ಕರ್ನಾಟಕ

ನಿಷೇಧಿತ ಔಷಧ ಮಾರಾಟ ಮಾಡಿದರೆ ಕ್ರಿಮಿನಲ್ ಮೊಕದ್ದಮೆ: ಯು.ಟಿ.ಖಾದರ್

Pinterest LinkedIn Tumblr

Health Minister UT Khader seen addressing during the Winter Assembly Session at Vidhan Soudha, in Bengaluru on Thursday 19th November 2015 Pics: www.pics4news.com

ಬೆಂಗಳೂರು, ನ.19: ರಾಜ್ಯದಲ್ಲಿ ನಿಷೇಧಿಸಲ್ಪಟ್ಟ ಹಾಗೂ ಅವಧಿ ಮೀರಿದ ಔಷಧಿಗಳನ್ನು ಮಾರಾಟ ಮಾಡುವುದನ್ನು ಆಡಳಿತಾತ್ಮಕ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ನ್ಯಾಯಾಲಯದಲ್ಲಿ ಹೂಡುವ ಮೂಲಕ ತಡೆಗಟ್ಟಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಈಶ್ವರ್ ಖಂಡ್ರೆ ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಔಷಧ ನಿಷೇಧಿಸುವ ಅಧಿಕಾರವು ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿದ್ದು, ರಾಜ್ಯ ಸರಕಾರಕ್ಕೆ ಆ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.

ಆದರೆ, ಕೇಂದ್ರ ಸರಕಾರ ನಿಷೇಧಿಸಿದ ಔಷಧಗಳ ತಯಾರಿಕೆ ಮತ್ತು ಮಾರಾಟವನ್ನು ತಡೆಗಟ್ಟುವ ಅಧಿಕಾರ ರಾಜ್ಯ ಸರಕಾರದ ವ್ಯಾಪ್ತಿಗೆ ಬರುತ್ತದೆ. ನಿಷೇಧಿಸಲ್ಪಟ್ಟ ಔಷಧ ವಹಿವಾಟಿಗೆ ಸಂಬಂಧಿಸಿದಂತೆ ಮೂರು ಹಾಗೂ ಅವಧಿ ಮೀರಿದ ಔಷಧ ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಕ್ರಿಮಿನಲ್ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿಯಿದೆ ಎಂದು ಖಾದರ್ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಔಷಧ ಮಾರಾಟ: ಕೇಂದ್ರ ಸರಕಾರವು ಆನ್‌ಲೈನ್‌ನಲ್ಲಿ ಔಷಧ ಮಾರಾಟದ ಬಗ್ಗೆ ನಿಯಂತ್ರಣ ಮಾಡುವ ಕುರಿತು ಮಾರ್ಗಸೂಚಿಗಳನ್ನು ರಚಿಸಿ ವರದಿ ಸಲ್ಲಿಸಲು ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತದ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ. ರಾಜ್ಯದ ಔಷಧ ನಿಯಂತ್ರಕರು ಈ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ಔಷಧ ಮಾರಾಟದಿಂದ ಗ್ರಾಹಕರಿಗೆ ಆಗುತ್ತಿರುವ ಅನನುಕೂಲತೆಗಳ ಬಗ್ಗೆ ಈ ಸಮಿತಿಯ ವರದಿ ಬಂದ ನಂತರವಷ್ಟೇ ತಿಳಿಯಲಿದೆ. ಔಷಧ ಅಂಗಡಿಗಳಲ್ಲಿ ಗಾಂಜಾ, ಚರಸ್, ಅಫೀಮು ತರಹದ ಮಾದಕ ವಸ್ತುಗಳು ಮಾರಾಟ ಮಾಡಿರುವ ಪ್ರಕರಣಗಳು ಈವರೆಗೆ ವರದಿಯಾಗಿಲ್ಲ ಎಂದು ಖಾದರ್ ತಿಳಿಸಿದ್ದಾರೆ.

Write A Comment