ಕರ್ನಾಟಕ

1750ಕ್ಕೂ ಹೆಚ್ಚು ಚಿಲ್ಲರೆ ಮದ್ಯ ಮಾರಾಟದ ಅಂಗಡಿಗಳಿಗೆ ಲೈಸೆನ್ಸ್ ನೀಡಲು ಮುಂದಾದ ರಾಜ್ಯ ಸರ್ಕಾರ

Pinterest LinkedIn Tumblr

saraಬೆಂಗಳೂರು, ಡಿ.13- ರಾಜ್ಯದಲ್ಲಿ ಜನರಿಗೆ ಹತ್ತಿರವಾಗಿ ಮದ್ಯ ದೊರೆಯುವಂತೆ ಮಾಡಲು 1750ಕ್ಕೂ ಹೆಚ್ಚು  ಚಿಲ್ಲರೆ ಮದ್ಯ ಮಾರಾಟದ ಅಂಗಡಿಗಳಿಗೆ ಲೈಸೆನ್ಸ್ ಕೊಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಅಬಕಾರಿ ಸಚಿವ ಮನೋಹರ ತಹಸೀಲ್ದಾರ್ ತಿಳಿಸಿದರು.  ನಗರದ ಪುರಭವನದಲ್ಲಿಂದು ಶ್ರೀನಿವಾಸ ಬಲಿಜ ಸಂಘದ 35ನೇ ವಾರ್ಷಿಕೋತ್ಸವ, 15ನೇ ವಧು-ವರರ ಸಮಾವೇಶದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, 1992ರಿಂದಲೂ ಚಿಲ್ಲರೆ (ಸಿಎಲ್-2-  ಸಗಟು ಸಿಎಲ್-9) ಲೈಸೆನ್ಸ್ ಕೊಟ್ಟಿಲ್ಲ. ಬಾರ್ ಆಂಡ್ ರೆಸ್ಟೋರೆಂಟ್  (ಸಿಎಲ್-7)ಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ ಎಂದರು.
1991ರ ಜನಗಣತಿಯನ್ನು ಆಧರಿಸಿ ಚಿಲ್ಲರೆ ಮದ್ಯ ಮಾರಾಟ ಪರವಾನಗಿಯನ್ನು ನೀಡಲಾಗಿತ್ತು.

ಈವರೆಗೂ ಸುಮಾರು 15ಸಾವಿರ ಇಂತಹ ಅಂಗಡಿಗಳಿವೆ.  2011ರ ಜನಗಣತಿಯನ್ನು ಆಧರಿಸುವುದಾದರೆ 1750 ಪರವಾನಗಿಗಳನ್ನು ನೀಡಬೇಕಾಗಿದೆ. ಈ ಬಗ್ಗೆ  ಚಿಂತನೆ ನಡೆದಿದೆ. ಮುಖ್ಯಮಂತ್ರಿಯವರ ಜತೆ ಚರ್ಚೆ ನಡೆಸಿದ್ದೇನೆ. ಯಾವುದೇ ನಿರ್ಧಾರ ಆಗಿಲ್ಲ ಎಂದರು.

ಹೊಸ ಲೈಸೆನ್ಸ್ ಕೊಡುವುದು ಅನಿವಾರ್ಯ. ಜನರಿಗೆ ಹತ್ತಿರದಲ್ಲಿ ಕಡಿಮೆ ಬೆಲೆಗೆ ಮದ್ಯ ದೊರಕುವಂತೆ ಮಾಡುವುದು ಸರ್ಕಾರದ ಆದ್ಯತೆ. ಇದರಿಂದ ನಿರುದ್ಯೋಗಿಗಳಿಗೆ ಮತ್ತು ಪರಿಶಿಷ್ಟ ಸಮುದಾಯಗಳಿಗೆ ಅನುಕೂಲವಾಗುತ್ತದೆ. ಸರ್ಕಾರಕ್ಕೂ ಆದಾಯ ಬರುತ್ತದೆ. ಪ್ರಮುಖವಾಗಿ ನಕಲಿ ಮತ್ತು ಅಕ್ರಮ ಮದ್ಯ ಮತ್ತು ಕಳ್ಳಬಟ್ಟಿಗೆ ಕಡಿವಾಣ ಬೀಳಲಿದೆ ಎಂದು ಅಭಿಪ್ರಾಯಪಟ್ಟರು.  ಅಗ್ಗದ ದರದಲ್ಲಿ ಮದ್ಯ ಒದಗಿಸುವುದು ಮುಖ್ಯಮಂತ್ರಿ ಅವರ ಚಿಂತನೆಯಾಗಿದೆ. ತಯಾರಿಕಾ ಹಂತದಲ್ಲಿ ಕೆಲವು ವಸ್ತುಗಳನ್ನು ಅಳವಡಿಕೆ ಮಾಡುತ್ತಿದ್ದು, ಅದನ್ನು ಕಡಿಮೆ ಮಾಡಿ ಮದ್ಯದ ಬೆಲೆ ಕಡಿಮೆ ಮಾಡುವ ಚಿಂತನೆ ನಡೆದಿದೆ ಎಂದು ಹೇಳಿದರು.

ಸದ್ಯಕ್ಕೆ ರಾಜ್ಯದಲ್ಲಿ ಸಾರಾಯಿ ಮತ್ತು ಹಂಡ ಮರು ಜಾರಿಗೊಳಿಸುವ ಆಲೋಚನೆಯೇ ಇಲ್ಲ. ಆದರೆ, ಆರೋಗ್ಯಕರ ಪಾನೀಯವಾಗಿರುವ ಮತ್ತು ರೈತರಿಗೆ ಅನುಕೂಲವಾಗುವ ನೀರಾ ಮಾರಾಟವನ್ನು ಅಧಿಕೃತವಾಗಿ ಜಾರಿಗೆ ತರುವ ಚಿಂತನೆ ಇದೆ. ಅಬಕಾರಿ ಇಲಾಖೆಯ ತೆರಿಗೆ ಸಂಗ್ರಹದಲ್ಲಿ ಕೊರತೆ ಉಂಟಾಗಿಲ್ಲ. ಕಳೆದ ವರ್ಷ 15ಸಾವಿರ ಕೋಟಿಯಷ್ಟು ತೆರಿಗೆ ಸಂಗ್ರಹಿಸುವ ಗುರಿ ಇತ್ತು. ಈ ವರ್ಷ ಇನ್ನೂ ಹೆಚ್ಚುವರಿಯಾಗಿ ಹದಿನೇಳುವರೆ ಸಾವಿರ ಕೋಟಿ ಹೆಚ್ಚುವರಿ ಸಂಗ್ರಹಿಸುವ ಗುರಿ ಇದೆ. ಅದನ್ನು ಕ್ರಮಿಸುತ್ತೇವೆ. ಆದರೆ, ತೆರಿಗೆ ಸಂಗ್ರಹಕ್ಕಾಗಿ ಮದ್ಯ ಮಾರಾಟವನ್ನು ಹೆಚ್ಚಿಸುವಂತೆ ಯಾವುದೇ ವರ್ತಕರ ಮೇಲೆ ಒತ್ತಡ ಹೇರಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಎಂಎಸ್‌ಐಎಲ್‌ನಿಂದ 456 ಸಗಟು ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಮಂಜೂರಾತಿ ಸಿಕ್ಕಿತ್ತು. ಈವರೆಗೂ 407 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಉಳಿದವುಗಳನ್ನು ಸ್ಥಾಪನೆ ಮಾಡಲು ನಿವೇಶನ ಹುಡುಕಾಟ ನಡೆದಿದೆ. ಅಕ್ರಮವಾಗಿ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ತಡೆಯಲು ಇಲಾಖೆ ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಕಾನೂನಿನಲ್ಲೇ ಪ್ರತಿ ವ್ಯಕ್ತಿ 18 ಬಾಟಲ್‌ಗಳನ್ನು ವೈಯಕ್ತಿಕವಾಗಿ ಸಂಗ್ರಹಿಸಿಟ್ಟಿಕೊಳುವ  ಅವಕಾಶವಿದೆ. ಇದನ್ನು ದುರ್ಬಳಕೆ ಮಾಡಿಕೊಂಡು ಅನಧಿಕೃತ ಮದ್ಯ ಮಾರಾಟ ನಡೆಯುತ್ತಿದೆ. ಇಲಾಖೆ  ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

Write A Comment