ಕರ್ನಾಟಕ

‘ಇಟ್ಟಗುರಿ-ದಿಟ್ಟಹೆಜ್ಜೆ’ ಪುಸ್ತಕ ಲೋಕಾರ್ಪಣೆ; ‘2018ರ ನಂತರವೂ ಸಿದ್ದರಾಮಯ್ಯನವರೇ ಸಿಎಂ’: ದಿನೇಶ್ ಗುಂಡೂರಾವ್

Pinterest LinkedIn Tumblr

President of Kannda Pusthaka Pradhikara Dr.Banjagere Jayaprakash releases the Book on CM Siddaramaiah  " Ittaguri - dhitta Hejje" at Gandhi Bhavan in Bengaluru on Sunday. Chandrashekara Kambara, Minister Dinesh Gundurao,and others are seen. - KPN ###  Book on CM Siddaramaiah

ಬೆಂಗಳೂರು, ನ. 15: ಬಂಡಾಯ, ಜನಪರ ಕಾಳಜಿಯಿಂದ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2018ರ ನಂತರ ಮುಂದಿನ 5 ವರ್ಷದವರೆಗೂ ಅವರೇ ಸಿಎಂ ಆಗಲಿದ್ದಾರೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ರವಿವಾರ ನಗರದ ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದ, ತುಮಕೂರು ಮಹದೇವಯ್ಯ ಮತ್ತು ಪತ್ರಕರ್ತ ಜಿ.ಜಿ.ನಾಗರಾಜ ಅವರ ಮುಖ್ಯಮಂತ್ರಿ ಸಿದ್ದರಾಮಯ್ಯರ ರಾಜಕೀಯ ಬದುಕು, ಜನಪರ ಯೋಜನೆಗಳ ‘ಇಟ್ಟಗುರಿ-ದಿಟ್ಟಹೆಜ್ಜೆ’ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈಗಿನ ಎರಡೂವರೆ ವರ್ಷ ಅವಧಿಯನ್ನು ಪೂರ್ಣಗೊಳಿಸಿ, 2018ರ ನಂತರ ಮುಂದಿನ 5 ವರ್ಷಗಳ ಅವಧಿವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ. ಈ ಬಗ್ಗೆ ಯಾವುದೇ ಸಂಶಯವಿಲ್ಲ. ಅಲ್ಲದೆ, ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುತ್ತಿದ್ದು, ಜನಪರ ಯೋಜನೆಗಳ ವಿಷಯದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಚಿವ ದಿನೇಶ್ ಬಣ್ಣಿಸಿದರು. ರಾಜಕಾರಣಿಗಳು ಬೇರೆ ಬೇರೆ ಕಾರಣಗಳಿಂದ ಜನಪ್ರಿಯರಾಗುವುದು ಸಾಮಾನ್ಯವಾಗಿದೆ. ಆದರೆ, ಸಂಘಟನೆಯ ಹಿನ್ನೆಲೆಯಲ್ಲಿ ಜನಪ್ರಿಯತೆ ಗಳಿಸಿರುವ ಸಿದ್ದರಾಮಯ್ಯ ಎಲ್ಲರ ಮೆಚ್ಚುಗೆಯ ನೇರ-ನುಡಿಯ ನಾಯಕರಾಗಿದ್ದಾರೆ. ರಾಜ್ಯದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಕನಸು ಕಂಡಿದ್ದಾರೆ ಎಂದರು. ಯಾರದೋ ಸಲಹೆ ಕೇಳಿ ಅಥವಾ ರಾಜಕೀಯ ಲಾಭದ ಉದ್ದೇಶವನ್ನಿಟ್ಟುಕೊಂಡು ಸಿದ್ದರಾಮಯ್ಯ ಯೋಜನೆ ರೂಪಿಸಲು ಮುಂದಾಗಿಲ್ಲ. ಅವರ ಅನುಭವದ ಆಧಾರದ ಮೇಲೆ ಯೋಜನೆ ರೂಪುಗೊಳ್ಳುತ್ತಿವೆ ಎಂದ ಅವರು, ಬದ್ಧತೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಧಾರಾಳವಾಗಿದೆ. ಅವರ ಕನಸುಗಳು ಒಂದೊಂದಾಗಿ ಈಡೇರುತ್ತಿವೆ ಎಂದ ದಿನೇಶ್, ಹೈಕಮಾಂಡ್ ವಿರುದ್ಧ ಮಾತನಾಡಿದ ಬಂಜಗೆರೆ ಜಯಪ್ರಕಾಶ್‌ರಿಗೆ ಪರೋಕ್ಷವಾಗಿ ಉತ್ತರ ನೀಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಸಾಹಿತಿಗಳನ್ನೂ ಪೋಷಿಸುತ್ತಿಲ್ಲ. ಅವರ ಬಗ್ಗೆ ನಮ್ಮಲ್ಲಿ ಅಭಿಮಾನವಿದೆ. ಹೀಗಾಗಿಯೇ ಅವರನ್ನು ಬೆಂಬಲಿಸಿ ಮಾತನಾಡುತ್ತೇವೆ. ಇದನ್ನೇ ಗುರಿ ಮಾಡಿಕೊಂಡು ಕೆಲ ಕಿಡಿಗೇಡಿಗಳು ಸಿದ್ದರಾಮಯ್ಯ ಪರವಾಗಿ ಮಾತನಾಡುವವರನ್ನು ಟೀಕಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಕ್ತವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅಸಹಿಷ್ಣುತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಶಾಂತಿ ಸೌಹಾರ್ದತೆಗೆ ಪರ್ಯಾಯವಾಗಿದೆ ಎಂದು ಅಭಿಪ್ರಾಯಿಸಿದರು. ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರ ಸೂಕ್ತ ದಾರಿಯಲ್ಲಿ ಸಾಗುತ್ತಿದೆ. ಆದರೆ, ಕೆಲವರು ಅಭಿವೃದ್ಧಿ ಕೆಲಸಗಳಲ್ಲಿ ವೇಗವಿಲ್ಲ ಎಂದು ಹೇಳುತ್ತಿರುವುದು ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನದ ಆಶಯದಂತೆ ಸರ್ವರಿಗೂ ಸಮಬಾಳು ಸಮಪಾಲು ಎಂಬ ಧ್ಯೇಯ ವಾಕ್ಯವನ್ನು ಸಾಧಿಸಲು ಒಂದೊಂದೇ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಜನಪರ ಯೋಜನೆಗಳು ಬರಲಿವೆ. ರಾಜಕೀಯ ಜೀವನದ ಮೊದಲ ಹಂತದಲ್ಲಿ ಸರ್ಪದ ಎಡೆಯ ಕೆಳಗಿನ ಕಪ್ಪೆಯಂತೆ ಸಿದ್ದರಾಮಯ್ಯ ಕಷ್ಟಪಟ್ಟರು. ಬಳಿಕ ಕಾಂಗ್ರೆಸ್ ಪಕ್ಷ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ನಂತರ ಸಂಪೂರ್ಣ ಸಹಕಾರ ಸಿಕ್ಕಿದೆ ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದಾರೆ. ಇನ್ನಷ್ಟು ಕೆಲಸಗಳನ್ನು ಅವರಿಂದ ನಿರೀಕ್ಷಿಸಬಹುದು ಎಂದು ಅಭಿಪ್ರಾಯಪಟ್ಟರು.

Write A Comment