ಕರ್ನಾಟಕ

8.59 ಲಕ್ಷ ಅನರ್ಹ ಪಡಿತರ ಚೀಟಿ ರದ್ದು: ದಿನೇಶ್‌ಗುಂಡೂರಾವ್

Pinterest LinkedIn Tumblr

Minister Dinesh Gundu Rao seen addressing during the Winter Assembly Session at Vidhan Soudha, in Bengaluru on Thursday 19th November 2015 Pics: www.pics4news.com

ಬೆಂಗಳೂರು, ನ.19: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಆ.15 ರಿಂದ ನ.13ರವರೆಗೆ ಒಟ್ಟು 8,59,736 ಅನರ್ಹ, ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ ಎಂದು ಸಚಿವ ದಿನೇಶ್‌ಗುಂಡೂರಾವ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಜೆ.ಟಿ.ಪಾಟೀಲ್ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಅನರ್ಹ ಹಾಗೂ ನಕಲಿ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ರದ್ದುಗೊಳಿಸುವ ಪ್ರಕ್ರಿಯೆಯು ನಿರಂತರವಾಗಿರುವುದರಿಂದ ಇದಕ್ಕೆ ಯಾವುದೇ ಅವಧಿಯನ್ನು ನಿಗದಿಗೊಳಿಸಿಲ್ಲ ಎಂದು ಹೇಳಿದ್ದಾರೆ.

ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಅರ್ಹರಿದ್ದ ಬಡವರ ಕಾರ್ಡುಗಳನ್ನು ಸಹಿತ ರದ್ದು ಪಡಿಸಲಾಗಿರುವುದು ಸರಕಾರದ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಅರ್ಹರ ಪಡಿತರ ಚೀಟಿ ರದ್ದಾಗಿದ್ದಲ್ಲಿ ಅಗತ್ಯ ದಾಖಲೆ ಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿದರೆ ಅದನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಮಾನತು ಪಡಿಸಿರುವ ಬಿಪಿಎಲ್ ಪಡಿತರ ಚೀಟಿದಾರರು ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿದ್ದಲ್ಲಿ ಅದನ್ನು ಪರಿಶೀಲಿಸಿ ಕೂಡಲೇ ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದಿನೇಶ್‌ಗುಂಡೂರಾವ್ ಹೇಳಿದ್ದಾರೆ.

‘2.55 ಲಕ್ಷ ಕ್ವಿಂಟಾಲ್ ಬೇಳೆಕಾಳು ವಶ’
ಬೆಂಗಳೂರು, ನ. 19: ರಾಜ್ಯದಲ್ಲಿ ಅಕ್ರಮ ದಾಸ್ತಾನು ಮಾಡಿರುವ ಮಳಿಗೆಗಳು, ಗೋದಾಮುಗಳ ಮೇಲೆ ನ.15ರ ವರೆಗೆ 1,351 ಅನಿರೀಕ್ಷಿತ ದಾಳಿಮಾಡಿ 228 ಪ್ರಕರಣ ದಾಖಲಿಸಿ, ಒಟ್ಟು 2.55ಲಕ್ಷ ಕ್ವಿಂಟಾಲ್ ಬೇಳೆಕಾಳು ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯ ಡಾ.ಸುಧಾಕರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇಶಾದ್ಯಂತ ಬೇಳೆಕಾಳುಗಳು ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಅಗತ್ಯ ವಸ್ತುಗಳ ಕಾಯ್ದೆಯಡಿ ಕ್ರಮಕ್ಕೆ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿರುವುದರಿಂದ ಸೆ.5ರಂದು ದಾಸ್ತಾನು ಮಿತಿ ಆದೇಶ ಹೊರಡಿಸಲಾಗಿದೆ.

ಮುಟ್ಟುಗೋಲಿಗೆ ಸರಕಾರವು ಯಾವುದೇ ನಿರೀಕ್ಷೆಯನ್ನು ಹಾಕಿಕೊಂಡಿಲ್ಲ ಹಾಗೂ ಯಾವುದೇ ಗುರಿ ನಿಗದಿಪಡಿಸಿರುವುದಿಲ್ಲ. ಸರಕಾರದ ಆದೇಶಗಳನ್ನು ಉಲ್ಲಂಘಿಸಿದ ಸಂಬಂಧದಲ್ಲಿ ವಶಪಡಿಸಿಕೊಂಡಿರುವ ಬೇಳೆಕಾಳುಗಳನ್ನು ಕೇಂದ್ರ ಸರಕಾರದ ನಿರ್ದೇಶನದಂತೆ ವಿಲೇಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಬೇಳೆಕಾಳು ಅಕ್ರಮ ದಾಸ್ತಾನುಗಾರರ ವಿರುದ್ಧ ಒಟ್ಟು 228 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಸಗಟು ಮಾರಾಟಗಾರರು ಕನಿಷ್ಠ 2 ಸಾವಿರ ಕ್ವಿಂಟಾಲ್ ಹಾಗೂ ಚಿಲ್ಲರೆ ವ್ಯಾಪಾರಸ್ಥರು ಕನಿಷ್ಠ 50 ಕ್ವಿಂಟಾಲ್ ಬೇಳೆ ಕಾಳು ದಾಸ್ತಾನಿಗೆ ಅವಕಾಶವಿದೆ ಎಂದ ಅವರು, ದಾಳಿ ಆರಂಭಗೊಂಡ ನಂತರ ಬೇಳೆಕಾಳು ದರದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ತಿಳಿಸಿದರು.

Write A Comment