ಕರ್ನಾಟಕ

ಸಾಲ ತೀರಿಸಲು ಅತ್ತೆ ಮನೆಗೇ ಕನ್ನ…

Pinterest LinkedIn Tumblr

theft

ಬೆಂಗಳೂರು: ಸಾಲ ತೀರಿಸಲು ಸೋದರತ್ತೆ ಮನೆಯಲ್ಲೇ 10 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿದ್ದ ತಾಜೀರ್ (25) ಎಂಬಾತ ಜಗಜೀವನ್‌ರಾಮನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹಳೇ ಗುಡ್ಡದಹಳ್ಳಿ ಸಮೀಪದ ಕುವೆಂಪುನಗರ ನಿವಾಸಿಯಾದ ತಾಜೀರ್, ಮನೆ ಹತ್ತಿರವೇ ಅಲ್ಮೆರಾ ಮಾರಾಟ ಮಳಿಗೆ ಇಟ್ಟುಕೊಂಡಿದ್ದಾನೆ. ಆತನ ತಂದೆಯ ತಂಗಿ (ಸೋದರ ಅತ್ತೆ), ಕುಟುಂಬ ಸದಸ್ಯರ ಜತೆ ಪಕ್ಕದ ರಸ್ತೆಯಲ್ಲೇ ನೆಲೆಸಿದ್ದಾರೆ. ಡಿ.8ರಂದು ನಕಲಿ ಕೀ ಬಳಸಿ ಅವರ ಮನೆಗೆ ನುಗ್ಗಿದ್ದ ಆರೋಪಿ, ಹಣ–ಒಡವೆಗಳನ್ನು ಕಳವು ಮಾಡಿದ್ದ.

ಕೃಷ್ಣಗಿರಿಯಲ್ಲಿರುವ ತಮ್ಮ ಜಮೀನನ್ನು ₹ 10 ಲಕ್ಷಕ್ಕೆ ಮಾರಾಟ ಮಾಡಿದ್ದ ತಾಜಿರ್‌ನ ಸೋದರ ಅತ್ತೆ, ಆ ಹಣವನ್ನು ತಂದು ಅಲ್ಮೆರಾದಲ್ಲಿ ಇಟ್ಟಿದ್ದರು. ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ ಆರೋಪಿಗೆ, ಅತ್ತೆ ಹಣ ತಂದು ಇಟ್ಟಿರುವ ವಿಷಯ ಗೊತ್ತಾಗಿತ್ತು. ಅದನ್ನು ದೋಚಲು ಸಂಚು ರೂಪಿಸಿಕೊಂಡ ಆತ, ಮನೆಯ ಅಸಲಿ ಕೀಯನ್ನು ಕದ್ದು ವಿಜಯನಗರದಲ್ಲಿ ನಕಲಿ ಕೀ ಮಾಡಿಸಿಕೊಂಡಿದ್ದ.

ಡಿ.8ರಂದು ಅತ್ತೆಯ ಕುಟುಂಬ ಜಮೀನನ್ನು ನೋಂದಣಿ ಮಾಡಿಕೊಡಲು ಕೃಷ್ಣಗಿರಿಗೆ ಹೋಗಿತ್ತು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಆರೋಪಿ, ಆ ದಿನ ಮಧ್ಯಾಹ್ನ 3 ಗಂಟೆಯಿಂದ 4.30ರ ನಡುವೆ ಮನೆಗೆ ನುಗ್ಗಿ ಕಳವು ಮಾಡಿದ್ದ. ಕುಟುಂಬ ಸದಸ್ಯರು ಮರುದಿನ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಠಾಣೆಗೆ ಹೋದ!: ಮನೆಯಲ್ಲಿ ಕಳ್ಳತನ ನಡೆದಿರುವುದಾಗಿ ಆರೋಪಿಯ ಮಾವ ಅಪ್ಸರ್‌ ಪಾಷಾ ಜೆ.ಜೆ.ನಗರ ಪೊಲೀಸರು ದೂರು ಕೊಟ್ಟಿದ್ದರು. ಅವರ ಜತೆ ಆರೋಪಿ ಸಹ ಠಾಣೆಗೆ ಹೋಗಿ, ಶೀಘ್ರವೇ ಕಳ್ಳರನ್ನು ಪತ್ತೆ ಹಚ್ಚಬೇಕೆಂದು ಮನವಿ ಮಾಡಿದ್ದ. ಈ ವರ್ತನೆಯಿಂದ ಅನುಮಾನಗೊಂಡ ಪೊಲೀಸರು, ಆತನ ಮೊಬೈಲ್‌ ಕರೆಗಳ ವಿವರಗಳನ್ನೇ (ಸಿಡಿಆರ್‌) ಮೊದಲು ಪರಿಶೀಲಿಸಿದರು.

‘ತಾಜೀರ್‌ನ ಮೊಬೈಲ್ ಡಿ.8ರ ಮಧ್ಯಾಹ್ನ ಸ್ವಿಚ್‌ ಆಫ್‌ ಆಗಿದ್ದ ಸಂಗತಿ ಸಿಡಿಆರ್ ಪರಿಶೀಲನೆಯಿಂದ ಗೊತ್ತಾಯಿತು. ಸ್ವಿಚ್ ಆಫ್ ಮಾಡಿದ್ದರ ಬಗ್ಗೆ ವಿಚಾರಿಸಿದಾಗ ತೊದಲಿಸಲು ಆರಂಭಿಸಿದ. ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡ.
ಆರೋಪಿಯು ತನ್ನ ಮಳಿಗೆಯ ಸಜ್ಜಾದಲ್ಲೇ ಹಣ–ಒಡವೆ ಅವಿತಿಟ್ಟಿದ್ದ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

‘ಚೀಟಿ ವ್ಯವಹಾರ ನಡೆಸಿ ಸಾಲ ಮಾಡಿಕೊಂಡಿದ್ದೆ. ಅತ್ತೆ ಮನೆಯಲ್ಲಿ ಕದ್ದು ಆ ಸಾಲ ತೀರಿಸಲು ನಿರ್ಧರಿಸಿದ್ದೆ’ ಎಂದು ಆರೋಪಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

Write A Comment