳಿಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ತಲುಪಿಸುವ ಕಾಮಗಾರಿ ಕೇಂದ್ರದ ಅನಿಲ ಪ್ರಾಧಿಕಾರದಿಂದ ಆರಂಭವಾಗಿದ್ದು, ದಾಬೋಲ್‌ನಿಂದ ಬೆಂಗಳೂರು ವರೆಗಿನ 746 ಕಿ.ಮೀ.ದೂರದ ಪೈಪ್‌ಲೈನ್ ಮಾರ್ಗ ರಾಜ್ಯದ 9 ಜಿಲ್ಲೆಗಳ ಮುಖಾಂತರ ಹಾದು ಬರಲಿದೆ.

ಈ ಯೋಜನೆ ಪೂರ್ಣವಾದ ನಂತರ ಬೆಂಗಳೂರಿನ ಮನೆ-ಮನೆಗಳಿಗೆ ಪೈಪ್‌ಲೈನ್ ಮುಖಾಂತರವೇ ಅನಿಲ ಪೂರೈಕೆಯಾಗಲಿದೆ. ಬೆಂಗಳೂರಿನಲ್ಲಿ ಪ್ರಸಕ್ತ 0.5 ಲಕ್ಷ ಜನರಿಗೆ ಮಾತ್ರ ಮೂಲ ಸೌಲಭ್ಯ ದೊರೆಯುತ್ತಿದ್ದು, ಇದನ್ನು 10 ದಶಲಕ್ಷ ಜನರಿಗೆ ತಲುಪುವಂತೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಬೆಂಗಳೂರು ನಾಗರೀಕರಿಗೆ ಕುಡಿಯುವ ನೀರು ಪೂರೈಸುವ ಸಮಗ್ರ ಯೋಜನೆ ರೂಪುಗೊಂಡಿದ್ದು, ವಿವಿಧ ಆರ್ಥಿಕ ಸಂಸ್ಥೆಗಳ ನೆರವು ಪqಯಲಾಗುತ್ತಿದೆ. ಮುಂದಿನ ಮಾರ್ಚ್ ವೇಳೆಗೆ ಮೆಟ್ರೋ ಕಾಮಗಾರಿ ಪೂರ್ಣಗೊಳ್ಳಲಿದ್ದು, ಎರಡನೇ ಹಂತದ ಮೆಟ್ರೋ ಕಾಮಗಾರಿಯನ್ನು 26,450 ಕೋಟಿ ರೂ. ವೆಚ್ಚದಲ್ಲಿ 73 ಕಿ.ಮೀ.ಉದ್ದದ ಮೆಟ್ರೋ ಮಾರ್ಗ ನಿರ್ಮಿಸುವ ಯೋಜನೆ ಇದೆ ಎಂದರು.

ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ರಾಜ್ಯಾದ್ಯಂತ 87 ಯೋಜನೆಗಳು ಪ್ರಗತಿಯಲ್ಲಿದ್ದು ಇದನ್ನು 87518.72 ಕೋಟಿ ರೂ. ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ. 10 ಸಾವಿರ ಕಿ.ಮೀ. ಉದ್ದದ ರಸ್ತೆ ಸಂಪರ್ಕ ಕಲ್ಪಿಸುವ 52 ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಭಾರತೀಯ ಕೈಗಾರಿಕಾ ಸಂಸ್ಥೆಯ ವೇಣು, ಸಿಬಿಆರ್‌ಇ ಸೌತ್ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಗುಜೋದ್ ಬಾಟಿಯಾ, ಓಲ್ವೋ ಇಂಡಿಯಾದ ಕಮಲ್ ಪಾಲಿ, ಶೇಖರ್ ವಿಶ್ವನಾಥ್, ಜಿ.ಕೆ.ಮೊಹಿದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

Write A Comment