ಕರ್ನಾಟಕ

ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟ: ಅಝ್ಗರ್ ಅಲಿ ಇಮಾಮ್ ಮೆಹ್ದಿ

Pinterest LinkedIn Tumblr

Jamiat_e_Ahle_Hadees-fiಬೆಂಗಳೂರು, ನ.29: ವಿಶ್ವಕ್ಕೆ ಕಂಟಕಪ್ರಾಯವಾಗಿರುವ ಭಯೋತ್ಪಾದನೆ ವಿರುದ್ಧ ಪ್ರತಿಯೊಬ್ಬರೂ ಸಂಘಟಿತ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದು ಅಖಿಲ ಭಾರತ ಜಮೀಯತ್-ಎ-ಅಹ್ಲೆ ಹದೀಸ್ ಪ್ರಧಾನ ಕಾರ್ಯದರ್ಶಿ ಅಝ್ಗರ್ ಅಲಿ ಇಮಾಮ್ ಮೆಹ್ದಿ ಕರೆ ನೀಡಿದ್ದಾರೆ.

ರವಿವಾರ ಶಿವಾಜಿನಗರದ ಚಾರ್‌ಮಿನಾರ್ ಮಸ್ಜಿದ್‌ನಲ್ಲಿ ಜಮೀಯತ್- ಎ-ಅಹ್ಲೆ ಹದೀಸ್ ರಾಜ್ಯ ಘಟಕ ಆಯೋಜಿಸಿದ್ದ ‘ಭಯೋತ್ಪಾದನೆ ವಿರುದ್ಧ ಹೋರಾಟ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಸ್ಲಾಮ್ ಧರ್ಮ ಹಾಗೂ ಭಯೋತ್ಪಾದನೆ ನಡುವೆ ಸಂಬಂಧವನ್ನು ಕಲ್ಪಿಸುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಶಾಂತಿ ಹಾಗೂ ಭ್ರಾತೃತ್ವವನ್ನು ಬೋಧಿಸುವ ಇಸ್ಲಾಮ್ ಎಂದಿಗೂ ಹಿಂಸೆಗೆ ಪ್ರಚೋದನೆ ನೀಡುವುದಿಲ್ಲ. ಆದರೆ, ಇಂದು ಐಸಿಎಸ್ ಸಂಘಟನೆಯ ಪೈಶಾಚಿಕ ಕೃತ್ಯಗಳನ್ನು ಇಸ್ಲಾಮ್‌ಗೆ ತಳುಕು ಹಾಕುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.

ಅಲ್ಲದೆ, ಮುಸ್ಲಿಮರಲ್ಲಿರುವ ಪಂಗಡಗಳ ನಡುವೆ ದ್ವೇಷವನ್ನು ಬಿತ್ತಿ ಸಮಾಜದಲ್ಲಿ ಅಪನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಶಾಂತಿ, ಸಹೋದರತೆ ಇಂದಿನ ತುರ್ತು ಅಗತ್ಯ. ಆದರೆ, ವಿಶ್ವದೆಲ್ಲೆಡೆ ನಡೆಯುತ್ತಿರುವ ಇಂತಹ ಚಟುವಟಿಕೆಗಳಿಂದ ಅಶಾಂತಿ ನೆಲೆಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸರ್ವ ಧರ್ಮೀಯರು ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತಬೇಕು. ಭಯೋತ್ಪಾದನೆ ಹಾಗೂ ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವುದು ಇಸ್ಲಾಮ್ ವಿರೋಧಿ ಕ್ರಮ ಎಂದು ಫತ್ವಾ ಹೊರಡಿಸಲಾಗಿದೆ. ಯಾವುದೇ ಕಾರಣಕ್ಕೂ ಹಿಂಸೆ ಹಾಗೂ ಭಯೋತ್ಪಾದನೆಯನ್ನು ನಮ್ಮ ಸಮಾಜ ಒಪ್ಪುವುದಿಲ್ಲ ಎಂದು ಅಝ್ಗರ್ ಅಲಿ ತಿಳಿಸಿದರು.

ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ಪ್ರಚೋದನಾತ್ಮಕ ಭಾಷಣಗಳು, ದೃಶ್ಯಾವಳಿಗಳು ಯುವ ಸಮುದಾಯವನ್ನು ಹಾದಿ ತಪ್ಪಲು ಪ್ರೇರೇಪಿಸುತ್ತವೆ. ಇಂತಹ ಜಾಗೃತಿ ಕಾರ್ಯಕ್ರಮಗಳು ಯುವಕರನ್ನು ಸರಿಯಾದ ಹಾದಿಯಲ್ಲಿ ಕರೆದೊಯ್ಯಲು ಸಹಕಾರಿಯಾಗುತ್ತವೆ ಎಂದು ಅವರು ಹೇಳಿದರು.

ದೇಶದ ಎಲ್ಲ ರಾಜ್ಯಗಳಲ್ಲಿಯೂ ಯುವಕರನ್ನು ಗಮನದಲ್ಲಿಟ್ಟುಕೊಂಡು ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಅದರ ಅಂಗವಾಗಿ ಬೆಂಗಳೂರು ನಗರ ವಿಭಾಗದ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿದೆ. ಇಲ್ಲಿ ಕೇವಲ ಬೆಂಗಳೂರಿಗರಷ್ಟೇ ಅಲ್ಲದೆ, ಮುಂಬೈ, ದಿಲ್ಲಿ, ಮಧ್ಯಪ್ರದೇಶದಿಂದಲೂ ಹಲವಾರು ಮಂದಿ ಆಗಮಿಸಿದ್ದಾರೆ ಎಂದು ಅಝ್ಗರ್ ಅಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಭಯೋತ್ಪಾದನೆ ವಿರುದ್ಧದ ಸಂದೇಶಗಳನ್ನು ಸಾರುವ ಭಿತ್ತಿಪತ್ರಗಳನ್ನು ಮಕ್ಕಳು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಜಮೀಯತ್-ಎ- ಅಹ್ಲೆೆ ಹದೀಸ್‌ನ ಪ್ರಮುಖರಾದ ಶೇಖ್ ಅಬ್ದುಲ್ ವಹಾಬ್, ವೌಲಾನ ಏಜಾಝ್ ಅಹ್ಮದ್ ನದ್ವಿ, ಮನ್ಸೂರ್ ಖುರೇಷಿ, ಖಾಸಿಮ್ ಎಜಾಝ್ ಖುರೇಷಿ, ಶಾ ವಲೀವುಲ್ಲಾ ಉಮ್ರಿ, ಚೌಧರಿ ರಿಝ್ವಿನ್ ಖುರೇಷಿ, ಅಬ್ದುಲ್ಲಾ ಮಅದನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Write A Comment