ಕರ್ನಾಟಕ

ಶಾರುಖ್‌ಗೆ ಬೆಂಗಳೂರಿನಲ್ಲಿ ನೆಲೆಸುವ ಆಸೆ!

Pinterest LinkedIn Tumblr

Shahrukh-Khan

ಬೆಂಗಳೂರು: ‘ನಾನು ಬೆಂಗಳೂರಿನಲ್ಲಿರುವ ನನ್ನ ಸಂಬಂಧಿಕರ ಮನೆಯೊಂದನ್ನು ಪುನಃ ಕಟ್ಟಬೇಕು. ನನ್ನ ಮಕ್ಕಳೊಂದಿಗೆ ಅಲ್ಲಿಗೆ ಬಂದು ಕೆಲವು ಕಾಲ ನೆಲೆಸಬೇಕು. ನಾನು ನನ್ನ ಬಾಲ್ಯ ಕಳೆದಿದ್ದು ಇದೇ ಊರಲ್ಲಿ…’

ಈ ಅನಿಸಿಕೆ ಹಂಚಿಕೊಂಡಿದ್ದು ಯಾರು ಗೊತ್ತಾ?! ಬಾಲಿವುಡ್‌ನ ‘ಬಾದ್‌ಷಾ’ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ ಶಾರುಖ್‌ ಖಾನ್‌. ಐಐಎಂ–ಬಿ ಹಳೆ ವಿದ್ಯಾರ್ಥಿಗಳು ಆಯೋಜಿಸಿರುವ ನಾಯಕತ್ವ ಶೃಂಗ ‘ಇಂಬ್ಯೂ’ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ವೇಳೆ ಶಾರುಖ್‌ ಆಡಿದ ಮಾತುಗಳು ಇವು.

ನಾಯಕತ್ವ ಗುಣಗಳ ಬಗ್ಗೆ ಹದಿನೈದು ನಿಮಿಷದ ದಿಕ್ಸೂಚಿ ಭಾಷಣ ಮಾಡಿದ ಶಾರುಖ್‌, ನಂತರ ಪ್ರೇಕ್ಷಕರ ಜೊತೆ ಸಂವಾದಕ್ಕೆ ಕುಳಿತರು. ಬೆಂಗಳೂರಿನ ಬಗ್ಗೆ ತಮ್ಮ ಅನಿಸಿಕೆ ಏನು ಎಂಬ ಪ್ರಶ್ನೆಗೆ, ‘ನನ್ನ ಬಾಲ್ಯದ 5–6 ವರ್ಷಗಳನ್ನು ನಾನು ಮಂಗಳೂರು ಮತ್ತು ಬೆಂಗಳೂರಿನಲ್ಲಿ ಕಳೆದೆ. ನನ್ನ ಸಂಬಂಧಿಕರು ಇಂದಿಗೂ ಇಲ್ಲೇ ನೆಲೆಸಿದ್ದಾರೆ’ ಎಂದರು.

‘ನಾನು ಇದ್ದ ಕಾಲದಲ್ಲಿ ಇಡೀ ಬೆಂಗಳೂರಿನ ಹವಾಮಾನ ಆಹ್ಲಾದಕರ ಆಗಿತ್ತು. ಕಬ್ಬನ್‌ ಪಾರ್ಕ್‌ನ ವಾತಾವರಣಕ್ಕಾಗಿ ನಾನು ಇಂದಿಗೂ ಹಂಬಲಿಸುತ್ತೇನೆ. ನನ್ನ ಸಂಬಂಧಿಕರೊಬ್ಬರ ಮನೆಯನ್ನು ಪುನಃ ನಿರ್ಮಿಸಿ, ಅಲ್ಲಿ ನಾನು ನನ್ನ ಮಕ್ಕಳೊಂದಿಗೆ ನೆಲೆಸಬೇಕು’ ಎಂಬ ಇಂಗಿತ ವ್ಯಕ್ತಪಡಿಸಿದರು.

ಸಾಮಾಜಿಕ ಮಾಧ್ಯಮ: ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಸಂಸದ ಶಶಿ ತರೂರ್‌ ಅವರು ಶಾರುಖ್‌ರತ್ತ ಒಂದು ಪ್ರಶ್ನೆ ಎಸೆದರು. ‘ಸಾಮಾಜಿಕ ಜಾಲತಾಣಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?’ ಎಂದು ಕೇಳಿದರು. ‘ಅದೊಂಥರಾ ಪ್ರೇಮ ಸಂಬಂಧ ಇದ್ದಂತೆ!’ ಎಂದು ಉತ್ತರಿಸಿದರು ಶಾರುಖ್‌!

ಮೊದಲಿಗೆ ಅಲ್ಲಿ ಎಲ್ಲವೂ ಚೆನ್ನಾಗಿಯೇ ಕಾಣುತ್ತದೆ. ನಂತರ ಎಲ್ಲದರ ಬಗ್ಗೆಯೂ ಅಪಸ್ವರ ಆರಂಭವಾಗುತ್ತದೆ. ಟ್ವಿಟರ್‌, ಫೇಸ್‌ಬುಕ್‌ಗಳ ಕತೆ ಕೂಡ ಇಷ್ಟೆ. ಒಮ್ಮೆ ಸಾಮಾಜಿಕ ಜಾಲತಾಣಗಳಿಗೆ ಪ್ರವೇಶ ಪಡೆದ ನಂತರ ಅವುಗಳ ಬಗ್ಗೆ ದೂರಿ ಪ್ರಯೋಜನ ಇಲ್ಲ. ‘ನಿಮಗೆ ಇರುವಂಥ ಮಾತಿನ ಹಕ್ಕು ಅಲ್ಲಿ ಎಲ್ಲರಿಗೂ ಇರುತ್ತದೆ. ನಾನು ಮಾತ್ರ ಇಲ್ಲಿ ಮಾತನಾಡುವೆ, ನೀವು ಮಾತನಾಡಬಾರದು’ ಎನ್ನಲಾಗದು ಎಂದು ಹೇಳಿದರು.

ಪ್ರೇಮ ಚಿತ್ರಗಳು: ‘ಪ್ರೀತಿ–ಪ್ರೇಮ ಇರುವ ಚಿತ್ರಗಳಲ್ಲಿ ನಟಿಸುವುದು ನನ್ನಿಂದ ಸಾಧ್ಯವಿಲ್ಲ ಎಂದು ನಿರ್ದೇಶಕರ ಬಳಿ ಹೇಳುತ್ತಿದ್ದೆ. ಆದರೆ 32ನೇ ವಯಸ್ಸಿನಲ್ಲಿ ನಾನು ಕುಛ್‌ ಕುಛ್‌ ಹೋತಾ ಹೈ ಚಿತ್ರಕ್ಕಾಗಿ ಕಾಲೇಜು ಹುಡುಗನಾದೆ. ಆ ಚಿತ್ರ ಯಶಸ್ಸು ಕಂಡಿತು. ನಿಮಗೆ ಬೇಡ ಅನಿಸಿದ್ದನ್ನೂ ಮಾಡಿ. ಅಲ್ಲೂ ಕಲಿಯುವುದಿದೆ’ ಎಂದು ಯುವಕರಿಗೆ ಕಿವಿಮಾತು ಹೇಳಿದರು.

‘ಬಾಝಿಗರ್‌, ಢರ್‌, ಕಭಿ ಹಾಂ ಕಭಿ ನಾ ಚಿತ್ರಗಳಲ್ಲಿ ನಟಿಸಬೇಡ. ನಿನ್ನ ಭವಿಷ್ಯವೇ ಹಾಳಾಗುತ್ತದೆ ಎಂದು ಕೆಲವರು ನನಗೆ ಎಚ್ಚರಿಕೆ ನೀಡಿದ್ದರು. ಆದರೆ ಈಗ ನನ್ನ ಜೀವನದ ಮಹತ್ವದ ಚಿತ್ರಗಳಲ್ಲಿ ಅವು ಸೇರಿವೆ. ನನಗೆ ಇಷ್ಟವಾದ ಚಿತ್ರಗಳನ್ನು ಮಾಡುವುದು ನನ್ನ ಆಸಕ್ತಿ’ ಎಂದು ಭಾಷಣದಲ್ಲಿ ಹೇಳಿದರು.

* ನಾನು ಅಳುತ್ತೇನೆ. ಸಮಾಧಾನ ಹೇಳಿಕೊಳ್ಳುತ್ತೇನೆ. ನಂತರ ಎಂತಹ ಸೋಲನ್ನೂ ಅಪ್ಪಿಕೊಳ್ಳುವ ಧೈರ್ಯದೊಂದಿಗೆ ಮುನ್ನಡೆಯುತ್ತೇನೆ- ಶಾರುಖ್‌ ಖಾನ್‌,  ಬಾಲಿವುಡ್‌ ನಟ

Write A Comment