ಕರ್ನಾಟಕ

ವ್ಯಪಾರಿಯನ್ನು ದೋಚಿದ್ದ ಐವರು ದರೋಡೆಕೋರರ ಸೆರೆ : 22 22.43 ಲಕ್ಷ ರೂ. ವಶ

Pinterest LinkedIn Tumblr

crime

ಬೆಂಗಳೂರು, ನ.23: ಕೇರಳಕ್ಕೆ ಸಿಗರೇಟ್ ಹಾಗೂ ಚಾಕೋಲೇಟ್ ವಸ್ತುಗಳನ್ನು ಕೊಂಡೊಯ್ಯಲು ಹಣದೊಂದಿಗೆ ಬಂದಿದ್ದ ವ್ಯಾಪಾರಿಯೊಬ್ಬರ ದರೋಡೆ ನಡೆಸಿ 23ಲಕ್ಷ ದೋಚಿದ್ದ 5ಮಂದಿ ದರೋಡೆಕೋರರನ್ನು ಹೆಣ್ಣೂರು ಪೊಲೀಸರು ಬಂಧಿಸಿ 22.43 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಮೋಹನ್(26), ಚಂದ್ರಶೇಖರ್(25), ಚೇತನ್‌ಕುಮಾರ್(26), ಅನಿಲ್‌ಕುಮಾರ್(32) ಮತ್ತು ನವೀನ್‌ಕುಮಾರ್ (26) ಬಂಧಿತ ದರೋಡೆಕೋರರು. ಹೊರಮಾವು ಗ್ರಾಮದಲ್ಲಿರುವ ವಿಜಯ್ ಏಜೆನ್ಸಿಯಲ್ಲಿ ಕೇರಳದ ವಾಸಿಯಾದ ಅನೀಫ್ ಎಂಬುವರು ಕೆಲಸ ಮಾಡುತ್ತಿದ್ದು, ನ.11ರಂದು ಬೆಳಗ್ಗೆ 9.10ರಲ್ಲಿ ಸಿಗರೇಟ್ ಹಾಗೂ ಚಾಕೋಲೇಟ್ ಖರೀದಿಸಲು ವಿಜಯ್‌ಏಜೆನ್ಸಿ ಗೋಡೋನ್ ಬಳಿ ಬಂದಿದ್ದರು.

ಸಿಗರೇಟ್ ಗೋಡೋನ್ ತೆರೆಯದ ಕಾರಣ ಅನಿಫ್ ಅವರು ತಮ್ಮ ಬುಲೆರೋ ಜೀಪನ್ನು ನಿಲ್ಲಿಸಿಕೊಂಡು ಕುಳಿತಿದ್ದರು. ಈ ವೇಳೆ ಐದಾರು ಮಂದಿ ಇದ್ದ ದರೋಡೆಕೋರರು ವಾಹನದ ಬಳಿ ಬಂದು ಅನೀಫ್ ಹಾಗೂ ಅವರ ಚಾಲಕ ಶಫಿ ಅವರ ಮುಖಕ್ಕೆ ಖಾರದಪುಡಿ ಹಾಗೂ ಪೆಪ್ಪರ್ ಸ್ಪ್ರೇ ಹಾಕಿ ಜೀಪಿನಲ್ಲಿದ್ದ 23ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಹೆಣ್ಣೂರು ಪೊಲೀಸರಿಗೆ ಅನಿಫ್ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಪೂರ್ವವಲಯದ ಅಪರ ಪೊಲೀಸ್ ಆಯುಕ್ತ ಹರಿಶೇಖರನ್ ಅವರು ನೀಡಿರುವ ಸಲಹೆ ಮೇರೆಗೆ ಉಪಪೊಲೀಸ್ ಆಯುಕ್ತ ಸತೀಶ್‌ಕುಮಾರ್ ಮಾರ್ಗದರ್ಶನದಲ್ಲಿ ಕೆ.ಆರ್.ಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭದ್ರಿನಾಥ್ ನೇತೃತ್ವದಲ್ಲಿ ಹೆಣ್ಣೂರು ಠಾಣೆ ಇನ್ಸ್‌ಪೆಕ್ಟರ್ ಲಕ್ಷ್ಮಿನಾರಾಯಣ್‌ಪ್ರಸಾದ್, ಪಿಎಸ್‌ಐಗಳಾದ ಪ್ರಶೀಲಾ, ಯಶವಂತ್‌ಕುಮಾರ್ ಹಾಗೂ ಸಿಬ್ಬಂದಿಗಳಾದ ಫೈರೋಜ್‌ಖಾನ್, ಧರ್ಮ, ಕಂಬಾರ, ರಾಮಚಂದ್ರ, ನರಸಿಂಹಮೂರ್ತಿ, ಸುರೇಶ್ ಹಾಗೂ ರೆಡ್ಡಿ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡು ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕೇರಳದ ಏಜೆನ್ಸಿಯವರಾದ ಅನೀಫ್ ಬೆಂಗಳೂರಿನಿಂದ ಕೇರಳಕ್ಕೆ ಸಿಗರೇಟ್ ಹಾಗೂ ಚಾಕೋಲೇಟ್ ವಸ್ತುಗಳನ್ನು ಕೊಂಡುಕೊಳ್ಳಲು ಕೆಲಸಗಾರನ ಜತೆಯಲ್ಲಿ ನಗರದ ಹೊರಮಾವು ಗ್ರಾಮದ ಸಿಗರೇಟ್ ಡೋನ್‌ಗೆ ಬರುವಾಗ ಎಂದಿನಂತೆ ಅನಿಲ್‌ಕುಮಾರ್‌ಗೆ ಮಾಹಿತಿ ನೀಡಿ ಸಿಗರೇಟ್‌ಗಳನ್ನು ಕೊಡಿಸುವಂತೆ ತಿಳಿಸುತ್ತಿದ್ದರು. ಅನಿಲ್‌ಕುಮಾರ್ ಸಿಗರೇಟ್ ಕೊಡಿಸಿ ಅನೀಫ್‌ರಿಂದ ಕಮಿಷನ್ ತೆಗೆದುಕೊಳ್ಳುತ್ತಿದ್ದನು. ಈ ವೇಳೆ ಅನಿಲ್‌ಕುಮಾರ್ ಅತಿಶೀಘ್ರದಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಸ್ನೇಹಿತರನ್ನು ಸೇರಿಸಿಕೊಂಡು ಅಂದು ಖಾರದಪುಡಿ ಹಾಗೂ ಪೆಪ್ಪರ್ ಸ್ಪ್ರೇ ಹಾಕಿ ಹಣ ದೋಚಿದ್ದಾಗಿ ವಿಚಾರಣೆ ವೇಳೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಕಾರ್ಯಾಚರಣೆ ವೇಳೆ ಮತ್ತೊಬ್ಬ ಆರೋಪಿ ಪ್ರಶಾಂತ್ ತಲೆ ಮರೆಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

Write A Comment