ಕರ್ನಾಟಕ

ಕಲಬುರಗಿ ಹಂತಕರನ್ನು ಪತ್ತೆ ಹಚ್ಚದಿರುವುದು ನಾಚಿಕೆಗೇಡು : ಸರ್ಕಾರಕ್ಕೆ ವಿಪಕ್ಷ ತರಾಟೆ

Pinterest LinkedIn Tumblr

kalಬೆಂಗಳೂರು,ನ.16- ಸಾಹಿತಿ ಡಾ.ಎಂ.ಎಂ.ಕಲಬುರ್ಗಿಯ ಹತ್ಯೆ ಮಾಡಿದ ಆರೋಪಿಗಳು ಇನ್ನೂ ಪತ್ತೆ ಮಾಡದ ಸರ್ಕಾರದ ವಿರುದ್ಧ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹರಿಹಾಯ್ದರು. ಸಂತಾಪ ಸೂಚಕ ಸಂದರ್ಭದಲ್ಲಿ ಮಾತನಾಡಿದ ಅವರು, ಡಾ.ಎಂ.ಎಂ.ಕಲಬುರ್ಗಿಯ ಹತ್ಯೆ ಮಾಡಿದ ಆರೋಪಿಗಳು ಇನ್ನೂ  ಸಿಕ್ಕಿಲ್ಲ. ಈ ಬಗ್ಗೆ ಸಣ್ಣ ಪುರಾವೆ ಅಥವಾ ಸಾಕ್ಷಿ ಕೂಡ ದೊರೆತಿಲ್ಲ. ಸರ್ಕಾರ ಉನ್ನತ ಮತ್ತು ಸಮರ್ಥ ಅಧಿಕಾರಿಗಳ ತಂಡ ರಚಿಸಿ, ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕಲಬುರ್ಗಿ ಹತ್ಯೆ ಕುರಿತು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅಸಹಿಷ್ಣುತೆ ಹೆಸರಿನಲ್ಲಿ ಸಾಹಿತಿಗಳು ಪ್ರಶಸ್ತಿಗಳನ್ನು ವಾಪಸು ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದರು. ನರೇಂದ್ರ ಧಾಹಬೋಲ್‌ಕರ್ ಮತ್ತು ಗೋವಿಂದ ಪನ್ಸರೆ ಅವರ ಹತ್ಯೆ ನಡೆಯಿತು.

ಮತ್ತು 1984ರಲ್ಲಿ ನಡೆದ ಸಿಖ್ ದಂಗೆಯಲ್ಲಿ ಸಾವಿರಾರು ಜನ ಮೃತಪಟ್ಟರು. ಆಗಲೇ ಸಾಹಿತಿಗಳು ಪ್ರಶಸ್ತಿ ವಾಪಸ್ ಕೊಡಬಹುದಿತ್ತು. ಈಗ ಕಲಬುರ್ಗಿಯ ಹತ್ಯೆಯಿಂದ ಸಾಹಿತಿಗಳು ಪ್ರಶಸ್ತಿಯನ್ನು ವಾಪಸ್ ನೀಡುತ್ತಿರುವುದು ಎಷ್ಟು ಸರಿ ಎಂದರು.

ಕಲಬುರಗಿ ಅವರ ನೇರ-ನಿಷ್ಠುರತೆಯೇ ಹತ್ಯೆಗೆ ಕಾರಣವಾಗಿದೆ ಎಂದು ತಿಳಿಸಿದ ಶೆಟ್ಟರ್, ಸಾಹಿತ್ಯ ಲೋಕಕ್ಕೆ ಕಲಬುರ್ಗಿ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು. ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ 800 ರೈತರ ಆತ್ಮಕ್ಕೆ ಮತ್ತು ಪ್ಯಾರಿಸ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ 150ಕ್ಕೂ ಹೆಚ್ಚು ಜನರ ಆತ್ಮಗಳಿಗೆ ಶಾಂತಿಕೋರಿ ಸಂತಾಪ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.

ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, 50 ವರ್ಷಗಳ ಹಿಂದೆ ರಾಷ್ಟ್ರಕವಿ ಕುವೆಂಪು ಅವರು ವಾಲ್ಮೀಕಿ ರಾಮಾಯಣವನ್ನು ಸಂಪೂರ್ಣ ವಿಶ್ಲೇಷಣೆ ಮಾಡಿ, ‘ರಾಮಾಯಣ ದರ್ಶನಂ’ ಕೃತಿ ಬರೆದರು. ರಾಮಾಯಣದಲ್ಲಿ ಶಂಭೂಕ ಎಂಬ ಶೂದ್ರ ತಪಸ್ಸು ಮಾಡಿದ್ದರಿಂದ ತನ್ನ ಮಗ ಸತ್ತಿದ್ದಾನೆಂದು ಬ್ರಾಹ್ಮಣನು ಶ್ರೀರಾಮನಿಗೆ ದೂರು ನೀಡುತ್ತಾನೆ. ಈ ದೂರು ಆಧರಿಸಿ ಶ್ರೀರಾಮಚಂದ್ರ ಶಂಭೂಕನ ತಲೆ ಕತ್ತರಿಸುತ್ತಾನೆ ಎಂದು ಬರೆದಿದೆ. ಆದರೆ, ಕುವೆಂಪು ಅವರ ರಾಮಾಯಣ ದರ್ಶನಂನಲ್ಲಿ ರಾಮನ ಬ್ರಹ್ಮಾಸ್ತ್ರ ಶಂಭೂಕ ನನ್ನು ಮೂರು ಸುತ್ತು ಹಾಕಿ ನಿಲ್ಲಿಸಿತು ಎಂದು ಬರೆದಿದೆ. ಇದು 50 ವರ್ಷಗಳ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿತ್ತು.  ಈ ಬಗ್ಗೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಮಾಡಿದ ಟೀಕೆಗೆ ಕುವೆಂಪು ಅವರೇ ಉತ್ತರ ಕೊಟ್ಟಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕಲಬುರ್ಗಿಯ ಹತ್ಯೆಯಂತಹ ಘಟನೆ ದೇಶದಲ್ಲಿ ಹೆಚ್ಚಾಗಿದೆ. ಈ ಬಗ್ಗೆ ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ವಾಪಸು ನೀಡುತ್ತಿರುವುದು ಗಂಭೀರವಾದ ವಿಷಯ ಮತ್ತು ತಾತ್ವಿಕ ಹೋರಾಟ ಎಂದು ಸಾಹಿತಿಗಳ ಪ್ರಶಸ್ತಿ ವಾಪಸಿಗೆ ದತ್ತ ಬೆಂಬಲ ವ್ಯಕ್ತಪಡಿಸಿದರು. ಕೆಜೆಪಿ ಶಾಸಕ ಡಿ.ಆರ್.ಪಾಟೀಲ್, ಕಾಂಗ್ರೆಸ್ ಶಾಸಕ ಜೆ.ಆರ್.ಲೋಬೋ ಸೇರಿದಂತೆ ಅನೇಕ ಶಾಸಕರು ಮೃತರ ಗುಣಗಾನ ಮಾಡಿದರು.

Write A Comment