ಕರ್ನಾಟಕ

ಹುಚ್ಚಾಟಕ್ಕೆ ಬ್ರೇಕ್; ಎಕ್ಕಡ ಪದ ಬಳಸಲ್ಲ…ಕ್ಷಮಿಸಿ ಎಂದ ವೆಂಕಟ್!

Pinterest LinkedIn Tumblr

Venkatಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ನಟ, ನಿರ್ದೇಶಕ ಹುಚ್ಚ ವೆಂಕಟ್ ಬದಲಾಗಿದ್ದಾರಂತೆ. ಹೌದು ನಾನಿನ್ನು ಮುಂದೆ ಎಕ್ಕಡ ಶಬ್ದ ಬಳಸಲ್ಲ. ಅಷ್ಟೇ ಅಲ್ಲ ಕೋಪ, ಹುಚ್ಚಾಟ ವರ್ತನೆಗಳನ್ನು ಮಾಡಲ್ಲ ಎಂದು ಖಾಸಗಿ ಟಿವಿ ಚಾನೆಲ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.

ಬಿಗ್ ಬಾಸ್ ಕನ್ನಡ ರಿಯಾಲಿಟಿ 3ರ ಶೋನಲ್ಲಿ ಗಾಯಕ ರವಿ ಮೂರುರ್ ಮೇಲೆ ಹಲ್ಲೆ ನಡೆಸಿ, ಬಿಗ್ ಬಾಸ್ ನಿಂದ ಹುಚ್ಚ ವೆಂಕಟ್ ಹೊರಬಿದ್ದಿದ್ದರು. ನಂತರ ಸಾಕಷ್ಟು ಬೆಳವಣಿಗೆ ನಡೆದಿತ್ತು. ಇದೀಗ ರವಿ ಮೂರುರ್ ಜೊತೆ ವೆಂಕಟ್ ಆತ್ಮೀಯವಾಗಿ ಮಾತನಾಡಿದ್ದಾರೆ. ಹಮ್ಮು, ಬಿಮ್ಮುಗಳನ್ನು ಬದಿಗೊತ್ತಿ ಕುಶಲೋಪರಿ ವಿಚಾರಿಸಿ, ಹಾಡನ್ನು ಹಾಡಿ, ರವಿ ಮೂರುರ್ ಜೊತೆ ಕ್ಷಮೆಯಾಚಿಸಿದ್ದಾರೆ.

15ದಿನಗಳ ಕಾಲ ಜೈಲಿನಲ್ಲಿ ಒಂಟಿಯಾಗಿದ್ದೆ. ಜೈಲಿನಲ್ಲೂ ನನಗೆ ಅಪಾರ ಅಭಿಮಾನಿಗಳಿರುವುದು ಗೊತ್ತಾಯ್ತು. ನನ್ನ ಈ ರೀತಿ ಪ್ರೀತಿಸೋ ಅಭಿಮಾನಿಗಳಿರುವುದು ನನಗೆ ಆಗಲೆ ಗೊತ್ತಾಗಿದ್ದು. ಅಭಿಮಾನಿಗಳಿಗೆ, ನ್ಯಾಯಾಧೀಶರಿಗೆ, ವಕೀಲರಿಗೆ ಸೇರಿದಂತೆ ಎಲ್ಲರಿಗೂ ಧನ್ಯವಾದ ಹೇಳಿದ ವೆಂಕಟ್, ಇನ್ಮುಂದೆ ಹುಚ್ಚಾಟಕ್ಕೆ ಅವಕಾಶ ಇಲ್ಲ ಎಂದು ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಹೇಳಿದ್ದಾರೆ.

ಅಂಬೇಡ್ಕರ್ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಅವರ ಬಗ್ಗೆ ತಿಳಿದುಕೊಂಡಿದ್ದೇನೆ. ನನಗೆ ಶ್ಯೂರಿಟಿ ಕೊಟ್ಟು ಹೊರಕರೆ ತಂದ ಮಂಜೇಗೌಡರಿಗೆ ನಾನು ಚಿರಋಣಿ ಎಂದರು. ಹುಚ್ಚ ವೆಂಕಟ್ ಸಿನಿಮಾ ಮತ್ತೆ ರಿಲೀಸ್ ಮಾಡುತ್ತೇನೆ. ನಾನಿನ್ನು ಬಣ್ಣ ಹಚ್ಚುವ ಮೂಲಕ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುವುದಾಗಿ ಹುಚ್ಚ ವೆಂಕಟ್ ತಿಳಿಸಿದ್ದಾರೆ.

ಹುಚ್ಚ ವೆಂಕಟ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದರೂ ಭದ್ರತಾ ಖಾತರಿ ನೀಡಲು ಯಾರೂ ಬಾರದ ಕಾರಣ ಜೈಲಿನಲ್ಲೇ ಉಳಿಯುವಂತಾಗಿತ್ತು.  ರಾಜ್ಯ ಒಕ್ಕಲಿಗರ ಹಿತರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಮೈಲನಹಳ್ಳಿ ಮಂಜೇಗೌಡ ಎಂಬುವವರು ಭದ್ರತಾ ಖಾತರಿ ನೀಡಿದ್ದರು. ಹಾಗಾಗಿ ಬುಧವಾರ ಸಿಟಿ ಸಿವಿಲ್‌ ಕೋರ್ಟ್‌ಗೆ ತೆರಳಿದ ಮಂಜೇಗೌಡ ಅವರು ಭದ್ರತಾ ಖಾತರಿ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ಅದರಂತೆ ಜಾಮೀನು ನೀಡಿದ ದಾಖಲೆಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ನೀಡಿದ ಬಳಿಕ ಹುಚ್ಚ ವೆಂಕಟ್‌ರನ್ನು ಬಿಡುಗಡೆ ಮಾಡಲಾಗಿತ್ತು.
-ಉದಯವಾಣಿ,

Write A Comment