ಕರ್ನಾಟಕ

ಮಲೆನಾಡಾದ ಸಿಲಿಕಾನ್ ಸಿಟಿ ಬೆಂಗಳೂರು

Pinterest LinkedIn Tumblr

bangaloreಬೆಂಗಳೂರು, ನ.16-  ದೀಪಾವಳಿಯ ಸಂಭ್ರಮದ ಜಾಲಿಯಲ್ಲಿದ್ದ ನಗರದ ಜನತೆಗೆ ಈಗ ಮತ್ತೆ ವರುಣನ ಸಿಂಚನ  ಶುರುವಾಗಿದೆ. ಸಿಲಿಕಾನ್ ಸಿಟಿ ಎಂದು ಹೆಸರಾಗಿರುವ ಬೆಂಗಳೂರಿನಲ್ಲಿ  ಮಡಿಕೇರಿಯಂತಹ  ವಾತಾವರಣವು ಸೃಷ್ಟಿಯಾಗಿದ್ದು  ಜನರು ಮನೆಯಿಂದ ಹೊರಗಡೆ ಬರಲು ಕೂಡ ಆಗದಂತಹ ಪರಿಸ್ಥಿತಿ ಉಂಟಾಗಿದೆ.  ನಿನ್ನೆಯಷ್ಟೇ  ವೀಕೆಂಡ್ ಜಾಲಿ  ಮೂಡ್‌ನ ಗಾಢನಿದ್ರೆಯಿಂದ ಎದ್ದ ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆ, ಕಾಲೇಜುಗಳಿಗೆ ಸಿದ್ಧಪಡಿಸುವುದೇ ಒಂದು ಹರಸಾಹಸವಾಯಿತು. ಹಾಗೋ ಹೀಗೋ ಮಕ್ಕಳನ್ನು ಸಿದ್ಧಪಡಿಸಿದರೂ ಮನೆಯ ಹೊರಗೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಯ ಕಾಟ ಬೇರೆ. ವಾಹನ ವ್ಯವಸ್ಥೆಯಿರುವ  ಶಾಲಾ ಮಕ್ಕಳೇನೋ  ಒಲ್ಲದ ಮನಸ್ಸಿನಿಂದಲೇ ಶಾಲೆಯತ್ತ ಹೆಜ್ಜೆ ಹಾಕಿದರೆ, ಉಳಿದ ಮಕ್ಕಳು ಮಳೆಯಲ್ಲೇ ಛತ್ರಿ, ಜರ್ಕಿನ್, ರೇನ್‌ಕೋರ್ಟ್‌ಗಳ ಮೊರೆ ಹೋದರೂ ಪುಸ್ತಕಗಳು ನೆಂದು  ಹೋಗಿ ತರಗತಿಗಳಲ್ಲೇ  ಹರಸಾಹಸ ಪಡುವಂತಾಯಿತು.

ಸಿಲಿಕಾನ್ ಸಿಟಿ ಎಂದು ಕರೆಸಿಕೊಂಡರು ಮೊಣಕಾಲುದ್ದ ಹೊಂಡಗಳಿಂದ ದಿನ ನಿತ್ಯ ಪ್ರಯಾಸ ಪಟ್ಟು ಕಚೇರಿಗಳಿಗೆ ತೆರಳುತ್ತಿದ್ದವರಿಗಂತೂ ಮಳೆಯಲ್ಲಿ ರಸ್ತೆ ಯಾವುದೋ…? ಗುಂಡಿ ಯಾವುದೋ..? ಎಂಬುದನ್ನು ತಿಳಿಯದೇ ಹರಸಾಹಸ ಪಡುವಂತಾಯಿತು.

ನಗರದ ಪ್ರಮುಖ ರಸ್ತೆಗಳಾದ ಎಂ.ಜಿ.ರೋಡ್,  ಟ್ಯಾನರಿ ರಸ್ತೆ , ಕೆ.ಆರ್. ರೋಡ್, ರಾಜ್‌ಕುಮಾರ್ ರಸ್ತೆಗಳು ಸೇರಿದಂತೆ ಮತ್ತಿತರ ಕಡೆ  ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ನಿಗದಿತ ಸಮಯಕ್ಕೆ ಬಸ್‌ಗಳು ಬಾರದಿರುವುದರಿಂದ ಬಸ್ ನಿಲ್ದಾಣಗಳಲ್ಲಿ ಕಾಯುತ್ತಿದ್ದ ಪ್ರಯಾಣಿಕರು  ನಿಂತು ನಿಂತು ಹೈರಾಣಾಗಿ ಹೋದರು.

ಕ್ರಿಕೆಟ್‌ಗೂ ಮಳೆ ಕಾಟ:  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ನಡೆಯುತ್ತಿರುವ  ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯಕ್ಕೂ ಕೂಡ ಮಳೆ ಕಾಟ ಶುರುವಾಗಿದ್ದು ಕ್ರೀಡಾ ಪ್ರೇಮಿಗಳಿಗೂ ವರುಣ ನಿರಾಸೆ ಮೂಡಿಸಿದ್ದಾನೆ.

Write A Comment