ಕರ್ನಾಟಕ

ಇಸ್ಲಾಮಿಕ್ ಕಾನೂನು(ಶರೀಯತ್) ಕುರಿತು ಕಾರ್ಯಾಗಾರ; ಬಹುಪತ್ನಿತ್ವದ ಹೆಸರಲ್ಲಿ ಅಪಪ್ರಚಾರ: ಖಾಲಿದ್ ಸೈಫುಲ್ಲಾ ರಹ್ಮಾನಿ

Pinterest LinkedIn Tumblr

saifullaಬೆಂಗಳೂರು, ನ.29: ಮುಸ್ಲಿಮರು ಒಂದಕ್ಕಿಂತ ಹೆಚ್ಚು ವಿವಾಹಗಳನ್ನು ಆಗುವ ಮೂಲಕ ತಮ್ಮ ಜನಸಂಖ್ಯೆಯನ್ನು ತೀವ್ರವಾಗಿ ಹೆಚ್ಚಿಸಿ ಕೊಳ್ಳುತ್ತಿದ್ದಾರೆ ಎಂದು ಸಮಾಜ ವಿಭಜಕ ಶಕ್ತಿಗಳು ಅಪಪ್ರಚಾರ ಮಾಡುತ್ತಿವೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯದರ್ಶಿ ವೌಲಾನ ಖಾಲಿದ್ ಸೈಫುಲ್ಲಾ ರಹ್ಮಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ದಾರುಲ್ ಉಲೂಮ್ ಸಬೀಲುರ್ರಶಾದ್‌ನಲ್ಲಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ವತಿ ಯಿಂದ ಆಯೋಜಿಸಲಾಗಿದ್ದ ದಕ್ಷಿಣ ಭಾರತದ ರಾಜ್ಯಗಳ ಮುಫ್ತಿ, ಉಲೇಮಾ ಹಾಗೂ ವಕೀಲರಿಗೆ ಶರೀಯತ್(ಇಸ್ಲಾಮಿಕ್ ಕಾನೂನು)ಗೆ ಸಂಬಂಧಿಸಿದ ಎರಡು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಒಂದಕ್ಕಿಂತ ಹೆಚ್ಚು ವಿವಾಹಗಳನ್ನು ಆಗುವ ಮೂಲಕ ಅಲ್ಪಸಂಖ್ಯಾ ತರು ತಮ್ಮ ಜನಸಂಖ್ಯೆಯನ್ನು ತೀವ್ರವಾಗಿ ಹೆಚ್ಚಿಸಿಕೊಂಡು ಬಹು ಸಂಖ್ಯಾತರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಮಾಜ ವಿಭಜಕ ಶಕ್ತಿಗಳು ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ದೂರಿದರು.

ಒಂದಕ್ಕಿಂತ ಹೆಚ್ಚು ವಿವಾಹದ ಪ್ರಮಾಣವು ಮುಸ್ಲಿಮರಿಗಿಂತ ಬಹುಸಂಖ್ಯಾತರಲ್ಲಿ ಹೆಚ್ಚಿದೆ ಎಂಬುದನ್ನು ಹಲವಾರು ಸಮೀಕ್ಷಾ ವರದಿಗಳೆ ದೃಢಪಡಿಸಿವೆ. 1961ರಲ್ಲಿ ನಡೆದ ಸಮೀಕ್ಷೆಯಲ್ಲಿ ಮುಸ್ಲಿಮರಲ್ಲಿ ಶೇ.4.31, ಹಿಂದೂಗಳಲ್ಲಿ ಶೇ.5.6, ಬುಡಕಟ್ಟು ಹಾಗೂ ಆದಿವಾಸಿಗಳಲ್ಲಿ ಶೇ.18ರಷ್ಟು ಒಂದಕ್ಕಿಂತ ಹೆಚ್ಚು ವಿವಾಹವಾಗಿರುವ ಪ್ರಕರಣಗಳು ಮುಂದೆ ಬಂದಿವೆ ಎಂದು ಅವರು ಹೇಳಿದರು.

1991ರಲ್ಲಿ ನಡೆದ ವಿಶ್ವ ಅಭಿವೃದ್ಧಿ ಸಮೀಕ್ಷೆ ಪ್ರಕಾರ ಮುಸ್ಲಿಮರಲ್ಲಿ ಒಂದಕ್ಕಿಂತ ಹೆಚ್ಚು ವಿವಾಹದ ಪ್ರಮಾಣ ಶೇ.5.80, ಹಿಂದೂಗಳಲ್ಲಿ ಶೇ.7.35, ಬುಡಕಟ್ಟು ಹಾಗೂ ಆದಿವಾಸಿಗಳಲ್ಲಿ ಶೇ.15 ಹಾಗೂ ಬೌದ್ಧ ಧರ್ಮೀಯರಲ್ಲಿ ಶೇ.8ರಷ್ಟಿದೆ ಎಂಬುದನ್ನು ತಿಳಿಸಿದೆ. ಆದರೂ ಈ ವಿಷಯದಲ್ಲಿ ಕೇವಲ ಮುಸ್ಲಿಮರನ್ನು ಗುರಿಯನ್ನಾಗಿಸಿ ಅಪಪ್ರಚಾರ ನಡೆಯುತ್ತಿದೆ ಎಂದು ವೌಲಾನ ಖಾಲಿದ್ ಸೈಫುಲ್ಲಾ ತಿಳಿಸಿದರು.

‘ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಗೆ ಸಾಂವಿಧಾನಿಕ ಸ್ಥಾನಮಾನ’ ವಿಷಯದ ಕುರಿತು ಮಾತನಾಡಿದ ಹೈದರಾಬಾದ್‌ನ ವೌಲಾನ ಇಕ್ಬಾಲ್ ಅಹ್ಮದ್ ಎಂಜಿನಿಯರ್, ಸಂವಿಧಾನದ ಕಲಂ 25ರ ಅನ್ವಯ ಅಲ್ಪಸಂಖ್ಯಾತರಿಗೆ ತಮ್ಮ ಧರ್ಮವನ್ನು ಅನುಸರಿಸಲು, ಪ್ರಚಾರ ಮಾಡಲು ಹಾಗೂ ತಮ್ಮ ಸಂಸ್ಕೃತಿಯನ್ನು ರಕ್ಷಣೆ ಮಾಡುವ ಅಧಿಕಾರ ನೀಡಲಾಗಿದೆ. ಆದರೆ, ಕೆಲವು ದುಷ್ಟ ಶಕ್ತಿಗಳು ಸಂವಿಧಾ ನವನ್ನು ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ ಎಂದರು.

ಇಂದಿನ ಪರಿಸ್ಥಿತಿಯಲ್ಲಿ ದೇಶ ಹಾಗೂ ಸಂವಿಧಾನವನ್ನು ಮುಸ್ಲಿಮರು ಮಾತ್ರ ರಕ್ಷಣೆ ಮಾಡಲು ಸಾಧ್ಯ. ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ಸಂವಿಧಾನದ ಬಹುಮುಖ್ಯ ಅಂಗ. ಮುಸ್ಲಿಮರ ಸಂಸ್ಕೃತಿ ಹಾಗೂ ಶರಿಯತ್ ರಕ್ಷಣೆಗೆ ಅಗತ್ಯ ಮಾರ್ಗದರ್ಶನ ಮಾಡುವ ಅಧಿಕಾರವು ನಮ್ಮ ಮಂಡಳಿಗೆ ಇದೆ. ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವ ಯತ್ನ ಎಂದಿಗೂ ಫಲಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಅಮೀರ್-ಎ-ಶರೀಯತ್ ವೌಲಾನ ಮುಹಮ್ಮದ್ ಅಶ್ರಫ್ ಅಲಿ ವಹಿಸಿದ್ದರು. ವೌಲಾನಾ ಮುಸ್ತಫಾ ರಿಫಾಯಿ, ಮುಫ್ತಿ ಅಬ್ದುಲ್ ಶುಕೂರ್, ಮುಂಬೈನ ವೌಲಾನ ಮುಹಮ್ಮದ್ ಎಜಾಝ್, ಕೇರಳದ ವೌಲಾನಾ ಅಬ್ದುಲ್ ಕರೀಮ್, ತಮಿಳುನಾಡಿನ ವೌಲಾನಾ ರೂಹುಲ್ ಹಖ್ ರಶಾದಿ, ಗೋವಾದ ವೌಲಾನಾ ಸಮಿ ಅಹ್ಮದ್, ಡೈಲಿ ಪಾಸ್ಬಾನ್ ಪ್ರಧಾನ ಸಂಪಾದಕ ಮುಹಮ್ಮದ್ ಉಬೇದುಲ್ಲಾ ಶರೀಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Write A Comment