ಬೆಂಗಳೂರು, ನ.26: ಮಣಪ್ಪುರಂ ಗೋಲ್ಡ್ ಕಚೇರಿಯ ಬೀಗ ಮುರಿದು 1.5ಕೋಟಿ ಮೌಲ್ಯದ 3ಕೆಜಿಗೂ ಹೆಚ್ಚು ಚಿನ್ನಾಭರಣ ದೋಚಿರುವ ಘಟನೆ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೊಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಕಚೇರಿಗೆ ಮುಂಜಾನೆ 4ಗಂಟೆ ಸುಮಾರಿಗೆ ಬೀಗ ಮುರಿದು ನುಗ್ಗಿರುವ ಕಳ್ಳರು ವಿದ್ಯುತ್ ಕಡಿತಗೊಳಿಸಿ ಸಿಸಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿ ಕಚೇರಿಯಲ್ಲಿದ್ದ 3ಕೆಜಿಗೂ ಅಧಿಕ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಆಭರಣ ದೋಚಿದ್ದ ಕಳ್ಳರು ಕಚೇರಿಯ ಒಳಗೆಲ್ಲ ಖಾರದಪುಡಿಯನ್ನು ಎರಚಿ ಶ್ವಾನಗಳಿಗೆ ಮತ್ತು ಬೆರಳಚ್ಚು ತಜ್ಞರಿಗೆ ಯಾವುದೇ ಸುಳಿವು, ಗುರುತು ಸಿಗದಂತೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಸಿಬ್ಬಂದಿ ಎಂದಿನಂತೆ ಕೆಲಸಕ್ಕೆ ಬಂದಾಗ ಕಚೇರಿ ಬಾಗಿಲ ಬೀಗ ಒಡೆದಿರುವುದು ಕಂಡು ಒಳಗೆ ಪರಿಶೀಲಿಸಿದಾಗ ಚಿನ್ನಾಭರಣ ಕಳುವಾಗಿರುವುದು ಗೊತ್ತಾಗಿದೆ. ಮಡಿವಾಳ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
