ಕರ್ನಾಟಕ

ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಲು; ತಾಲೂಕು ಮಟ್ಟದಲ್ಲೇ ಉನ್ನತ ಶಿಕ್ಷಣ: ಸಚಿವ ಜಯಚಂದ್ರ

Pinterest LinkedIn Tumblr

jayachandra______________ಬೆಂಗಳೂರು, ನ. 21: ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಬರುವುದನ್ನು ತಪ್ಪಿಸಲು ತಾಲೂಕು ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ ನಾಡಿದ ಅವರು, ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 410 ಕಾಲೇಜು ಗಳಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ವರದಿ ನೀಡಲು ಸೂಚನೆ: ಕೆಲ ಕಾಲೇಜುಗಳಲ್ಲಿ 2ಸಾವಿರ ವಿದ್ಯಾರ್ಥಿ ಗಳಿದ್ದು, ಕೆಲ ಕಾಲೇಜುಗಳಲ್ಲಿ 40-50 ಮಂದಿ ವಿದ್ಯಾರ್ಥಿಗಳಿದ್ದರೆ, ಒಂದು ಕಾಲೇಜಿನಲ್ಲಿ ಕೇವಲ 5 ಮಂದಿ ವಿದ್ಯಾರ್ಥಿಗಳಿರುವ ಉದಾಹರಣೆಗಳಿವೆ. ನೂರಕ್ಕಿಂತ ಕಡಿಮೆ ವಿದ್ಯಾರ್ಥಿಗಳ ಕಾಲೇಜುಗಳು ಮತ್ತು ಅಲ್ಲಿನ ಸಿಬ್ಬಂದಿಯ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂಬಂಧ ವರದಿ ಬಂದ ಬಳಿಕ ಕಡಿಮೆ ವಿದ್ಯಾರ್ಥಿಗಳ ಕಾಲೇಜುಗಳ ಸಿಬ್ಬಂದಿಯನ್ನು ಬೇರೆ ಕಾಲೇಜುಗಳಿಗೆ ನಿಯೋಜನೆ ಮತ್ತು ವಿದ್ಯಾರ್ಥಿಗಳ ಹೊಂದಾಣಿಕೆಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸೋಮವಾರ ಚರ್ಚೆ: ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಪದಚ್ಯುತಿಗೆ ಸಂಬಂಧಿಸಿದಂತೆ ಈಗಾಗಲೇ ವಿಪಕ್ಷಗಳ ಸದಸ್ಯರು ಸ್ಪೀಕರ್‌ಗೆ ಮನವಿ ಮಾಡಿದ್ದು, ಆಡಳಿತ ಪಕ್ಷದ ಶಾಸಕರು ಪದಚ್ಯುತಿಗೆ ಬೆಂಬಲ ವ್ಯಕ್ತಪಡಿಸಿ ಪತ್ರವನ್ನು ನೀಡಲಿದ್ದಾರೆ. ಸೋಮವಾರ ಈ ಸಂಬಂಧ ಚರ್ಚೆ ನಡೆಯಲಿದೆ ಎಂದರು.

ಉಪ ಲೋಕಾಯುಕ್ತರ ಪದಚ್ಯುತಿಗೆ ಸಹಿ ಸಂಗ್ರಹಿಸಲಾಗುತ್ತಿದೆ ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ. ಶಾಸಕರಿಗೆ ಅತೃಪ್ತಿ ಇದ್ದರೆ ಅದನ್ನು ಚರ್ಚೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ ಎಂದ ಅವರು, ಉಪ ಲೋಕಾಯುಕ್ತ ಸ್ಥಾನಕ್ಕೆ ನ್ಯಾ.ಮಂಜುನಾಥ್ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಬೇರೊಬ್ಬರ ಹೆಸರು ಶಿಫಾರಸಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Write A Comment