ಅಂತರಾಷ್ಟ್ರೀಯ

ಫ್ರಾನ್ಸ್ ಭೀಕರ ಹತ್ಯಾಕಾಂಡದಲ್ಲಿ ಭಾಗವಹಿಸಿದ್ದ ಐಎಸ್‌ಐಎಸ್ ನ ಹಲವು ಉಗ್ರರ ಬಂಧನ

Pinterest LinkedIn Tumblr

franceಪ್ಯಾರಿಸ್/ಬ್ರುಸೆಲ್ಸ್, ನ.15-ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಭೀಕರ ಹತ್ಯಾಕಾಂಡದಲ್ಲಿ ಭಾಗವಹಿಸಿದ್ದ ಐಎಸ್‌ಐಎಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್-ಸಿರಿಯಾ) ಭಯೋತ್ಪಾದಕರ ಬಗ್ಗೆ ಸುಳಿವು ಲಭ್ಯವಾಗುತ್ತಿದ್ದಂತೆಯೇ ಜಾಗೃತರಾದ ಬೆಲ್ಜಿಯಂ, ಗ್ರೀಕ್ ಮತ್ತು ಫ್ರಾನ್ಸ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹಲವು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಇದೇ ವೇಳೆ ಉಗ್ರರ ಸ್ವರ್ಗವಾಗಿರುವ ಯೂರೋಪಿನ ಐತಿಹಾಸಿಕ ದೇಶ ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್‌ನಲ್ಲಿ ಆ ರಾಷ್ಟ್ರದ ಪೊಲೀಸರು, ಪ್ಯಾರಿಸ್ ಹತ್ಯಾಕಾಂಡಕ್ಕೆ ಸಂಬಂಧಪಟ್ಟಂತೆ ಹಲವರನ್ನು ಬಂಧಿಸಿದ್ದಾರೆ. ಪ್ಯಾರಿಸ್ ನಿವಾಸಿ ಉಗ್ರ ಓಮರ್ ಇಸ್ಮಾಯಿಲ್ ಮೊಸ್ತೇಫಾಯ್‌ನ ಪತ್ತೆಯ ನಂತರ ಪೊಲೀಸರು ಅವನ ತಂದೆ ಹಾಗೂ 34 ವರ್ಷದ ಸಹೋದರ ಇಬ್ಬರನ್ನು ಬಂಧಿಸಿ ತನಿಖೆಗೆ ಗುರಿಪಡಿಸಿದ್ದಾರೆ.

ಇಸ್ಮಾಯಿಲ್ ಐಎಸ್ ಸಂಘಟನೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಎಂಬುದೂ ಪತ್ತೆಯಾಗಿದೆ. ವಿಶೇಷವೆಂದರೆ ಈ ಕೃತ್ಯದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಭಯೋತ್ಪಾದಕ ಕೃತ್ಯದಲ್ಲಿ ಉತ್ತಮ ತರಬೇತು ಪಡೆದವರಾಗಿದ್ದಾರೆ.
ಈ ಮಧ್ಯೆ ಶುಕ್ರವಾರ ರಾತ್ರಿ ಉಗ್ರರ ದಾಳಿ ನಡೆದ ಫುಟ್ಬಾಲ್ ಸ್ಟೇಡಿಯಂನ ಬಟಾಕ್ಲಾನ್ ಸಂಗೀತ ಮಂದಿರದ ಹೊರಗಡೆ ಉಗ್ರರು ನಿಲ್ಲಿಸಿದ್ದ ಬೆಲ್ಜಿಯಂ ನೋಂದಣಿ ಹೊಂದಿದ ಕಾರೊಂದು ಪತ್ತೆಯಾಗಿದ್ದು ಅದರಲ್ಲಿ ಸಿರಿಯಾದ ಐಸಿಸ್ ಭಯೋತ್ಪಾದಕ ಸಂಘಟನೆಯ ಗುರುತಿನ ಚೀಟಿಯೊಂದು ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪೈಕಿ ಒಬ್ಬ ಉಗ್ರ ಪ್ಯಾರಿಸ್‌ನವನೇ ಎಂಬುದು ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಓಮರ್ ಇಸ್ಮಾಯಿಲ್ ಮೊಸ್ತೇಫಾಯ್ (29) ಎಂದು ಗುರುತಿಸಲಾಗಿದೆ.

ಅಥೆನ್ಸ್ ವರದಿ :
ಈ ಮಧ್ಯೆ ಶುಕ್ರವಾರದ ದಾಳಿಯಲ್ಲಿ ಭಾಗವಹಿಸಿ ನಂತರ ತಾವೇ ಸ್ಫೋಟಿಸಿಕೊಂಡು ಸಾವನ್ನಪ್ಪಿದ ಉಗ್ರರ ಪೈಕಿ ಇಬ್ಬರು ಗ್ರೀಸ್ ವಲಸಿಗರು ಎಂದು ತಮ್ಮ ಹೆಸರುಗಳನ್ನು ನೋಂದಾಯಿಸಿ ಕೊಂಡಿರುವ ಬಗ್ಗೆ ಮಾಹಿತಿ ಪಡೆದಿರುವ ಅಥೆನ್ಸ್ ಪೊಲೀಸರು, ಇಬ್ಬರು ಉಗ್ರರ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಐರೋಪ್ಯ ರಾಷ್ಟ್ರಗಳಿಗೆ ವಲಸೆ ಬರುತ್ತಿರುವ ನಿರಾಶ್ರಿತರ ಪಾಸ್‌ಪೋರ್ಟ್ ಮತ್ತಿತರೆ ದಾಖಲೆಗಳನ್ನು ಪರಿಶೀಲಿಸುವಂತೆ ಪ್ಯಾರಿಸ್ ಪೊಲೀಸರು ಗ್ರೀಕ್ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈಗಾಗಲೇ ಒಬ್ಬನ ಬಳಿಯಿದ್ದ ಒಂದು ಪಾಸ್‌ಪೋರ್ಟ್ ಪ್ಯಾರಿಸ್ ಪೊಲೀಸರಿಗೆ ದೊರೆತಿದೆ. ಒಬ್ಬ ಉಗ್ರ ಕಳೆದ ಅಕ್ಟೋಬರ್‌ನಲ್ಲಿ ಗ್ರೀಕ್‌ನ ಲೆರೋಸ್ ದ್ವೀಪದಲ್ಲಿ ನಿರಾಶ್ರಿತನೆಂದು ತನ್ನ ಹೆಸರನ್ನು ನೋಂದಾಯಿಸಿರುವುದು ಗೊತ್ತಾಗಿದೆ ಎಂದು ಗ್ರೀಕ್‌ನ ನಾಗರಿಕ ರಕ್ಷಣೆ ಖಾತೆ ಸಚಿವ ನಿಕೋಸ್ ಟೊಸ್ನಾಸ್ ಹೇಳಿದ್ದಾರೆ. ಒಟ್ಟಾರೆ, ಫ್ರಾನ್ಸ್, ಬೆಲ್ಜಿಯಂ ಹಾಗೂ ಗ್ರೀಕ್ ರಾಷ್ಟ್ರಗಳ ಪೊಲೀಸರು, ಉಗ್ರ ನಿಗ್ರಹ ಪಡೆಗಳೊಂದಿಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಉಗ್ರರ ಮೂಲವನ್ನೇ  ಕಿತ್ತೆಸೆಯಲು ಸಕಲ ಸಿದ್ಧತೆ ನಡೆಸಿದ್ದಾರೆ.

ಬ್ರುಸೆಲ್ಸ್ ವರದಿ :
ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್ ಪೊಲೀಸರು ಫ್ರಾನ್ಸ್ ದಾಳಿಗೆ ಸಂಬಂಧಿಸಿದ ಮೂವರನ್ನು ಬಂಧಿಸಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಬಂಧಿತರಾಗಿರುವ ಮೂವರು ಐಸಿಸ್ ಸಂಘಟನೆಯ ಬೆಂಬಲಿಗರೆಂಬುದು ಸ್ಪಷ್ಟವಾಗಿದೆ ಎಂದು ಹೇಳಿರುವ ಪೊಲೀಸರು, ಬಂಧಿತ ಉಗ್ರರ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಬ್ರುಸೆಲ್ಸ್‌ನ ಮೋಲೆನ್‌ಬೀಕ್ ಜಿಲ್ಲೆಯಲ್ಲಿ ಈ ಮೂವರನ್ನು ಬಂಧಿಸಲಾಗಿದೆ. ಈ ಮೂವರ ನೆರವಿನಿಂದಲೇ ಉಗ್ರರು ದಾಳಿಗೆ ಬಳಸಿ ಬಟಾಕ್ಲಾನ್ ಸಭಾಂಗಣದ ಹೊರಗೆ ನಿಲ್ಲಿಸಿದ್ದ ಕಾರನ್ನು ಬಾಡಿಗೆಗೆ ಪಡೆದಿದ್ದರೆಂದು ಗೊತ್ತಾಗಿದೆ. ಈ ವಿಷಯವನ್ನು ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್ ಮೈಖೇಲ್ ಸ್ಪಷ್ಟಪಡಿಸಿದ್ದಾರೆ.

ಪೂರ್ವಯೋಜಿತ : ಹೊಲ್ಲಾಂಡೆ
ಪ್ಯಾರಿಸ್‌ನಲ್ಲಿ ನಡೆಸಿರುವ 150ಕ್ಕೂ ಹೆಚ್ಚು ಜನರ ಮಾರಣಹೋಮದ ರೂವಾರಿಗಳು ಐಸೀಸ್ ಉಗ್ರರೇ ಎಂಬುದು ಬಹುತೇಕ ಖಚಿತವಾಗಿದ್ದು, ಈ ಕೃತ್ಯವನ್ನು ಪೂರ್ವಯೋಜಿತವಾಗಿ ನಡೆಸಲಾಗಿದೆ. ಅಷ್ಟೇ ಅಲ್ಲ ಈ ದಾಳಿಯ ರೂಪುರೇಷೆಗಳನ್ನು ಸಿರಿಯಾ-ಇರಾಕ್ ಅಥವಾ ಫ್ರಾನ್ಸ್‌ನ ಹೊರಗೆ (ವಿದೇಶ) ಸಿದ್ಧಪಡಿಸಲಾಗಿದೆ. ಆದರೆ ಇದಕ್ಕಾಗಿ ಪ್ಯಾರಿಸ್‌ನ ಸ್ಥಳೀಯರ ನೆರವು ಪಡೆಯಲಾಗಿದೆ ಎಂದು ಸ್ವತಃ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ ಗುಪ್ತಚರ ಮಾಹಿತಿ  ಉಲ್ಲೇಖಿಸಿ ಹೇಳಿದ್ದಾರೆ.

Write A Comment