ಅಂತರಾಷ್ಟ್ರೀಯ

ಅಮೆರಿಕಾದಲ್ಲಿ ಕನ್ನಡಿಗರ ಕಲರವ…ಮೊಳಗಿದ ಕನ್ನಡದ ಕಹಳೆ

Pinterest LinkedIn Tumblr

am
ಬೆಂಗಳೂರು, ನ.22: ಅಮೆರಿಕಾದಲ್ಲಿ ಕನ್ನಡಿಗರ ಕಲರವ, ಇಲ್ಲಿನ ಆಯೋವಾ ರಾಜ್ಯದ ಸೀಡರ್ ರ್ಯಾ ಪಿಡ್ ನಗರದಲ್ಲಿ ಕನ್ನಡದ ಸಾಂಸ್ಕೃತಿಕ ಕಲೆ, ವೈಭವಗಳನ್ನು ಬಿಂಬಿಸುವ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ನಾಡಪ್ರೇಮವನ್ನು ಮೆರೆಯಲಾಯಿತು. ಅಮೆರಿಕದ ಅಯೋವಾ ರಾಜ್ಯದ ಸೀಡರ್ ರ್ಯಾ ಪಿಡ್ ನಗರದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಜಗದೀಶ್ ಮತ್ತು ಅವರ ಸ್ನೇಹಿತರು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಈ ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರೆಲ್ಲ ಒಂದೆಡೆ ಸೇರಿ ಕನ್ನಡದ ಸಾಂಸ್ಕೃತಿಕ ಇತಿಹಾಸವನ್ನು ಮೆರೆದರು. ನಾಡಿನ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ತೊಟ್ಟ ಇಲ್ಲಿನ ಕನ್ನಡಿಗರು ಕನ್ನಡದ ಬಾವುಟಗಳನ್ನು ಹಿಡಿದು, ಕನ್ನಡದ ಗೀತೆಗಳನ್ನು ಹಾಡಿ, ಕನ್ನಡದ ಕಂಪನ್ನು ಮೊಳಗಿಸಿದರು.

ಕುವೆಂಪು, ದಾ.ರಾ.ಬೇಂದ್ರೆ, ಶಿವರಾಮ್ ಕಾರಂತ್ ಮುಂತಾದ ಸಾಹಿತ್ಯ ದಿಗ್ಗಜರ ವಿವರಗಳನ್ನು ವೇದಿಕೆಯಲ್ಲಿ ಮಕ್ಕಳೇ ಅನಾವರಣಗೊಳಿಸಿದ್ದು ಅತ್ಯಂತ ವಿಶೇಷವಾಗಿತ್ತು. ಜಾನಪದ ಕಲೆಗಳಾದ ಕೋಲಾಟ, ಚೌಕಾಬರ ಗ್ರಾಮೀಣ ಸೊಗಡಿನ ಆಟಗಳನ್ನು ಆಡಿ ನಲಿದರು. ಮಕ್ಕಳು ದೊಡ್ಡವರೆನ್ನದೆ ಬೇಧ ಮರೆತು ನಾಡಿನ ಸಿರಿಯನ್ನು ಹಂಚಿಕೊಂಡರು. ದೂರದ ಅಮೆರಿಕದಲ್ಲಿ ನೆಲೆಸಿದ್ದರೂ ಕೂಡ ನಾಡಿನ ಸೊಗಡನ್ನು ಯಾರೂ ಮರೆತಿಲ್ಲ. ಸಾಂಪ್ರದಾಯಿಕ ಹಬ್ಬಗಳ ಆಚರಣೆಯನ್ನು ಜೊತೆ-ಜೊತೆಯಲ್ಲಿಯೇ ಮಾಡುವುದು ರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದು ವಾಡಿಕೆಯಾಗಿದೆ. ಅದರಂತೆ ಸೀಡರ್‌ರ್ಯಾ ಪಿಡ್ ನಗರದಲ್ಲಿ ಕನ್ನಡ ರಾಜ್ಯೋತ್ಸವವನ್ನು ನ.21 ರಂದು ಬೆಳಗ್ಗೆ 11 ರಿಂದ ಸಂಜೆ 5.30ರವರೆಗೆ ವಿಶೇಷವಾಗಿ ಆಚರಿಸಲಾಯಿತು. ಕನ್ನಡ ನಾಡಿನ ಕಹಳೆಯನ್ನು ಅಲ್ಲಿ ಮೊಳಗಿಸಲಾಯಿತು.

Write A Comment