ಕರ್ನಾಟಕ

ಗುಂಡೇಟಿಗೆ ನರಭಕ್ಷಕ ಹುಲಿ ಬಲಿ

Pinterest LinkedIn Tumblr

tigerಹೆಚ್.ಡಿ ಕೋಟೆ(ಮೈಸೂರು): ಹೆಚ್.ಡಿ ಕೋಟೆ ಗಡಿಭಾಗದ ಅರಣ್ಯದಂಚಿನ ಗ್ರಾಮಸ್ಥರಿಬ್ಬರನ್ನು ಕೊಂದು ಹಾಕಿದ್ದ ನರಹಂತಕ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹತ್ಯೆ ಮಾಡಿದ್ದಾರೆ.

ಇಂದು ನರಭಕ್ಷಕ ಹುಲಿಯನ್ನು ಜೀವಂತ ಸೆರೆ ಹಿಡಿಯಲು ಅಥವಾ ಕೊಲ್ಲುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ನಡೆಸಿತ್ತು. ಇದಕ್ಕಾಗಿ ಇಬ್ಬರು ಶಾರ್ಪ್ ಶೂಟರ್ ಹಾಗೂ ರಾಂಪುರ ಆನೆ ಶಿಬಿರದಿಂದ ಗಣೇಶ್, ಪಾರ್ಥಸಾರಥಿ ಮತ್ತು ರೋಹಿತ್ ಎಂಬ ಮೂರು ಸಾಕಾನೆಗಳನ್ನು ಬಳಸಿಕೊಳ್ಳಲಾಗಿತ್ತು.

ಎಚ್.ಡಿ ಕೋಟೆ ತಾಲೂಕಿನ ಹಾದನೂರು ಸಮೀಪದ ಪೊದೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಸಿಬ್ಬಂದಿ ವಾಚರ್ ಶಿವಕುಮಾರ್ ಮೇಲೆ ಹುಲಿ ದಾಳಿ ಮಾಡಿದೆ. ಈ ವೇಳೆ ಶಾರ್ಪ್ ಶೂಟರ್ ಗಳು ಹುಲಿ ಮೇಲೆ ಗುಂಡಿನ ದಾಳಿ ನಡೆಸಿ ಕೊಂದು ಹಾಕಿದ್ದಾರೆ. ಹುಲಿ ದಾಳಿಗೆ ಸಿಲುಕಿದ್ದ ವಾಚರ್ ಶಿವಕುಮಾರ್ ರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನಿಸಿದ್ದರು. ಆದರೆ ಹುಲಿ ದಿಢೀರ್ ದಾಳಿ ನಡೆಸಿದ್ದರಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಪಾಯ ಎದುರಾದರೆ ಹುಲಿಯನ್ನು ಗುಂಡಿಟ್ಟು ಹತ್ಯೆ ಮಾಡಲು ಹುಲಿ ಸಂರಕ್ಷಣಾ ಪ್ರಾಧಿಕಾರ ಅನುಮತಿ ನೀಡಿತ್ತು.

ಕೆಲ ದಿನಗಳ ಹಿಂದೆ ಹೆಡಿಯಾಲ ಗ್ರಾಮದ 50 ವರ್ಷದ ದನಗಾಹಿ ಶಿವಣ್ಣ ಹಾಗೂ 55 ವರ್ಷದ ದೇವಮ್ಮ ಎಂಬುವರು ಹುಲಿ ದಾಳಿಗೆ ಬಲಿಯಾಗಿದ್ದರು. ಇದೀಗ ಹುಲಿಯ ಸಾವಿನಿಂದ ಮೈಸೂರು ಸುತ್ತಮುತ್ತಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Write A Comment