ಕರ್ನಾಟಕ

ಮೇಲ್ಮನೆ ಚುನಾವಣೆ; ಡಿ.7ರಂದು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ದೇವೇಗೌಡ

Pinterest LinkedIn Tumblr

devegowda_____fi________ಬೆಂಗಳೂರು, ಡಿ. 4: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಡಿ.27ರಂದು ನಡೆಯಲಿರುವ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಡಿ.7ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25 ಸ್ಥಾನಗಳ ಪೈಕಿ ಎರಡು-ಮೂರು ಕ್ಷೇತ್ರಗಳನ್ನು ಹೊರತು ಪಡಿಸಿ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಶೀಘ್ರದಲ್ಲೆ ಪಟ್ಟಿ ಪ್ರಕಟಿಸಲಾಗುವುದು ಎಂದರು.

ಒಗ್ಗಟ್ಟಿನ ಹೋರಾಟ: ಜನತಾ ಪರಿವಾರವನ್ನು ಒಗ್ಗೂಡಿಸುವ ಪ್ರಯತ್ನ ಮುಂದುವರಿದಿದ್ದು, ವಿವಿಧ ಪಕ್ಷಗಳನ್ನು ವಿಲೀನಗೊಳಿಸುವ ಬದಲಿಗೆ ಒಕ್ಕೂಟ ವ್ಯವಸ್ಥೆಯಡಿ ಒಗ್ಗಟ್ಟಿನ ಹೋರಾಟ ನಡೆಸಲು ತೀರ್ಮಾನ ಮಾಡಲಾಗಿದೆ. ಜನತಾ ಪರಿವಾರದ ಮುಲಾಯಂ ಸಿಂಗ್ ಯಾದವ್, ಲಾಲೂ ಪ್ರಸಾದ್ ಯಾದವ್, ನಿತೀಶ್‌ಕುಮಾರ್ ಜೊತೆ ಈ ಸಂಬಂಧ ಸಮಾಲೋಚನೆ ನಡೆಸಿದ್ದೇನೆ ಎಂದರು.

ಮುಂಬರಲಿರುವ ಜಿ.ಪಂ., ತಾ.ಪಂ,. ಚುನಾವಣೆ ಹಿನ್ನೆಲೆ ಯಲ್ಲಿ 224 ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಪಕ್ಷವನ್ನು ಸಜ್ಜುಗೊಳಿಸುವೆ ಎಂದ ಅವರು, ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ್ದೇನೆ ಎಂದರು.

ಭಿನ್ನಾಭಿಪ್ರಾಯ ಸತ್ಯಕ್ಕೆ ದೂರ: ಪಕ್ಷದಲ್ಲಿ ಆಂತರಿಕ ಭಿನ್ನಾ ಭಿಪ್ರಾಯ ಇದೆ ಎಂಬುದು ಸತ್ಯಕ್ಕೆ ದೂರ. ಶಾಸಕರ ಸಭೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದು, ಆಂತರಿಕ ಬಿಕ್ಕಟ್ಟು ಶಮನವಾಗಿದೆ ಎಂದು ದೇವೇಗೌಡ ತಿಳಿಸಿದರು.

ಪಕ್ಷದ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಜೆಡಿಎಸ್ ಕಾರ್ಯ ಕರ್ತರಿಗೆ ಅರಿವಿದೆ. ಜಿಲ್ಲಾ ಮುಖಂಡರು ಪಕ್ಷ ಸಂಘಟನೆಗೆ ಉತ್ಸಾಹದಲ್ಲಿದ್ದು, ಅವರೇನೂ ಹಣದ ನಿರೀಕ್ಷೆಯಲ್ಲಿ ಇಲ್ಲ ಎಂದ ಅವರು, ಮೇಲ್ಮನೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲು ತೀರ್ಮಾನ ಮಾಡಿದ್ದೇನೆ ಎಂದರು.

ಕೇಂದ್ರದ ವೈಫಲ್ಯ: ವಿದೇಶಾಂಗ ನೀತಿಯಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದ್ದು, ನೆರೆ-ಹೊರ ರಾಷ್ಟ್ರಗಳೊಂದಿಗೆ ಭಾರತ ದೇಶದ ಸಂಬಂಧ ಉತ್ತಮವಾಗಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಾನಿಶ್ ಅಲಿ ದೂರಿದರು.

ನೆರೆಯ ನೇಪಾಳ ದೇಶದವರು ನಮ್ಮ ಸೈನಿಕರನ್ನು ಅಪ ಹರಣ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ. ದೇವೇಗೌಡ ಪ್ರಧಾನಿ ಯಾಗಿದ್ದ ಕಾಲದಲ್ಲಿ ದೇಶದಲ್ಲಿ ಎಲ್ಲಿಯೂ ಕೋಮು ಸಂಘರ್ಷ ಉದ್ಭವಿಸಿರಲಿಲ್ಲ. ಯುಪಿಎ ಮತ್ತು ಎನ್‌ಡಿಎ ಸರಕಾರಗಳ ಆಡಳಿತ ವೈಖರಿಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Write A Comment